ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ʻಟಾಕ್ಸಿಕ್ʼಗೆ ಎಷ್ಟನೇ ಸ್ಥಾನ? ಯಶ್ ಮುಂದೆ ಮಂಡಿಯೂರಿದ ʻಜವಾನ್ʼ, ʻಆದಿಪುರುಷ್ʼ!
ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾವು ಮೊದಲ ದಿನವೇ ವಿಶ್ವಾದ್ಯಂತ ಸುಮಾರು ₹150 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅಭೂತಪೂರ್ವ ದಾಖಲೆ ಬರೆದಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಶಾರುಖ್ ಖಾನ್ ಅವರ ಜವಾನ್ ಹಾಗೂ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ.
-
ʻರಾಕಿಂಗ್ ಸ್ಟಾರ್ʼ ಯಶ್, ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮುಂತಾದವರು ಅಭಿನಯಿಸಿರುವ ʻಟಾಕ್ಸಿಕ್ʼ ಸಿನಿಮಾವು ಬಾಕ್ಸ್ ಆಫೀಶ್‌ನಲ್ಲಿ ಅಬ್ಬರದ ಗಳಿಕೆ ಮಾಡಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಮೊದಲ ದಿನ ವಿಶ್ವಾದ್ಯಂತ ಈ ಸಿನಿಮಾವು ಸುಮಾರು 150 ಕೋಟಿ ರೂ. ಹಣವನ್ನು ಬಾಚಿಕೊಂಡಿದೆ. ಈ ವರ್ಷ ತೆರೆಕಂಡ ಭಾರತದ ಸಿನಿಮಾಗಳಲ್ಲಿ ಇದು ಎರಡನೇ ಅತಿ ಹೆಚ್ಚು ಗಳಿಕೆ ಆಗಿದೆ. ಮೊದಲ ಸ್ಥಾನದಲ್ಲಿ ದುರಂಧರ್ 2 ಸಿನಿಮಾ (200+ ಕೋಟಿ ರೂ.) ಇದೆ.
ದಾಖಲೆ ಬರೆದ ʻಟಾಕ್ಸಿಕ್ʼ
ವಿಶ್ವಾದ್ಯಂತ ಒಟ್ಟು ಗಳಿಕೆಯ ಪಟ್ಟಿಯಲ್ಲಿ, 'ಟಾಕ್ಸಿಕ್' ಸಿನಿಮಾ ಮೊದಲ ದಿನ 150 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ 'ದೇವರ' (142.02 ಕೋಟಿ ರೂ.), 'ಆದಿಪುರುಷ್' (128.08 ಕೋಟಿ ರೂ.) ಮತ್ತು 'ಜವಾನ್' (129.13 ಕೋಟಿ ರೂ.) ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ. ಆದರೆ 'ಸಲಾರ್' (158.12 ಕೋಟಿ ರೂ.), 'ಕೆಜಿಎಫ್ 2' (159 ಕೋಟಿ ರೂ.), 'ಕಲ್ಕಿ' (177.72 ಕೋಟಿ ರೂ.), 'ಬಾಹುಬಲಿ 2' (217 ಕೋಟಿ ರೂ.), 'ಆರ್‌ಆರ್‌ಆರ್' (223 ಕೋಟಿ ರೂ.), 'ಧುರಂಧರ್ 2' (226.60 ಕೋಟಿ ರೂ.) ಹಾಗೂ 'ಪುಷ್ಪ 2' (275.01 ಕೋಟಿ ರೂ.) ಚಿತ್ರಗಳ ಮೊದಲ ದಿನದ ಗಳಿಕೆಯನ್ನು ದಾಟಲು ಸಾಧ್ಯವಾಗಲಿಲ್ಲ.
ಸದ್ಯ ಮೊದಲ ದಿನದ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ʻಟಾಕ್ಸಿಕ್ʼ ಸಿನಿಮಾವು 8ನೇ ಸ್ಥಾನದಲ್ಲಿದೆ. ಯಶ್ ಅವರದ್ದೇ ʻಕೆಜಿಎಫ್ 2ʼ ಸಿನಿಮಾ 6ನೇ ಸ್ಥಾನಲ್ಲಿದೆ.
ಸಿನಿಮಾ - ಮೊದಲ ದಿನದ ವಿಶ್ವಾದ್ಯಂತ ಗಳಿಕೆ
ಪುಷ್ಪ 2- ₹275.01 ಕೋಟಿ
ಧುರಂಧರ್ 2- ₹226.60 ಕೋಟಿ
ಆರ್‌ಆರ್‌ಆರ್ - ₹223 ಕೋಟಿ
ಬಾಹುಬಲಿ 2- ₹217 ಕೋಟಿ
ಕಲ್ಕಿ- ₹177.72 ಕೋಟಿ
ಕೆಜಿಎಫ್ 2- ₹159 ಕೋಟಿ
ಸಲಾರ್- ₹158.12 ಕೋಟಿ
ಟಾಕ್ಸಿಕ್- ₹150 ಕೋಟಿ
ದೇವರ- ₹142.02 ಕೋಟಿ
ಜವಾನ್- ₹129.13 ಕೋಟಿ
ಆದಿಪುರುಷ್- ₹128.08 ಕೋಟಿ
ʻಟಾಕ್ಸಿಕ್ʼ ಚಿತ್ರಕ್ಕೆ ಹೇಗಿದೆ ರೆಸ್ಪಾನ್ಸ್?
ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮುಂತಾದವರು ನಟಿಸಿರುವ ʻಟಾಕ್ಸಿಕ್ʼ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಭಾರಿ ಕಮಾಯಿ ಮಾಡಿರುವುದು ವಿಶೇಷ.
ʻನಿನ್ನ ಬಹುನಿರೀಕ್ಷಿತ ಟಾಕ್ಸಿಕ್...ʼ; ಮಗ ಯಶ್ ನಟಿಸಿರುವ ಸಿನಿಮಾಗೆ ತಾಯಿ ಪುಷ್ಪಾ ವಿಶ್ ಮಾಡಿದ್ದು ಹೀಗೆ!
ಯಶ್ ಅವರ ಅದ್ಭುತ ನಟನೆ, ಅದ್ದೂರಿ ಮೇಕಿಂಗ್ ಹಾಗೂ ಶ್ರೀಮಂತ ಛಾಯಾಗ್ರಹಣ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಅದೇ ರೀತಿ ಚಿತ್ರದ ಒನ್‌ಲೈನ್ ಕಥೆ ಉತ್ತಮವಾಗಿದ್ದರೂ ಚಿತ್ರಕಥೆಯಲ್ಲಿನ ಗೊಂದಲ, ಅನಗತ್ಯ ಟ್ವಿಸ್ಟ್‌ಗಳು, ಎಮೋಷನ್ಸ್ ಕೊರತೆ ಮತ್ತು 3 ಗಂಟೆ 14 ನಿಮಿಷಗಳ ಸುದೀರ್ಘ ಅವಧಿ ಚಿತ್ರದ ವೇಗಕ್ಕೆ ಹಿನ್ನಡೆ ತಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.