ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರಾದರೊಬ್ಬ ಆರ್‌ಎಸ್ಎಸ್ ನಾಯಕ ಜೈಲಿಗೆ ಹೋಗಿದ್ದಾರೆಯೇ? ವಿವಾದ ಹುಟ್ಟುಹಾಕಿದ ಅಸಾದುದ್ದೀನ್ ಓವೈಸಿ

Asaduddin Owaisi: ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್ ನಾಯಕರೊಬ್ಬರು ಜೈಲಿಗೆ ಹೋಗಿದ್ದಾರೆಯೇ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ ನಾಯಕರನ್ನು ಉದಾಹರಿಸಿ ಇತಿಹಾಸವನ್ನು ಸರಿಯಾಗಿ ಓದಿ ತಿಳಿಯಬೇಕು ಎಂದು ಒತ್ತಿ ಹೇಳಿದರು.

ಭಾರತದ ಸ್ವಾತಂತ್ರ್ಯದಲ್ಲಿ RSS ಪಾತ್ರದ ಬಗ್ಗೆ ಒವೈಸಿ ಪ್ರಶ್ನೆ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (ಸಂಗ್ರಹ ಚಿತ್ರ) -

Priyanka P
Priyanka P Jan 13, 2026 5:21 PM

ಮುಂಬೈ, ಜ. 13: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ (RSS) ಕೊಡುಗೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಪ್ರಶ್ನಿಸಿದ್ದಾರೆ. ಸಂಘದ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಅವರನ್ನು ಬ್ರಿಟಿಷ್ ಆಡಳಿತವನ್ನು ವಿರೋಧಿಸಿದ್ದಕ್ಕಾಗಿ ಅಲ್ಲ, ಖಿಲಾಫತ್ ಚಳುವಳಿಯನ್ನು ಬೆಂಬಲಿಸಿದ್ದಕ್ಕಾಗಿ ಜೈಲಿಗೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಜನವರಿ 15ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಬಾಂಗ್ಲಾದೇಶಿಗಳು ಇದ್ದಾರೆ ಎಂಬುದನ್ನು ನಿರಾಕರಿಸಿದರು. ಇಲ್ಲಿ ಯಾವುದೇ ಬಾಂಗ್ಲಾದೇಶಿ ವಲಸಿಗರು ಕಂಡುಬಂದರೆ ಅದು ನರೇಂದ್ರ ಮೋದಿ ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಆಡಳಿತಾರೂಢ ಬಿಜೆಪಿ ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುಂದಕ್ಕೆ ತಳ್ಳಲು ಮತ್ತು ಆಡಳಿತ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕಥನಗಳನ್ನು ಬಳಸುತ್ತಿದೆ ಎಂದು ಅವರು ಟೀಕಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಓವೈಸಿ, ಬ್ರಿಟಿಷರ ವಿರುದ್ಧ ಹೋರಾಡಿ ಜೈಲಿಗೆ ಹೋಗಿರುವ ಯಾವುದೇ ಆರ್‌ಎಸ್‌ಎಸ್ ನಾಯಕರು ಇದ್ದಾರೆಯೇ? ಎಂದು ಪ್ರಶ್ನಿಸಿದರು. ಹೆಡ್ಗೇವಾರ್ ಅವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಅವರು ಖಿಲಾಫತ್ ಚಳವಳಿಯನ್ನು ಬೆಂಬಲಿಸಿದ್ದಕ್ಕೆ ಜೈಲಿಗೆ ಹೋಗಿದ್ದರು. ಇಂದು ಅವರು ಮುಸ್ಲಿಮರ ವಿರುದ್ಧ ದ್ವೇಷದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.

ಹಸೀನಾರನ್ನೂ ವಾಪಸ್ ಕಳುಹಿಸಿ: ಬಾಂಗ್ಲಾದೇಶ ಕ್ರಿಕೆಟರ್ ವಿರುದ್ಧದ ಬಿಸಿಸಿಐ ಕ್ರಮಕ್ಕೆ ಅಸಾದುದ್ದೀನ್ ಓವೈಸಿ ಕಿಡಿ

ಆರ್‌ಎಸ್‌ಎಸ್ ದೇಶಭಕ್ತಿಯ ಬಗ್ಗೆ ಮಾತನಾಡುತ್ತದೆ. ಆದರೆ ಅವರಲ್ಲಿ ಯಾರಾದರೂ ಬ್ರಿಟಿಷರ ವಿರುದ್ಧ ಪ್ರಾಣ ಕಳೆದುಕೊಂಡಿದ್ದಾರೆಯೇ? ಬದಲಾಗಿ ಮುಂಬೈಯ (ಸಮಾಜವಾದಿ ನಾಯಕ) ಯೂಸುಫ್ ಮೆಹರಾಲಿ 'ಕ್ವಿಟ್ ಇಂಡಿಯಾ' ಮತ್ತು 'ಸೈಮನ್ ಗೋ ಬ್ಯಾಕ್' ಘೋಷಣೆಗಳನ್ನು ನೀಡಿದರು. ಆರ್‌ಎಸ್‌ಎಸ್‌ನವರು ಇತಿಹಾಸವನ್ನು ಓದುವುದಿಲ್ಲ ಮತ್ತು ನಮ್ಮನ್ನು ಬಾಂಗ್ಲಾದೇಶಿಗಳು ಎಂದು ಆರೋಪಿಸುತ್ತಾರೆ ಎಂದು ಟೀಕಿಸಿದರು.

ಮೊದಲನೆಯ ಮಹಾಯುದ್ಧದ ನಂತರ ಇಸ್ಲಾಂ ಧರ್ಮದ ಖಲೀಫ (ಆಧ್ಯಾತ್ಮಿಕ ನಾಯಕ) ಆಗಿ ಒಟ್ಟೋಮನ್ ಸುಲ್ತಾನನ ಅಧಿಕಾರವನ್ನು ಕಾಪಾಡಿಕೊಳ್ಳಲು ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹೇರಲು ಮುಸ್ಲಿಮರು ನಡೆಸಿದ ಆಂದೋಲನವೇ ಖಿಲಾಫತ್ ಚಳುವಳಿ (1919ರಿಂದ 1924). ಪೊಲೀಸ್, ಗುಪ್ತಚರ ಮತ್ತು ಗಡಿ ನಿಯಂತ್ರಣ ಇದ್ದರೂ, ಬಾಂಗ್ಲಾದೇಶ ಗಡಿಯಲ್ಲಿ 10 ಕಿ.ಮೀ. ಬೇಲಿಯನ್ನು ಪೂರ್ಣಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಓವೈಸಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕಿಸಿದರು. ಚೀನಾ ಮತ್ತು ಐಎಸ್‌ಐ ಬಾಂಗ್ಲಾದೇಶವನ್ನು ತಲುಪಿದ್ದು, ಇಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ‘ಬಾಂಗ್ಲಾದೇಶ-ಬಾಂಗ್ಲಾದೇಶ’ ಎಂದು ಹೇಳುತ್ತಿವೆ ಎಂದು ವ್ಯಂಗ್ಯವಾಡಿದರು.

ಅವರು ಮುಂದಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಲು ವಿನಂತಿ ಮಾಡಿದರು. ಮಹಾರಾಷ್ಟ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುವಾಗ ಅವರ ಭಾಗವಹಿಸುವಿಕೆಯ ಪುರಾವೆ ತೋರಲು ಬಲವಾದ ಮತದಾನ ಮುಖ್ಯವಾದುದು ಎಂದು ಅವರು ಒತ್ತಿ ಹೇಳಿದರು.

ಪೌರತ್ವ ಕಾಯ್ದೆಯ ಪ್ರಕಾರ ಪೌರತ್ವವನ್ನು ಪ್ರಶ್ನಿಸುವ ಅಧಿಕಾರ ಗೃಹ ಸಚಿವಾಲಯಕ್ಕೆ ಇದೆ. ಆದರೆ ಮೋದಿ ಸರ್ಕಾರ ಈ ಜವಾಬ್ದಾರಿಗಳನ್ನು ಚುನಾವಣಾ ಆಯೋಗಕ್ಕೆ ನೀಡಿದೆ ಎಂದು ಓವೈಸಿ ಆರೋಪಿಸಿದರು.

ಇಲ್ಲಿನ ಚುನಾವಣೆಯಲ್ಲಿ ಎಐಎಂಐಎಂ ಪಕ್ಷವು ನಿರ್ನಾಮವಾಗಲಿದೆ ಎಂಬ ರಾಜ್ಯ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೇಳಿಕೆಯನ್ನು ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ಪ್ರಶ್ನಿಸಿದರು. ಒಂದು ವೇಳೆ ಈ ಹೇಳಿಕೆ ನಿಜವಾದರೆ ನಾನು ನನ್ನ ಗಡ್ಡವನ್ನು ಬೋಳಿಸುತ್ತೇನೆ ಎಂದು ಶಿಂಧೆಗೆ ಸವಾಲು ಹಾಕಿದರು.