ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ವೀಕ್ಷಿಸಬೇಕೆ? ಟಿಕೆಟ್‌ ಬುಕ್‌ ಮಾಡೋದು ಹೇಗೆ? ಇಲ್ಲಿದೆ ಡಿಟೇಲ್ಸ್‌

Independence Day 2026: ಆಗಸ್ಟ್ 15ರಂದು ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ರಾಷ್ಟ್ರಧ್ವಜಾರೋಹಣ, ಪ್ರಧಾನಮಂತ್ರಿಯವರ ಭಾಷಣ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಈ ಬಾರಿ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡುವುದು ವಿಶೇಷ ಆಕರ್ಷಣೆಯಾಗಲಿದೆ. ಸಮಾರಂಭದಲ್ಲಿ ಭಾಗವಹಿಸಲು ಬಯಸುವವರಿಗೆ ಪರೇಡ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ, ಟಿಕೆಟ್ ದರ, ಪ್ರವೇಶಕ್ಕೆ ಅಗತ್ಯವಿರುವ ಗುರುತಿನ ದಾಖಲೆಗಳು, ಭದ್ರತಾ ನಿಯಮಗಳು, ನಿಷೇಧಿತ ವಸ್ತುಗಳು ಹಾಗೂ ಆಗಸ್ಟ್ 15ರಂದು ದೆಹಲಿ ಮೆಟ್ರೋ ಸಂಚಾರದ ಸಮಯ ಸೇರಿದಂತೆ ಹಲವು ಪ್ರಮುಖ ಮಾಹಿತಿಗಳು ಇಲ್ಲಿವೆ.

80ನೇ ಸ್ವಾತಂತ್ರ್ಯೋತ್ಸವಕ್ಕೆ ಕ್ಷಣಗಣನೆ: ಅಲಂಕೃತಗೊಂಡ ಕೆಂಪುಕೋಟೆ

80ನೇ ಸ್ವಾತಂತ್ರ್ಯೋತ್ಸವಕ್ಕೆ ಕ್ಷಣಗಣನೆ -

Profile
Sushmitha Jain Aug 14, 2026 4:45 PM

ನವದೆಹಲಿ: ದೇಶದ 80ನೇ ಸ್ವಾತಂತ್ರ್ಯೋತ್ಸವ (80th Independence Day)ಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 15ರಂದು ಶನಿವಾರ ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಅದ್ಧೂರಿಯಾಗಿ ಸ್ವಾತಂತ್ರ್ಯೋತ್ಸವ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ, ಪ್ರಧಾನಮಂತ್ರಿಯವರ ಭಾಷಣ ಸೇರಿದಂತೆ ಹಲವು ಅಧಿಕೃತ ಕಾರ್ಯಕ್ರಮಗಳು ನಡೆಯಲಿವೆ. ಈ ವರ್ಷದ ವಿಶೇಷ ಆಕರ್ಷಣೆಯಾಗಿ ದೇಶದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡಲಾಗುತ್ತದೆ.

ದೆಹಲಿ ಸ್ವಾತಂತ್ರ್ಯೋತ್ಸವ ಪರೇಡ್‌ಗೆ ಟಿಕೆಟ್ ಪಡೆಯುವುದು ಹೇಗೆ?

ಸ್ವಾತಂತ್ರ್ಯೋತ್ಸವ ಸಮಾರಂಭದ ಟಿಕೆಟ್‌ಗಳನ್ನು ಸಾಮಾನ್ಯವಾಗಿ ಸರ್ಕಾರದ ಅಧಿಕೃತ ಆಮಂತ್ರಣ (AAMANTRAN) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಹಂತ 1: ಅಧಿಕೃತ AAMANTRAN ಪೋರ್ಟಲ್ ತೆರೆಯಿರಿ. ಸುರಕ್ಷತೆಯ ದೃಷ್ಟಿಯಿಂದ ಮೂರನೇ ವ್ಯಕ್ತಿಯ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳ ಬದಲು ಅಧಿಕೃತ ಸರ್ಕಾರಿ ಪೋರ್ಟಲ್‌ನ್ನೇ ಬಳಸುವುದು ಸೂಕ್ತ.

ಹಂತ 2: ‘Book your Tickets Here’ ಆಯ್ಕೆಯನ್ನು ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಿ ಅಥವಾ ಈಗಾಗಲೇ ಖಾತೆ ಇದ್ದರೆ ಲಾಗಿನ್ ಮಾಡಿ.

ಹಂತ 3: ‘Book Ticket’ ವಿಭಾಗದಲ್ಲಿ ಈವೆಂಟ್ ಪಟ್ಟಿಯಿಂದ ‘Independence Day 2026’ ಆಯ್ಕೆಮಾಡಿ.

ಹಂತ 4: ‘Guest List’ ವಿಭಾಗಕ್ಕೆ ತೆರಳಿ ಪ್ರತಿ ವ್ಯಕ್ತಿಯ ವೈಯಕ್ತಿಕ ವಿವರಗಳು ಮತ್ತು ಗುರುತಿನ ದಾಖಲೆಗಳ ಮಾಹಿತಿಯನ್ನು ನಮೂದಿಸಿ. ಅಗತ್ಯವಿದ್ದರೆ ಸರ್ಕಾರದಿಂದ ನೀಡಲಾದ ಗುರುತಿನ ಚೀಟಿಯ ಫೋಟೋವನ್ನು ಕೂಡ ಅಪ್‌ಲೋಡ್ ಮಾಡಬೇಕು.

ಹಂತ 5: ಮತ್ತೆ ‘Book Ticket’ ವಿಭಾಗಕ್ಕೆ ತೆರಳಿ ಅಗತ್ಯವಿರುವ ಟಿಕೆಟ್‌ಗಳ ಸಂಖ್ಯೆಯನ್ನು ಆಯ್ಕೆ ಮಾಡಿ. ಪ್ರತಿ ವ್ಯಕ್ತಿಗೆ ಟಿಕೆಟ್ ವರ್ಗ ಮತ್ತು ಎನ್‌ಕ್ಲೋಸರ್ ಗುಂಪನ್ನು ಆಯ್ಕೆ ಮಾಡಬೇಕಾಗುತ್ತದೆ.

ಕಳೆದ ವರ್ಷದ ಸಮಾರಂಭದ ಟಿಕೆಟ್ ದರಗಳು ಹೀಗಿದ್ದವು:

  • ಜನರಲ್: ₹20
  • ಸ್ಟ್ಯಾಂಡರ್ಡ್: ₹100
  • ಪ್ರೀಮಿಯಂ: ₹500

2026ರ ಟಿಕೆಟ್ ದರಗಳಲ್ಲಿ ಬದಲಾವಣೆ ಇದ್ದರೆ ಅಧಿಕೃತ ಪೋರ್ಟಲ್‌ನಲ್ಲಿರುವ ಮಾಹಿತಿಯನ್ನೇ ಅಂತಿಮವಾಗಿ ಪರಿಗಣಿಸಬೇಕು.

ಹಂತ 6: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿ ಪೂರ್ಣಗೊಳಿಸಿ.

ಹಂತ 7: ಪಾವತಿ ಯಶಸ್ವಿಯಾದ ನಂತರ ಇ-ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ. ಅಗತ್ಯವಿದ್ದರೆ ಅದರ ಪ್ರಿಂಟ್‌ಔಟ್ ಕೂಡ ತೆಗೆದುಕೊಂಡು ಹೋಗಬಹುದು.

ಪ್ರಸ್ತುತ ಪೋರ್ಟಲ್‌ನಲ್ಲಿ ‘No tickets are available’ ಎಂಬ ಸಂದೇಶ ಕಾಣಿಸುತ್ತಿದ್ದು, ಮುಂದಿನ ಯಾವುದೇ ಅಪ್‌ಡೇಟ್‌ಗಳಿಗಾಗಿ ಅಧಿಕೃತ ಪೋರ್ಟಲ್ ಪರಿಶೀಲಿಸುತ್ತಿರಬಹುದು.

80ನೇ ಸ್ವಾತಂತ್ರ್ಯೋತ್ಸವಕ್ಕೆ ದೆಹಲಿ ಸಜ್ಜು: ಕೆಂಪುಕೋಟೆಯಲ್ಲಿ ಅದ್ಧೂರಿ ಸಮಾರಂಭ

ಸಮಾರಂಭಕ್ಕೆ ತೆರಳುವವರು ಗಮನಿಸಬೇಕಾದ ನಿಯಮಗಳು

ಮಾಡಬೇಕಾದವು

  • ಟಿಕೆಟ್ ಬುಕ್ ಮಾಡುವಾಗ ಬಳಸಿದ ಅದೇ ಗುರುತಿನ ದಾಖಲೆಯನ್ನು ಸಮಾರಂಭದ ಸ್ಥಳಕ್ಕೆ ಕೊಂಡೊಯ್ಯಬೇಕು.
  • 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಆಧಾರ್ ಕಾರ್ಡ್ ಸೇರಿದಂತೆ ಪ್ರತ್ಯೇಕ ಟಿಕೆಟ್ ಅಗತ್ಯವಿರುತ್ತದೆ.
  • ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಮಾಡಬಾರದವು

ಸಮಾರಂಭದ ಸ್ಥಳಕ್ಕೆ ಬ್ಯಾಗ್, ಬ್ರಿಫ್‌ಕೇಸ್, ಆಹಾರ ಪದಾರ್ಥಗಳು, ಮೊಬೈಲ್ ಚಾರ್ಜರ್, ಇಯರ್‌ಫೋನ್, ಪವರ್ ಬ್ಯಾಂಕ್, ಕ್ಯಾಮೆರಾ, ಬೈನಾಕ್ಯುಲರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಛತ್ರಿ, ನೀರಿನ ಬಾಟಲಿ, ಸಿಗರೇಟ್, ಲೈಟರ್, ಚಾಕು, ಕತ್ತರಿ, ಬ್ಲೇಡ್, ಆಯುಧಗಳು, ಸ್ಫೋಟಕ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ಕೊಂಡೊಯ್ಯಲು ಅನುಮತಿ ಇರುವುದಿಲ್ಲ.

ಟಿಕೆಟ್ ಅನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಕಾರ್ಯಕ್ರಮ ನಡೆಯುವ ವೇಳೆ ದಾರಿಯಲ್ಲಿ ನಿಂತು ಇತರರಿಗೆ ಅಡ್ಡಿಪಡಿಸುವಂತಿಲ್ಲ.

ಮಳೆಗಾಲದ ಹಿನ್ನೆಲೆಯಲ್ಲಿ ರೇನ್‌ಕೋಟ್‌ಗಳನ್ನು ಕೊಂಡೊಯ್ಯಲು ಅವಕಾಶವಿದ್ದು, ಛತ್ರಿಗಳಿಗೆ ಅನುಮತಿ ಇರುವುದಿಲ್ಲ.

ಸ್ವಾತಂತ್ರ್ಯೋತ್ಸವದಂದು ದೆಹಲಿ ಮೆಟ್ರೋ ಸೇವೆ

ಕೆಂಪುಕೋಟೆ ಸುತ್ತಮುತ್ತ ಪಾರ್ಕಿಂಗ್ ಸೌಲಭ್ಯ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ದೆಹಲಿ ಮೆಟ್ರೋ ಸೇವೆ ಬೆಳಗ್ಗೆ 4 ಗಂಟೆಯಿಂದಲೇ ಆರಂಭವಾಗಲಿದೆ.

ಪರೇಡ್‌ನ ಆಸನ ವ್ಯವಸ್ಥೆ ಮತ್ತು ಸಂಪೂರ್ಣ ಕಾರ್ಯಕ್ರಮದ ವೇಳಾಪಟ್ಟಿ ಕುರಿತು ಅಧಿಕೃತ ಮಾಹಿತಿ ಬಿಡುಗಡೆಯಾಗಬೇಕಿದೆ. ಪರೇಡ್‌ನ ಮಾರ್ಗ ಮತ್ತು ಪಾರ್ಕಿಂಗ್ ನಕ್ಷೆಯನ್ನು ಸಂಬಂಧಿತ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಟಿಕೆಟ್, ಪ್ರವೇಶ ನಿಯಮಗಳು, ಸಮಯ ಹಾಗೂ ಇತರ ಮಾಹಿತಿಗಾಗಿ ಅಧಿಕೃತ ಸರ್ಕಾರಿ ಪೋರ್ಟಲ್‌ನಲ್ಲಿನ ಇತ್ತೀಚಿನ ಮಾಹಿತಿಯನ್ನೇ ಪರಿಶೀಲಿಸುವುದು ಉತ್ತಮ.