5-10 ವರ್ಷ ಜೈಲು, 1 ಕೋಟಿ ರುಪಾಯಿ ದಂಡ: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಾನೂನು ಬಿಗಿಗೊಳಿಸಲು ಮುಂದಾದ ಮೋದಿ ಸರ್ಕಾರ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ದೇಶಾದ್ಯಂತ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರವು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ 2024ಕ್ಕೆ ತಿದ್ದುಪಡಿಗಳನ್ನು ತರಲು ಸಿದ್ಧತೆ ನಡೆಸುತ್ತಿದೆ. ಕಾಕ್ರೋಚ್ ಜನತಾ ಪಕ್ಷದ ಆಂದೋಲನದ ನಡುವೆ ಈ ಕುರಿತು ಕೇಂದ್ರ ಸರ್ಕಾರ ಘೋಷಣೆಯನ್ನು ಕೂಡ ಮಾಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯ ಬಳಿಕ ದೇಶಾದ್ಯಂತ ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಪ್ರತಿಭಟನಾಕಾರರಿಗೆ ನೀಡಿರುವ ಭರವಸೆಯಂತೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಒಂದೊಂದೇ ಹೆಜ್ಜೆಯನ್ನು ಇಡಲು ಮುಂದಾಗಿದೆ. ಈಗಾಗಲೇ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರು ಸರ್ಕಾರ ನೀಡಿರುವ ಭರವಸೆ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಇದರ ಬಳಿಕ ಇದೀಗ ಕೇಂದ್ರ ಸರ್ಕಾರವು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ 2024ಕ್ಕೆ ( Public Examinations- Prevention of Unfair Means Act, 2024 ) ತಿದ್ದುಪಡಿಗಳನ್ನು ತರಲು ಸಿದ್ಧತೆ ನಡೆಸುತ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಕಾನೂನುಗಳನ್ನು ಬಿಗಿಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ರತಿಜ್ಞೆ ಮಾಡಿದ್ದರು. ಈ ಕುರಿತು ವಿಡಿಯೋ ಸಂದೇಶದಲ್ಲಿ ಅವರು ಮಾಹಿತಿಯನ್ನು ಹಂಚಿಕೊಂಡರು.
NEET ಸೋರಿಕೆ ವಿವಾದ: ಸಚಿವರ ರಾಜೀನಾಮೆ ಸಿಗುವವರೆಗೂ ಹೋರಾಟ ಎಂದ CJP
ಸರ್ಕಾರವು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ 2024 ಕ್ಕೆ ತಿದ್ದುಪಡಿಗಳನ್ನು ಪರಿಚಯಿಸಲು ಮುಂದಾಗಿದ್ದು, ಇಡುಗ್ ಶುಕ್ರವಾರ ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೆ ಮಂಡಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣಗಳನ್ನು ನಿಭಾಯಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಕಾನೂನನ್ನು ಇದು ಒಳಗೊಳ್ಳಲಿದೆ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿ ತ್ವರಿತ ವಿಚಾರಣೆ ನಡೆದು ಅಪರಾಧಿಗಳಿಗೆ ಕಠಿಣ ಜೈಲು ಶಿಕ್ಷೆ ಮತ್ತು ಅಪಾರ ಪ್ರಮಾಣದ ದಂಡವನ್ನು ಖಾತ್ರಿ ಪಡಿಸಲಾಗುತ್ತದೆ.
ಸರ್ಕಾರದ ಮೂಲಗಳ ಮಾಹಿತಿಯ ಪ್ರಕಾರ ಅಪರಾಧಿಗಳಿಗೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಪ್ರಮಾಣವನ್ನು 5 ರಿಂದ 10 ವರ್ಷಗಳವರೆ ವಿಸ್ತರಿಸಲಾಗುತ್ತದೆ. ಕನಿಷ್ಠ ದಂಡವನ್ನು 10 ಲಕ್ಷ ರೂ.ಗಳಿಂದ 1 ಕೋಟಿ ರೂ. ಗಳಿಗೆ ಹೆಚ್ಚಿಸಬಹುದು ಎನ್ನಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಬಲವಾದ ಕ್ರಮಕ್ಕಾಗಿ ನಿಬಂಧನೆಗಳನ್ನು ಒಳಗೊಂಡಿರುವ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸುವ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭರವಸೆಯನ್ನು ನೀಡಿದ್ದಾರೆ. ಈ ಕುರಿತು ಗುರುವಾರ ರಾತ್ರಿ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಅವರು ವಿಡಿಯೋವನ್ನು ಪೋಸ್ಟ್ ಮಾಡಿ, ಪ್ರಸ್ತಾವಿತ ಶಾಸನದ ರೂಪರೇಷೆಗಳನ್ನು ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಸಂಪುಟ ಸಹೋದ್ಯೋಗಿಗಳ ಸಲಹೆಗಳನ್ನು ಪಡೆದು ಮುಂದಿನ ಕ್ರಮವನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿರುವ ಅವರು, ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ವಾರ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಬಲವಾದ ಕ್ರಮಕ್ಕಾಗಿ ನಿಬಂಧನೆಗಳನ್ನು ಹೊಂದಿರುವ ಮಸೂದೆಯನ್ನು ತರಲಾಗುವುದು ಮತ್ತು ಅದನ್ನು ಸಾಧ್ಯವಾದಷ್ಟು ಬೇಗ ಅಂಗೀಕರಿಸಲಾಗುವುದು ಈನ್ದು ತಿಳಿಸಿದ್ದಾರೆ.
ಸಿಜೆಪಿ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ಯುವತಿ ಮೃತಪಟ್ಟಿಲ್ಲ: ದೆಹಲಿ ಪೊಲೀಸರಿಂದ ಸ್ಪಷ್ಟನೆ
ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ದೀರ್ಘಕಾಲದ ಉಪವಾಸ ಸತ್ಯಾಗ್ರಹವನ್ನು ಮುರಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದರು.