ʻಟಾಕ್ಸಿಕ್ʼ ರಿಲೀಸ್ ಹೊತ್ತಿನಲ್ಲಿ ʻಸಿನಿಮಾವನ್ನು ಸೀರಿಯಸ್ ಆಗಿ ತಗೋಬೇಡಿʼ ಎಂದಿದ್ದೇಕೆ ನಟ ಯಶ್? ಅಸಲಿ ಸತ್ಯ ಇಲ್ಲಿದೆ!
ʻರಾಕಿಂಗ್ ಸ್ಟಾರ್ʼ ಯಶ್ ಅವರು ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಯುವಜನರಿಗೆ ಜೀವನದ ಮಹತ್ವ ತಿಳಿಸಿದರು. ಸೋಲುಗಳಿಗೆ ಜಗತ್ತನ್ನು ದೂಷಿಸದೆ ಸ್ವಂತ ಶ್ರಮದಿಂದ ಕನಸು ನನಸಾಗಿಸಲು ಕರೆ ನೀಡಿದ ಅವರು, ಸಿನಿಮಾವನ್ನು ಅತಿಯಾಗಿ ಪರಿಗಣಿಸಬಾರದು ಎಂದರು.
-
ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಭಾಗವಹಿಸಿದ್ದ ಯಶ್ ಅವರು ವಿದ್ಯಾರ್ಥಿ ಸಮೂಹಕ್ಕೆ ದೊಡ್ಡ ಕನಸುಗಳನ್ನು ಕಾಣುವಂತೆ ಮತ್ತು ಗುರಿ ಸಾಧನೆಗಾಗಿ ಅಪಾರವಾಗಿ ಶ್ರಮಿಸುವಂತೆ ಕರೆ ನೀಡಿದರು. ಜೊತೆಗೆ, ಸೋಲು ಎದುರಾದಾಗ ಜಗತ್ತನ್ನು ದೂಷಿಸುವ ಬದಲು ಅದರ ಹೊಣೆಯನ್ನು ತಾವೇ ಹೊರಬೇಕು ಎಂದು ತಿಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ, "ಸಿನಿಮಾವನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ" ಎಂದೂ ಯಶ್ ಹೇಳಿದರು.
ಯಶ್ ಹೀಗೆ ಹೇಳಿದ್ದು ಏಕೆ?
'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಅದರ "ಬೋಲ್ಡ್" ಕಂಟೆಂಟ್‌ಗಾಗಿ ವಿವಾದಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಯಶ್ ಅವರ ಮಾತುಗಳು ಎಚ್ಚರಿಕೆಯ ಸಂದೇಶವೇ ಎನ್ನುವ ಪ್ರಶ್ನೆ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಹೇಳಿಕೆಯನ್ನು ಚಿತ್ರದ ಕಂಟೆಂಟ್‌ಗೆ ಜೋಡಿಸಿ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.
ನಾವೇನೂ ಅಂಥ ವಿಶೇಷ ಸಾಧನೆ ಮಾಡಿಲ್ಲ
"ಸಿನಿಮಾವನ್ನು ಎಂದಿಗೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ನಾವೇನೂ ಅಂಥ ವಿಶೇಷ ಸಾಧನೆ ಮಾಡಿಲ್ಲ. ಜೀವನದಲ್ಲಿ ನೀವು ಏನಾಗಬೇಕೆಂದು ಬಯಸುತ್ತೀರೋ, ಅದನ್ನು ಕನಸು ಕಾಣಿ ಮತ್ತು ಅದಕ್ಕಾಗಿ ಶ್ರಮಿಸಿ. ನಿಮಗೆ ಗೌರವ ಹಾಗೂ ಯಶಸ್ಸು ಸಿಗುತ್ತದೆ. ಯಾವುದರಲ್ಲಾದರೂ ಸೋತರೆ ಜಗತ್ತನ್ನು ದೂಷಿಸಬೇಡಿ, ಅದಕ್ಕೆ ನಾವೇ ಜವಾಬ್ದಾರರು" ಎಂದು ಯಶ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಆದರೆ, ಯಶ್ ಎಲ್ಲಿಯೂ 'ಟಾಕ್ಸಿಕ್' ಚಿತ್ರವನ್ನು ಉಲ್ಲೇಖಿಸಿ ಈ ಮಾತು ಹೇಳಿಲ್ಲ; ಬದಲಿಗೆ ಸಾಮಾನ್ಯವಾಗಿ ಸಿನಿಮಾಗಳನ್ನು ಅತಿಯಾಗಿ ಗಂಭೀರವಾಗಿ ಪರಿಗಣಿಸಬೇಡಿ, ಬದುಕು ಅದಕ್ಕಿಂತ ದೊಡ್ಡದು ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಅಭಿಮಾನಿಗಳ ವಾದ.
ಇದೇ ಕಾರ್ಯಕ್ರಮದಲ್ಲಿ ನಡೆದಿತ್ತು ದುರ್ಘಟನೆ!
ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೃಹತ್ ಸೌಂಡ್‌ಬಾಕ್ಸ್ ಸೆಟಪ್ ಜನರ ಮೇಲೆ ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಯಶ್ ವೇದಿಕೆಯ ಮೇಲೆ ನಿಂತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆಯೇ ಈ ಅವಘಡ ಸಂಭವಿಸಿತ್ತು.
ತಕ್ಷಣವೇ ಎಚ್ಚೆತ್ತ ಯಶ್, ತಮ್ಮ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿದರು. "ಅವರೆಲ್ಲ ಆರಾಮಾಗಿದ್ದಾರಾ? ದಯವಿಟ್ಟು ಒಮ್ಮೆ ಪರಿಶೀಲಿಸಿ" ಎಂದು ವೇದಿಕೆಯಿಂದಲೇ ಆಯೋಜಕರು ಹಾಗೂ ಭದ್ರತಾ ತಂಡಕ್ಕೆ ಸೂಚಿಸಿದರು. ಬಳಿಕ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ʻಟಾಕ್ಸಿಕ್ʼ ಹೀರೋ ಯಶ್ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ ಬಾಲಿವುಡ್ ನಟ ಅನುಪಮ್ ಖೇರ್!
ಹಲವು ಭಾಷೆಗಳಲ್ಲಿ ʻಟಾಕ್ಸಿಕ್ʼ ಸಿನಿಮಾ ರಿಲೀಸ್
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ನಿರ್ಮಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಸಿನಿಮಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿದೆ.