ಕೇಂದ್ರದ ಮಧ್ಯ ಪ್ರವೇಶದ ಬಳಿಕ 10 ನಿಮಿಷಗಳ ಡೆಲಿವರಿ ಯೋಜನೆ ಕೈ ಬಿಟ್ಟ ಬ್ಲಿಂಕ್‌ಇಟ್; ಸತ್ಯಮೇವ ಜಯತೇ ಎಂದ ಸಂಸದ ರಾಘವ್ ಚಡ್ಡಾ
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ನಂತರ 10 ನಿಮಿಷಗಳಲ್ಲಿ ಡೆಲಿವರಿ ಮಾಡುವ ಸೇವೆಯನ್ನು ಬ್ಲಿಂಕ್‌ಇಟ್ ತಾತ್ಕಾಲಿಕವಾಗಿ ನಿಲ್ಲಿಸಿದೆ. ಕಾರ್ಮಿಕರ ಸುರಕ್ಷತೆಯನ್ನು ಪ್ರಮುಖವಾಗಿ ಪರಿಗಣಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿತರಣೆ ಗಡುವು ಕಡಿಮೆ ಇರುವುದರಿಂದ ಚಾಲಕರು ರಸ್ತೆ ಅಪಾಯಗಳಿಗೆ ಒಳಗಾಗುವ ಅಪಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜ. 13: ತ್ವರಿತವಾಗಿ ಗ್ರಾಹಕರಿಗೆ ವಸ್ತುಗಳನ್ನು ಪೂರೈಸುವ ಬ್ಲಿಂಕ್‌ಇಟ್, ಝೆಪ್ಟೋ, ಸ್ವಿಗ್ಗಿ ಮುಂತಾದ ಇ-ಕಾಮರ್ಸ್ ವೇದಿಕೆಗಳು 10 ನಿಮಿಷದಲ್ಲಿ ತಲುಪಿಸುತ್ತವೆ. ಇದು ಗ್ರಾಹಕರಿಗೆ ಉಪಯುಕ್ತವಾಗಿದ್ದರು ಸಹ, ಡೆಲಿವರಿ ಬಾಯ್‍ಗಳ ಸುರಕ್ಷತೆಯ ಬಗ್ಗೆ ಕಳವಳ ಮೂಡಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಸರ್ಕಾರ ಪ್ರಮುಖ ವೇದಿಕೆಗಳೊಂದಿಗೆ ಸಭೆ ನಡೆಸಿತು. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಈ ವೇದಿಕೆಗಳ ಪ್ರತಿನಿಧಿಗಳು ಸಭೆ ನಡೆಸಿದ ಬಳಿಕ, ಡೆಲಿವರಿ ಬಾಯ್‌ಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ಸಭೆಯ ಬಳಿಕ ಬ್ಲಿಂಕ್‌ಇಟ್ 10 ನಿಮಿಷಗಳ ವಿತರಣಾ ಭರವಸೆಯನ್ನು ಕೈಬಿಟ್ಟಿತು. ಈ ಬಗ್ಗೆ ಮೊದಲಿನಿಂದಲೈ ಧ್ವನಿ ಎತ್ತತ್ತ ಬಂದಿರುವ ಆಮ್ ಆದ್ಮಿ ಪಾರ್ಟಿ (AAP) ಮುಖ್ಯಸ್ಥ ರಾಘವ್ ಚಡ್ಡಾ ಸಂತಸ ವ್ಯಕ್ತಪಡಿಸಿದ್ದಾರೆ.
ಕಳವಳಗಳನ್ನು ಪರಿಹರಿಸಲು ಬ್ಲಿಂಕ್‌ಇಟ್, ಝೆಪ್ಟೊ, ಜೊಮ್ಯಾಟೊ ಮತ್ತು ಸ್ವಿಗ್ಗಿ ಸೇರಿದಂತೆ ಪ್ರಮುಖ ವೇದಿಕೆಗಳೊಂದಿಗೆ ನಡೆದ ಸಭೆ ಬಳಿಕ 10 ನಿಮಿಷಗಳ ವಿತರಣಾ ಗಡುವನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಬ್ಲಿಂಕ್‌ಇಟ್ 10 ನಿಮಿಷಗಳ ವಿತರಣಾ ಭರವಸೆಯನ್ನು ಕೈಬಿಟ್ಟಿದೆ. ಮುಂಬರುವ ದಿನಗಳಲ್ಲಿ ಇತರ ವೇದಿಕೆಗಳು ಇದನ್ನು ಅನುಸರಿಸುವ ನಿರೀಕ್ಷೆಯಿದೆ.
ರಾಘವ್ ಚಡ್ಢಾ ಅವರ ಎಕ್ಸ್ ಪೋಸ್ಟ್:
Satyamev Jayate. Together, we have won..
— Raghav Chadha (@raghav_chadha) January 13, 2026
I am deeply grateful to the Central Government for its timely, decisive and compassionate intervention in enforcing the removal of the “10-minute delivery” branding from quick-commerce platforms. This is a much needed step because when…
ಡೆಲಿವರಿ ಬಾಯ್‍ಗಳ ಸುರಕ್ಷತೆಯ ವಿಷಯವನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಪ್ರಸ್ತಾಪಿಸಲಾಯಿತು. ಸಂಸದ ರಾಘವ್ ಚಡ್ಡಾ, 10 ನಿಮಿಷಗಳಲ್ಲಿ ವಸ್ತು-ಆಹಾರಗಳನ್ನು ತಲುಪಿಸುವುದರಿಂದ ವಿತರಣೆ ಮಾಡುವವರಿಗೆ ಅಪಾಯವುಂಟಾಗುವ ಸಾಧ್ಯತೆಯಿದೆ ಎಂದು ವಾದಿಸಿದ್ದರು. ಅತ್ಯಂತ ವೇಗದ ವಿತರಣೆಗಳ ಸೌಲಭ್ಯಕ್ಕಿಂತಲೂ ಅದರ ಮಾನವೀಯ ಬೆಲೆಯನ್ನು ಪರಿಗಣಿಸಬೇಕು ಎಂದು ಅವರು ಸದನದಲ್ಲಿ ಆಗ್ರಹಿಸಿದ್ದರು.
ಬ್ಲಿಂಕಿಟ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡಿದ ಸಂಸದ ರಾಘವ ಚಡ್ಡಾ
ಸೋಮವಾರ (ಜನವರಿ 12) ಚಡ್ಡಾ ಬ್ಲಿಂಕ್‌ಇಟ್ ಸಮವಸ್ತ್ರ ಧರಿಸಿ ಆರ್ಡರ್‌ಗಳನ್ನು ತಲುಪಿಸುವ ವಿಡಿಯೊವನ್ನು ಹಂಚಿಕೊಂಡಿದ್ದರು. ಆ ಮೂಲಕ ಡೆಲಿವರಿ ಬಾಯ್‌ಗಳ ದೈನಂದಿನ ಕಷ್ಟಗಳತ್ತ ಗಮನ ಸೆಳೆದಿದ್ದರು. ʼʼಬೋರ್ಡ್ ರೂಂಗಳಿಂದ ತಳಮಟ್ಟದಲ್ಲಿ ನಾನು ಅವರ ದಿನವನ್ನು ಕಳೆದೆʼʼ ಎಂಬ ಶೀರ್ಷಿಕೆಯೊಂದಿಗೆ ಚಡ್ಡಾ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ನೀತಿ ಚರ್ಚೆಗಳಿಂದ ದೂರ ಸರಿದು, ತಳಮಟ್ಟದ ಜೀವನವನ್ನು ನೋಡಲು ಬಯಸುತ್ತೇನೆ ಎಂದು ಎಎಪಿ ನಾಯಕ ಹೇಳಿದ್ದರು.
ಇಲ್ಲಿದೆ ವಿಡಿಯೊ:
Away from boardrooms, at the grassroots. I lived their day.
— Raghav Chadha (@raghav_chadha) January 12, 2026
Stay tuned! pic.twitter.com/exGBNFGD3T
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇತ್ತೀಚೆಗೆ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕರಡು ನಿಯಮಗಳನ್ನು ಪ್ರಕಟಿಸಿದೆ. ಇದು ಡೆಲಿವರಿ ಬಾಯ್‌ಗಳ ಕನಿಷ್ಠ ವೇತನ, ಆರೋಗ್ಯ, ಔದ್ಯೋಗಿಕ ಸುರಕ್ಷತೆ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯಂತಹ ವಿವಿಧ ಪ್ರಯೋಜನಗಳನ್ನು ಹೊಂದಿದೆ. ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಎಲ್ಲ ನಾಲ್ಕು ಕಾರ್ಮಿಕ ಕೋಡ್‌ಗಳ ಸಂಪೂರ್ಣ ಪ್ಯಾಕೇಜ್ ಅನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ.
ಡಿಸೆಂಬರ್ 25ರಂದು, ವಿತರಣಾ ವೇದಿಕೆಯ ಕಾರ್ಮಿಕರ ಸಂಘಗಳು ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 31ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಅವರು ಎಚ್ಚರಿಸಿದ್ದರು. ಅವರ ಬೇಡಿಕೆಗಳಲ್ಲಿ ಸಮಯ ಆಧಾರಿತ ವಿತರಣಾ ಗುರಿಗಳನ್ನು ಕೈಬಿಡುವುದು ಸೇರಿತ್ತು.
ಪ್ರತಿಭಟನಾ ಕರೆಗೆ ಪ್ರತಿಕ್ರಿಯೆಯಾಗಿ, ಸ್ವಿಗ್ಗಿ ಮತ್ತು ಜೊಮಾಟೊ ವಿತರಣೆಗಳಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಆಂದೋಲನವನ್ನು ಪ್ರಾರಂಭಿಸುವುದಾಗಿ ಒಕ್ಕೂಟಗಳು ಎಚ್ಚರಿಸಿವೆ.