ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 13 ಮಂದಿ ಸಾವು

Firecracker Factory Blast: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ (ಏಪ್ರಿಲ್‌ 19) ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕಟ್ಟನಾರ್‌ಪಟ್ಟಿ ಗ್ರಾಮದಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ

ಭಾರಿ ಸ್ಫೋಟ ನಡೆದ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಪೊಲೀಸರಿಂದ ತನಿಖೆ -

Ramesh Ballamoole
Ramesh Ballamoole Apr 19, 2026 5:59 PM

ಚೆನ್ನೈ, ಏ. 19: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ (ಏಪ್ರಿಲ್‌ 19) ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ (Firecracker Factory Blast). ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಜಿಲ್ಲೆಯ ಕಟ್ಟನಪಟ್ಟಿ ಗ್ರಾಮದಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ತಮಿಳುನಾಡಿನಲ್ಲಿ ಹಲವು ಪಟಾಕಿ ತಯಾರಿಕಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಪದೇ ಪದೆ ಅವಘಡ ಸಂಭವಿಸುತ್ತಿರುವುದು ಕಳವಳ ಮೂಡಿಸಿದೆ. ಭಾನುವಾರದ ಸ್ಫೋಟದ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ಎಂ.ಕೆ. ಸ್ಟಾಲಿನ್‌ ಅವರ ಎಕ್ಸ್‌ ಪೋಸ್ಟ್‌:



ಮುಖ್ಯಮಂತ್ರಿ ಸ್ಟಾಲಿನ್‌ ಸಂತಾಪ

ಘಟನೆ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ʼʼವಿರುಧುನಗರ ಜಿಲ್ಲೆಯ ಕಟ್ಟನಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಹಲವು ಮಂದಿ ಮೃತಪಟ್ಟಿರುವ ಸುದ್ದಿ ತಿಳಿದು ಆಘಾತವಾಗಿದೆ. ಮೃತ ಕುಟುಂಬಕ್ಕೆ ನನ್ನ ಸಂತಾಪಗಳು. ಸಚಿವರಾದ ಕೆ.ಕೆ.ಎಸ್‌.ಎಸ್‌.ಆರ್‌. ರಾಮಚಂದ್ರನ್‌ ಮತ್ತು ತಂಗಮ್‌ ಜತೆ ಈ ಬಗ್ಗೆ ಮಾತನಾಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಗಮನಿಸುವಂತೆ ಹಾಗೂ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದೇನೆʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಘಟನೆ ನಡೆಯುವ ವೇಳೆ ಸುಮಾರು 30 ಕಾರ್ಮಿಕರು ಕಾರ್ಖಾನೆಯಲ್ಲಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಕಾರ್ಖಾನೆಯ ಒಂದು ಭಾಗವೇ ಕುಸಿದು ಬಿದ್ದಿದೆ. ತನಿಖೆ ಆರಂಭಿಸಲಾಗಿದೆ.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 7 ಮಂದಿ ಸಾವು, ಹಲವರಿಗೆ ಗಾಯ

ಕಾರಣವೇನು?

ಮುತ್ತುಮಣಿಕಂ ಅವರ ವನಜಾ ಕ್ರ್ಯಾಕರ್ಸ್‌ ಕಂಪನಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಭಾನುವಾರ ರಜಾ ದಿನವಾಗಿದ್ದರೂ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ. ವಾತಾವರಣದಲ್ಲಿ ಹೆಚ್ಚುತ್ತಿರುವ ಉಷ್ಣತೆಯ ಕಾರಣದಿಂದ ರಾಸಾಯನಿಕಗಳ ಮಧ್ಯೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯ ಬಳಿಕ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಶಿವಕಾಶಿ, ವಿರುಧುನಗರ ಮತ್ತು ಸತ್ತೂರ್‌ನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಸಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 8 ಕಾರ್ಮಿಕರು ಬಲಿ

ಆಂಧ್ರ ಪ್ರದೇಶದಲ್ಲಿ 18 ಮಂದಿ ಪ್ರಾಣ ಕಸಿದ ಪಟಾಕಿ ಕಾರ್ಖಾನೆ

ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಪಟಾಕಿ ಘಟಕದಲ್ಲಿ ಫೆಬ್ರವರಿ 28ರಂದು ಸ್ಫೋಟ ಸಂಭವಿಸಿ 18 ಜನರು ಮೃತಪಟ್ಟಿದ್ದರು. ಅಲ್ಲದೆ ದುರ್ಘಟನೆಯಲ್ಲಿ 6 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸಮರ್ಲಕೋಟ ಮಂಡಲದ ವೆಟ್ಲಕ್‌ಪಲೆಂ ಗ್ರಾಮದಲ್ಲಿ ಸಂಭವಿಸಿದ ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ದೇಹಗಳು ಹತ್ತಿರದ ಭತ್ತದ ಗದ್ದೆಗಳಿಗೆ ಎಸೆಯಲ್ಪಟ್ಟಿದ್ದವು. ಅದಾಗಿ ಕೆಲವೇ ದಿನಗಳಲ್ಲಿ ಅಂತಹದ್ದೇ ಮತ್ತೊಂದು ದುರ್ಘಟನೆ ನಡೆದಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.