ಕರಾವಳಿ ಸೊಗಡಿನ ‘ಮ್ಯಾರೇಜ್ ಪಾರ್ಟಿ’ ಚಿತ್ರದ ʻಗಲಾಟೆ...ʼ ವಿಡಿಯೋ ಸಾಂಗ್ ರಿಲೀಸ್; ಮದುವೆ ಮನೆಯಲ್ಲಿ ಎಣ್ಣೆ ಪಾರ್ಟಿ ಗಮ್ಮತ್ತು!
Marriage Party Movie: ಕರಾವಳಿ ಸೊಗಡಿನ ʻಮ್ಯಾರೇಜ್ ಪಾರ್ಟಿʼ ಚಿತ್ರದ ‘ಗಲಾಟೆ’ ವಿಡಿಯೋ ಗೀತೆಯನ್ನು ಚಿತ್ರತಂಡ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿದೆ. ಚಯನ್ ಶೆಟ್ಟಿ ನಿರ್ದೇಶನದಲ್ಲಿ ಕರಾವಳಿಯ ಜನಪ್ರಿಯ ಕಲಾವಿದರ ಸಮಾಗಮದಲ್ಲಿ ಮೂಡಿಬಂದಿರುವ ಈ ಚಿತ್ರವು ಡಿಸೆಂಬರ್ 4ರಂದು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.
-
ಚಯನ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ‘ಮ್ಯಾರೇಜ್ ಪಾರ್ಟಿ’ ಚಿತ್ರದ ‘ಗಲಾಟೆ’ ವಿಡಿಯೋ ಸಾಂಗ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಮದುವೆಯ ಮನೆಯ ಸಂಭ್ರಮ ಹಾಗೂ ಮೋಜು-ಮಸ್ತಿಯನ್ನು ಕಟ್ಟಿಕೊಡುವ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡಿನ ಬಿಡುಗಡೆ ಪ್ರಯುಕ್ತ ಚಿತ್ರತಂಡ ಮೊದಲ ಅಧಿಕೃತ ಪತ್ರಿಕಾಗೋಷ್ಠಿಯನ್ನು ಈಚೆಗೆ ಹಮ್ಮಿಕೊಂಡಿತ್ತು.
ಈ ಸಮಾರಂಭದಲ್ಲಿ ನಿರ್ದೇಶಕ ಚಯನ್ ಶೆಟ್ಟಿ, ನಿರ್ಮಾಪಕ ಸಂತೋಷ್ ವಿ, ಹಿರಿಯ ಕಲಾವಿದರಾದ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ಪುಷ್ಪರಾಜ್ ಬೋಳಾರ್, ಮೈಮ್ ರಾಮದಾಸ್, ಕೊರಿಯೋಗ್ರಾಫರ್ ಮುರುಗ, ಭೀಮ್ ರಾವ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಜ್ಯೋತಿ ಶೆಟ್ಟಿ, ನಮಿತಾ ಕಿರಣ್, ಅನನ್ಯಾ, ರಕ್ಷಿತಾ ಸೇರಿದಂತೆ ಇಡೀ ತಾರಾಗಣ ಭಾಗಿಯಾಗಿತ್ತು.
ಹಲವು ಆಸಕ್ತಿದಾಯಕ ತಿರುವುಗಳಿವೆ
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ, "ಇದು ಶೀರ್ಷಿಕೆಯೇ ಹೇಳುವಂತೆ ಒಂದು ವಿವಾಹದ ಸುತ್ತ ನಡೆಯುವ ಕಥಾಹಂದರವನ್ನು ಹೊಂದಿದೆ. ಆದರೆ ಇದು ಕೇವಲ ಮದುವೆಗೆ ಮಾತ್ರ ಸೀಮಿತವಾಗಿರದೇ, ಚಿತ್ರಕಥೆಯಲ್ಲಿ ಹಾರರ್ ಅಂಶಗಳು ಸೇರಿದಂತೆ ಹಲವು ಆಸಕ್ತಿದಾಯಕ ತಿರುವುಗಳಿವೆ. ನಿರ್ಮಾಪಕ ಸಂತೋಷ್ ವಿ ಅವರ ಸಂಪೂರ್ಣ ಬೆಂಬಲದಿಂದಾಗಿ ಚಿತ್ರ ಹಾಗೂ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ" ಎಂದು ಮಾಹಿತಿ ಹಂಚಿಕೊಂಡರು.
ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನಿರ್ಮಾಪಕ ಸಂತೋಷ್ ವಿ ಮಾತನಾಡಿ, "ನಿರ್ಮಾಪಕನಾಗಿ ಇದು ನನ್ನ ಮೊದಲ ಅನುಭವ. ಮೊದಲ ಹೆಜ್ಜೆಯಲ್ಲೇ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುವ ಚಯನ್ ಶೆಟ್ಟಿ ಅವರಂತಹ ಪ್ರತಿಭಾವಂತ ನಿರ್ದೇಶಕರು ಸಿಕ್ಕಿರುವುದು ಹೆಮ್ಮೆಯ ವಿಷಯ. ಕಲಾವಿದರು ಮತ್ತು ತಂತ್ರಜ್ಞರ ಅದ್ಭುತ ಸಹಕಾರದಿಂದ ಸಿನಿಮಾ ಚೆನ್ನಾಗಿ ಬಂದಿದ್ದು, ಪ್ರೇಕ್ಷಕರು ಚಿತ್ರವನ್ನು ಬೆಂಬಲಿಸಬೇಕು" ಎಂದು ವಿನಂತಿಸಿದರು.
ಪ್ರಕಾಶ್ ತುಮಿನಾಡು ಭರ್ಜರಿ ಡ್ಯಾನ್ಸ್
ಮದುವೆ ಮನೆಯಲ್ಲಿ ನಡೆಯುವ ‘ಎಣ್ಣೆ ಪಾರ್ಟಿ’ಯ ಗಮ್ಮತ್ತನ್ನು ಒಳಗೊಂಡಿರುವ ಈ ‘ಗಲಾಟೆ’ ಹಾಡಿನಲ್ಲಿ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು ಹಾಗೂ ಮೈಮ್ ರಾಮದಾಸ್ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿಗೆ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿದ್ದಾರೆ. ಗಾಯಕ ಪ್ರಣವಮ್ ಸಸಿ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ಕಿರುತೆರೆ ರಿಯಾಲಿಟಿ ಶೋಗಳ ಖ್ಯಾತಿಯ ಮುರುಗ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಚಿತ್ರೀಕರಣದ ವೇಳೆ ನಡೆದ ತಮಾಷೆಯ ಕ್ಷಣಗಳನ್ನು ನೆನಪಿಸಿಕೊಂಡ ನಟರಾದ ನವೀನ್ ಡಿ ಪಡೀಲ್ ಮತ್ತು ಪ್ರಕಾಶ್ ತುಮಿನಾಡು, ಸಿನಿಮಾ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಡಿಸೆಂಬರ್ 4ರಂದು ರಿಲೀಸ್
‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ಖ್ಯಾತಿಯ ವಿನೀತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ದೀಪಕ್ ರೈ, ರಘು ಪಾಂಡೇಶ್ವರ, ರಾಧಾಕೃಷ್ಣ, ಪಿ.ಡಿ. ಸತೀಶ್ ಸೇರಿದಂತೆ ಕರಾವಳಿಯ ಪ್ರಮುಖ ಹಾಸ್ಯ ಕಲಾವಿದರ ದಂಡೇ ಇದೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಶ್ರೀಕಾಂತ್ ಛಾಯಾಗ್ರಹಣ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ ಹಾಗೂ ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಅವರ ಸಾಹಿತ್ಯವಿದೆ. ಸದ್ಯ ಚಿತ್ರದ ಎಲ್ಲಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಡಿಸೆಂಬರ್ 4ರಂದು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.