ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲ ಅಗ್ನಿ ಪರೀಕ್ಷೆಯಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಾಸ್‌; ವಿಧಾನ ಪರಿಷತ್‌ನ 5 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದ್ದೇಗೆ?

Karnataka MLC Polls: ರಾಜ್ಯದ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅಚ್ಚರಿ ಎಂಬಂತೆ ಆಡಳಿತಾರೂಢ ಕಾಂಗ್ರೆಸ್‌ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಆ ಮೂಲಕ ಮುಖ್ಯಮಂತ್ರಿಯಾದ ಬಳಿಕ ಎದುರಾದ ಮೊದಲ ಅಗ್ನಿ ಪರೀಕ್ಷೆಯಲ್ಲೇ ಡಿ.ಕೆ. ಶಿವಕುಮಾರ್‌ ಕಮಾಲ್‌ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಡಿಕೆಸಿ ರಣತಂತ್ರ ಹೆಣೆದ ರೀತಿ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಕಾಂಗ್ರೆಸ್‌ ವಿಧಾನ ಪರಿಷತ್‌ನ 5 ಸ್ಥಾನಗಳನ್ನು ಗೆದ್ದಿದ್ದೇಗೆ?

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jun 18, 2026 9:41 PM

ಬೆಂಗಳೂರು, ಜೂ. 18: ಭಾರಿ ಕುತೂಹಲ ಮೂಡಿಸಿದ ರಾಜ್ಯದ ವಿಧಾನ ಪರಿಷತ್‌ ಚುನಾವಣೆಯಲ್ಲಿ (Karnataka MLC Polls) ಆಡಳಿತಾರೂಢ ಕಾಂಗ್ರೆಸ್‌ (Congress) ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಆ ಮೂಲಕ ಮುಖ್ಯಮಂತ್ರಿಯಾದ ಬಳಿಕ ಎದುರಾದ ಮೊದಲ ಅಗ್ನಿ ಪರೀಕ್ಷೆಯಲ್ಲೇ ಡಿ.ಕೆ. ಶಿವಕುಮಾರ್‌ (DK Shivakumar) ಕಮಾಲ್‌ ಮಾಡಿದ್ದಾರೆ. 7 ಸ್ಥಾನಗಳ ಪೈಕಿ ಕಾಂಗ್ರೆಸ್‌ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿದೆ. ಅಡ್ಡ ಮತದಾನದ ಹಿನ್ನೆಲೆಯಲ್ಲಿ ಏಕೈಕ ಜೆಡಿಎಸ್‌ ಅಭ್ಯರ್ಥಿ ಸೋತಿದ್ದು, ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಸದಸ್ಯ ಬಲದ ಆಧಾರದಲ್ಲಿ 4 ಸ್ಥಾನಗಳಲ್ಲಿ ಜಯಗಳಿಸಬೇಕಿದ್ದ ಕಾಂಗ್ರೆಸ್‌ 5 ಸ್ಥಾನಗಳಲ್ಲಿ ಗೆದ್ದಿದ್ದು, ಇದರ ಹಿಂದೆ ಡಿಕೆಶಿ ಅವರ ರಣತಂತ್ರ ಕೆಲಸ ಮಾಡಿದೆ.

ಕಾಂಗ್ರೆಸ್‌ನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರ, ಬಿ.ಎಸ್‌. ಶಿವಣ್ಣ, ಪಿ.ವಿ. ಮೋಹನ್ ಮತ್ತು ವಿನಯ್ ಕಾರ್ತಿಕ್ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ ಸುದ್ದಿಗೋಷ್ಠಿ:



ಡಿ.ಕೆ. ಗೆಲುವಿನ ತಂತ್ರ

ಅಡ್ಡ ಮತದಾನದ ಭೀತಿ ಹಿನ್ನೆಲೆಯಲ್ಲಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರು ಗುರುವಾರ ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನದಲ್ಲಿ ಪಾಲ್ಗೊಂಡರು. ಮೇಲ್ಮನೆಗೆ ಸ್ಪರ್ಧಿಸಿರುವ ಐವರು ಅಭ್ಯರ್ಥಿಗಳಿಗೆ ಮತ ಹಾಕುವ ಶಾಸಕರಿಗಾಗಿ 5 ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಯಾರು, ಯಾವ ಅಭ್ಯರ್ಥಿ ಪರ ಮತ ಚಲಾಯಿಸಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತು. ಅದರ ಪ್ರಕಾರ ಅವರು ವಿಧಾನಸೌಧಕ್ಕೆ ಪ್ರತ್ಯೇಕ ಬಸ್‌ನಲ್ಲಿ ತೆರಳಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ಗೆ ಭಾರಿ ಮುಖಭಂಗ; ಡಿ.ಕೆ. ಶಿವಕುಮಾರ್‌ ರಣತಂತ್ರದಿಂದ 5 ಸ್ಥಾನ ಗೆದ್ದ ಕಾಂಗ್ರೆಸ್‌

ತರಬೇತಿ

ವಿಧಾನ ಪರಿಷತ್‌ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್‌ ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದರು. ಶಾಸಕರಿಗೆ ಪ್ರತ್ಯೇಕ ತರಬೇತಿಯನ್ನೂ ನೀಡಿದ್ದರು. ಉದಾಹರಣೆಗೆ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಅವರಿಗೆ ಯಾವ ಶಾಸಕರು ಮತ ಹಾಕಬೇಕು, ವಿನಯ್ ಕಾರ್ತಿಕ್‌ಗೆ ಯಾರು ಮತ ಚಲಾವಣೆ ಮಾಡಬೇಕು ಎಂದು ತಂಡ ಮಾಡಿ, ಅದರ ಪ್ರಕಾರವೇ ಪ್ರತ್ಯೇಕ ಬಸ್‌ನಲ್ಲಿ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಒಂದು ವೇಳೆ ಅಡ್ಡ ಮತದಾನವಾದರೆ ಯಾರು ಮಾಡಿದ್ದಾರೆ ಎಂದು ತಿಳಿಯಲು ಪ್ರತ್ಯೇಕ ಬಸ್‌ಗಳಲ್ಲಿ ಶಾಸಕರನ್ನು ಕರೆದೊಯ್ಯಲು ಡಿ.ಕೆ. ಶಿವಕುಮಾರ್‌ ಯೋಜನೆ ರೂಪಿಸಿದ್ದರು. ಅದರಂತೆ ಗುರುವಾರ ಸಮಯಕ್ಕೆ ಸರಿಯಾಗಿ ಬಿಡದಿ ಬಳಿಯ ಖಾಸಗಿ ರೆಸಾರ್ಟ್‌ನಿಂದ ಶಾಸಕರು ವಿಧಾನಸೌಧಕ್ಕೆ ಆಗಮಿಸಿದರು. ಬುಧವಾರ ರೆಸಾರ್ಟ್‌ನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಎದುರಿನಲ್ಲೇ ಅಣಕು ಮತದಾನ ನಡೆಸಿ, ಎಲ್ಲ ಶಾಸಕರಿಗೂ ಮತದಾನ ಹೇಗೆ ಮಾಡಬೇಕು ಎಂದು ತರಬೇತಿ ನೀಡಲಾಗಿತ್ತು. ಇದೆಲ್ಲವೂ ಕಾಂಗ್ರೆಸ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗಿದೆ.

11 ಮೈತ್ರಿ ಶಾಸಕರಿಂದ ಅಡ್ಡ ಮತದಾನ

ಅಚ್ಚರಿ ಎಂದರೆ ಬಿಜೆಪಿಯ 4 ಮತ್ತು ಜೆಡಿಎಸ್‌ನ 7 ಶಾಸಕರು ಸೇರಿ ಒಟ್ಟು 11 ಶಾಸಕರು ಅಡ್ಡ ಮತದಾನ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳನ್ನು ಪಡೆಯಷ್ಟೇ ಶಕ್ತರಾಗಿದ್ದಾರೆ (ಗೆಲುವಿಗೆ 28 ಮತ ಅಗತ್ಯ). ಗುಪ್ತ ಮತದಾನವಾಗಿದ್ದರಿಂದ ಅಡ್ಡ ಮತದಾನ ಮಾಡಿದ ಶಾಸಕರು ಯಾರೆಲ್ಲ ಎನ್ನುವುದನ್ನು ಕಂಡು ಹಿಡಿಯುವುದೇ ಪಕ್ಷದ ನಾಯಕರಿಗೆ ದೊಡ್ಡ ಸವಾಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.