Vishnuvardhan: ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ
Vishnuvardhan: ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿಷ್ಣುವರ್ಧನ್ ಅಮೃತ ಮಹೋತ್ಸವ -
ಡಾ. ವಿಷ್ಣುವರ್ಧನ್ (Vishnuvardhana) ಅವರ 75ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಚಿತ್ರರಂಗ ಒಗ್ಗೂಡಿ ಸಂಭ್ರಮಿಸಿದ ಉದಾಹರಣೆ
ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಇಡೀ ಚಿತ್ರರಂಗ ಒಗ್ಗೂಡಿ ಸಂಭ್ರಮಿಸಿದ ಉದಾಹರಣೆಗಳು ವಿರಳವಾಗಿವೆ. ಈ ಹಿನ್ನೆಲೆಯಲ್ಲಿ ಅವರ 75ನೇ ಜನ್ಮವರ್ಷವನ್ನು ಅಮೃತಮಹೋತ್ಸವವಾಗಿ ಆಚರಿಸುವ ಮೂಲಕ ಅವರ ಸಾಧನೆಗಳ ಮೇಲೆ ಮತ್ತೆ ಮತ್ತೆ ಬೆಳಕು ಚೆಲ್ಲಲು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಲು ಇದು ಮಹತ್ವದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Samantha Ruth Prabhu: ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಾಹಿತ್ಯ ಕ್ಷೇತ್ರದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ದಿನವಿಡೀ ನಡೆಯಲಿರುವ ಈ ಮಹೋತ್ಸವದಲ್ಲಿ ಡಾ. ವಿಷ್ಣುವರ್ಧನ್ ಅವರ ಜೀವನ ಮತ್ತು ಸಾಧನೆಗಳನ್ನು ಅನಾವರಣಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಅಭಿಮಾನಿಗಳಿಗೆ ಇದು ವಿಶಿಷ್ಟ ಮತ್ತು ರೋಮಾಂಚನಕಾರಿ ಅನುಭವವಾಗಲಿದೆ ಎಂದರು.
ನಂತರ ಮಾತನಾಡಿದ ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಅವರು, ಡಾ. ವಿಷ್ಣುವರ್ಧನ್ ಅವರ ನೆನಪುಗಳನ್ನು ಸದಾ ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಅವರೊಂದಿಗೆ ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಟ-ನಟಿಯರು, ನಿರ್ಮಾಪಕರು ಹಾಗೂ ತಂತ್ರಜ್ಞರನ್ನು ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ನಟ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸುಂದರ್ ರಾಜ್ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸಮಸ್ತ ಚಿತ್ರರಂಗ ಸಕ್ರಿಯವಾಗಿ ಭಾಗವಹಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ದ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಯಿತು.