Jharkhand Flood: ಜಮ್ಶೆಡ್ಪುರದಲ್ಲಿ ಪ್ರವಾಹದಿಂದ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ
ಜಾರ್ಖಂಡದ ಜಮ್ಶೆಡ್ಪುರ ಕೊವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಲವ್ ಕುಶ್ ವಸತಿ ಶಾಲೆಯಲ್ಲಿ 162 ಮಕ್ಕಳು ಭಾರಿ ಮಳೆಯಿಂದಾಗಿ ಶಾಲೆಯಲ್ಲಿ ಸಿಕ್ಕಿಬಿದ್ದಿದ್ದರು. ಮಕ್ಕಳು ಶಾಲೆಯಲ್ಲಿ ಸಿಲುಕಿಕೊಂಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ತಿಳಿದ ಜಮ್ಶೆಡ್ಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಶೀಘ್ರ ಮತ್ತು ಸಂಘಟಿತ ಕಾರ್ಯಾಚರಣೆ ನಡೆಸಿ ರಕ್ಷಿಸಿ ಅವರ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.
-
ವಿದ್ಯಾ ಇರ್ವತ್ತೂರು
Jun 29, 2025 7:29 PM
ರಾಂಚಿ: ಶಾಲೆಯೊಂದರಲ್ಲಿ ಪ್ರವಾಹಕ್ಕೆ (Flood) ಸಿಲುಕಿದ್ದ 162 ಮಕ್ಕಳನ್ನು ಜಾರ್ಖಂಡ್‌ನ (Jharkhand) ಜಮ್ಶೆಡ್ಪುರದಲ್ಲಿ ರಕ್ಷಿಸಲಾಗಿದೆ. ಜಮ್ಶೆಡ್ಪುರದ ಕೊವಾಲಿ ಪೊಲೀಸ್ ಠಾಣೆ (Kovali police station) ವ್ಯಾಪ್ತಿಯ ಲವ್ ಕುಶ್ ವಸತಿ ಶಾಲೆಯಲ್ಲಿ (Lav Kush Residential School ) 162 ಮಕ್ಕಳು ಭಾರಿ ಮಳೆಯಿಂದಾಗಿ ಶಾಲೆಯಲ್ಲಿ ಸಿಕ್ಕಿಬಿದ್ದಿದ್ದರು. ಮಕ್ಕಳು ಶಾಲೆಯಲ್ಲಿ ಸಿಲುಕಿಕೊಂಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ತಿಳಿದ ಜಮ್ಶೆಡ್ಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಶೀಘ್ರ ಮತ್ತು ಸಂಘಟಿತ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.
ಜಾರ್ಖಂಡ್‌ನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಪ್ರಕಾರ ಕೆಲ ದಿನಗಳ ಕಾಲ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ರಾಂಚಿಯ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಜುಲೈ 5ರವರೆಗೆ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜೂನ್ 29 ಮತ್ತು 30ರಂದು ದಕ್ಷಿಣ ಮತ್ತು ಮಧ್ಯ ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆ ಸಾಧ್ಯತೆಯಿದೆ. ವಾಯುವ್ಯ ಮತ್ತು ಈಶಾನ್ಯ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬಿರುಗಾಳಿ ಕಾಣಿಸಿಕೊಳ್ಳಲಿದ್ದು, ಇದರಿಂದ ಗುಡುಗು ಸಹಿತ ಭಾರೀ ಮಳೆಯಾಗಲಿದೆ.
ವಾಯುವ್ಯ ಬಂಗಾಳ ಕೊಲ್ಲಿಯ ಉಂಟಾಗುವ ಚಂಡಮಾರುತವು ಪಶ್ಚಿಮ-ವಾಯುವ್ಯಕ್ಕೆ ಚಲಿಸುವ ನಿರೀಕ್ಷೆಯಿರುವುದರಿಂದ ಇದು ಜಾರ್ಖಂಡ್‌ನ ಹವಾಮಾನ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರಲಿದೆ. ಪ್ರಸ್ತುತ ಬಿಹಾರ ಮತ್ತು ಬಂಗಾಳದ ಮೂಲಕ ಹಾದುಹೋಗುವ ಮಾನ್ಸೂನ್ ಇಲ್ಲಿ ಸಾಮಾನ್ಯ ಮಳೆ ಸುರಿಸಲಿದೆ.
ಕಳೆದ 24 ಗಂಟೆಗಳಲ್ಲಿ ಜಾರ್ಖಂಡ್ ವಿವಿಧ ಭಾಗಗಳಲ್ಲಿ ಮಳೆ ತೀವ್ರವಾಗಿದ್ದು ಪೂರ್ವ ಸಿಂಗ್‌ಭೂಮ್‌ನಲ್ಲಿ ಬಹರಗೋರಾ 306.8 ಮಿ.ಮೀ., ಘಟ್‌ಶಿಲಾದಲ್ಲಿ 298.4 ಮಿ.ಮೀ. ಮತ್ತು ಚಕುಲಿಯಾದಲ್ಲಿ 127.6 ಮಿ.ಮೀ. ಮಳೆ ದಾಖಲಾಗಿದೆ. ರಾಂಚಿಯಲ್ಲಿ 11.4 ಮಿ.ಮೀ. ಮಳೆ ದಾಖಲಾಗಿದೆ. ಇಲ್ಲಿನ ಗರಿಷ್ಠ ತಾಪಮಾನ 29.7 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಸಾಮಾನ್ಯಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಜುಲೈ 1 ಮತ್ತು 2ರಂದು ವಾಯುವ್ಯ, ಉತ್ತರ, ಮಧ್ಯ ಜಾರ್ಖಂಡ್‌ನ ಸಮೀಪದ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈಶಾನ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ರಾಂಚಿಯಲ್ಲಿ, ಜುಲೈ 1ರವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ನಂತರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಈವರೆಗೆ ಸಾಮಾನ್ಯಕ್ಕಿಂತ ಶೇ. 81ರಷ್ಟು ಹೆಚ್ಚಿನ ಮಳೆಯಾಗಿದ್ದು, ರಾಂಚಿ ಜಿಲ್ಲೆಯಲ್ಲಿ ಶೇ. 198 ಹೆಚ್ಚುವರಿ ಮಳೆಯಾಗಿದೆ.