Naxal Operation: 1.18 ಕೋಟಿ ರೂ. ಇನಾಮು ಹೊಂದಿದ್ದ 23 ಮೋಸ್ಟ್ ವಾಂಟೆಂಡ್ ನಕ್ಸಲರ ಶರಣಾಗತಿ
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಹಲವಾರು ಭದ್ರತಾ ಸಿಬ್ಬಂದಿ ಮತ್ತು ಬುಡಕಟ್ಟು ಗ್ರಾಮಸ್ಥರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಪ್ಪತ್ತಮೂರು ಮಾವೋವಾದಿಗಳು ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ನಕ್ಸಲರು ಒಟ್ಟು 1.18 ಕೋಟಿ ರೂ.ಗಳ ಬಹುಮಾನವನ್ನು ಹೊಂದಿದ್ದರು.


ರಾಯ್ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಹಲವಾರು ಭದ್ರತಾ (Naxal Operation) ಸಿಬ್ಬಂದಿ ಮತ್ತು ಬುಡಕಟ್ಟು ಗ್ರಾಮಸ್ಥರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಪ್ಪತ್ತಮೂರು ಮಾವೋವಾದಿಗಳು ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ನಕ್ಸಲರು ಒಟ್ಟು 1.18 ಕೋಟಿ ರೂ.ಗಳ ಬಹುಮಾನವನ್ನು ಹೊಂದಿದ್ದರು. ಶರಣಾದವರ ಪೈಕಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾವೋವಾದಿ) ಸಶಸ್ತ್ರ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ಮಾವೋವಾದಿಗಳು ಎಂದು ಹೇಳಲಾಗಿದೆ.
ಶರಣಾದವರಲ್ಲಿ 35 ವರ್ಷದ ಲೋಕೇಶ್ ಅಲಿಯಾಸ್ ಪೋಡಿಯಂ ಭೀಮಾ ಎಂಬ ವಿಭಾಗೀಯ ಸಮಿತಿ ಸದಸ್ಯ (ಡಿವಿಸಿಎಂ) ಸೇರಿದ್ದಾನೆ. ಈತ ಬಸ್ತಾರ್ ಪ್ರದೇಶದಲ್ಲಿ ಹಲವಾರು ಭದ್ರತಾ ಸಿಬ್ಬಂದಿಯ ಹತ್ಯೆ ಮಾಡಿದ್ದ ಎಂದು ಸುಕ್ಮಾದ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಹೇಳಿದ್ದಾರೆ. ಶರಣಾದ ಮತ್ತೊಬ್ಬ ಮಾವೋವಾದಿಯನ್ನು ರಮೇಶ್ ಅಲಿಯಾಸ್ ಕಲ್ಮು (35) ಎಂದು ಗುರುತಿಸಲಾಗಿದ್ದು, ಈತ ಉನ್ನತ ಮಾವೋವಾದಿ ನಾಯಕ ಮದ್ವಿ ಹಿಡ್ಮಾ ಅವರ ಗಾರ್ಡ್ ಕಮಾಂಡರ್ ಆಗಿದ್ದ. ಇಬ್ಬರ ಮೇಲೂ ತಲಾ 8 ಲಕ್ಷ ರೂ. ಬಹುಮಾನವಿತ್ತು.
"ಹೊಸ ಶರಣಾಗತಿ ನಕ್ಸಲ್ ನೀತಿ, ನಿಯಾದ್ ನೆಲ್ಲನಾರ್ ಯೋಜನೆ, ದೂರದ ಹಳ್ಳಿಗಳಲ್ಲಿ ಹೊಸ ಪೊಲೀಸ್ ಶಿಬಿರಗಳು ಬರುತ್ತಿರುವುದು, ಹೆಚ್ಚುತ್ತಿರುವ ಪೊಲೀಸ್ ಪ್ರಭಾವ, ನಕ್ಸಲರ ಅಮಾನವೀಯ ಮತ್ತು ದಿಕ್ಕಿಲ್ಲದ ಸಿದ್ಧಾಂತ ಮತ್ತು ಸಂಘಟನೆಯಲ್ಲಿ ಅವರು ಎದುರಿಸುತ್ತಿರುವ ಶೋಷಣೆ ಮತ್ತು ದೌರ್ಜನ್ಯಗಳು, ತೆಲುಗು ಕಾರ್ಯಕರ್ತರ ತಾರತಮ್ಯ ಸೇರಿದಂತೆ ಹಲವಾರು ಅಂಶಗಳು ಶರಣಾಗತಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶರಣಾದ ಪ್ರತಿಯೊಬ್ಬ ಮಾವೋವಾದಿಗೂ ಶರಣಾಗತಿ ಮೊತ್ತವಾಗಿ 50,000 ರೂ.ಗಳನ್ನು ನೀಡಲಾಗುವುದು ಮತ್ತು ಕೌಶಲ್ಯ ತರಬೇತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಮಾರ್ಚ್ 6, 2000 ರಿಂದ ಏಪ್ರಿಲ್ 7, 2024 ರವರೆಗೆ ಒಟ್ಟು 16,780 ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಕ್ಸಲ್ ಹಿಂಸಾಚಾರವನ್ನು ಕೊನೆಗೊಳಿಸಲು ಮತ್ತು ಬಸ್ತಾರ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಲು ಗುರಿಯನ್ನು ಹೊಂದಿವೆ. ನಕ್ಸಲ್ ಶರಣಾಗತಿ-ಪುನರ್ವಸತಿ ನೀತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಛತ್ತೀಸ್‌ಗಢ ಸರ್ಕಾರವು ಶರಣಾದ ನಕ್ಸಲರಿಗೆ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತಿದೆ. ಅವರಿಗೆ 50,000 ರೂ. ಪ್ರೋತ್ಸಾಹ ಧನದ ಜೊತೆಗೆ, ಕೌಶಲ್ಯ ಅಭಿವೃದ್ಧಿ ಕೋರ್ಸ್ ಅನ್ನು ನೀಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Anti Naxal Operation: ತಲೆಗೆ 45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ಎನ್‌ಕೌಂಟರ್
ಛತ್ತೀಸ್‌ಗಢ ನಕ್ಸಲ್ ಶರಣಾಗತಿ ಹಾಗೂ ಸಂತ್ರಸ್ತ ಪರಿಹಾರ ಮತ್ತು ಪುನರ್ವಸತಿ ನೀತಿ 2025, 2023 ರ ನೀತಿಯನ್ನು ಬದಲಾಯಿಸಿತು. ಹೊಸ ನೀತಿಯು ಶರಣಾದ ಮಾವೋವಾದಿಗಳಿಗೆ ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ ಮತ್ತು ಭದ್ರತೆಯನ್ನು ಒದಗಿಸುತ್ತದೆ.