3 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರದಿಂದಲೇ ಉಳುಮೆ; ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಗೆ ಸಚಿವ ಸಂಪುಟ ಅಸ್ತು
Karnataka Cabinet Meeting: ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಯಡಿ ಸರ್ಕಾರದ ವತಿಯಿಂದಲೇ ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆದು ರೈತರ ಜಮೀನುಗಳಲ್ಲಿ ಉಚಿತವಾಗಿ ಉಳುಮೆ ಮಾಡಿಕೊಡಲಾಗುತ್ತದೆ. 3 ಎಕರೆ ಕಡಿಮೆ ಕೃಷಿ ಭೂಮಿ ಹೊಂದಿರುವ ಬಡ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
-
ಬೆಂಗಳೂರು: 3 ಎಕರೆ ಕಡಿಮೆ ಕೃಷಿ ಭೂಮಿ ಹೊಂದಿರುವ ಬಡ ರೈತರಿಗೆ ಸರ್ಕಾರದಿಂದಲೇ ಉಳುಮೆ ಮಾಡಲು ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರ ನೂರು ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ರೈತರು, ಕಾರ್ಮಿಕರು ಹಾಗೂ ವಸತಿ ರಹಿತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿಯಲ್ಲಿ ನೂತನ ಕಾರ್ಯಕ್ರಮಗಳನ್ನು ಸರ್ಕಾರ ಘೋಷಿಸಿದೆ.
ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನದಂತೆ ರಾಜ್ಯದಲ್ಲಿ 15 ಲಕ್ಷ ಸೈಟು ಹಂಚಿಕೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶ್ರಮಿಕ್ ನಿವಾಸ್ ಹೆಸರಿನಲ್ಲಿ ಕಂಪನಿಗಳಿಂದ 10 ಸಾವಿರ ಮನೆ ಕಟ್ಟಿಕೊಟ್ಟರೆ, ಕಂಪನಿಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ಧನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
3 ಎಕರೆಗಿಂತ ಕಡಿಮೆ ಇರುವ ರೈತರು ಜಮೀನುಗಳಲ್ಲಿ ಸರ್ಕಾರವೇ ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಪಡೆದು ಉಚಿತವಾಗಿ ಉಳುಮೆ ಮಾಡಿ ಕೊಡಲಿದೆ. ಇದರಿಂದ 59 ಲಕ್ಷ ರೈತರಿಗೆ ವರದಾನವಾಗಲಿದೆ. ಜಿಲ್ಲೆಗೊಂದರಂತೆ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 152 ಕೋಟಿ ಅನುದಾನ ಮೀಸಲಿಟ್ಟಿದೆ.
ಕೃಷಿ ಇಲಾಖೆಯಿಂದ ಅನುಷ್ಠಾನದ ಜವಾಬ್ದಾರಿ ಹೊರಲಿದೆ. ಕೃಷಿಯಿಂದ ವಿಮುಕ್ತರಾಗುತ್ತಿರುವ ಬಡ ರೈತರಿಗೆ ಅನುಕೂಲವಾಗಲಿದೆ. ಗೌರಿಬಿದರಿನ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ತಮ್ಮ ಕ್ಷೇತ್ರದಲ್ಲಿ ಟ್ರ್ಯಾಕ್ಟರ್ ಖರೀದಿಸಿ ಬಡ ರೈತರ ಜಮೀನುಗಳಲ್ಲಿ ಉಳುಮೆ ಮಾಡುವ ಕಾರ್ಯ ಮಾಡಿ ಯಶ್ವಸಿಯಾಗಿದ್ದರು. ಇದನ್ನು ಗಮನಿಸಿದ ಸರ್ಕಾರ ರಾಜ್ಯದೆಲ್ಲೆಡೆ ಪ್ರಾಯೋಗಿಕವಾಗಿ ಯೋಜನೆ ಜಾರಿ ತರಲು ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು
- ಬಡವರಿಗೆ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ಸೈಟು ಹಂಚಲು ನಿರ್ಧರಿಸಲಾಗಿದ್ದು, 31 ಜಿಲ್ಲೆಗಳಿಂದ 15 ಲಕ್ಷ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಮೂರು ಹಂತಗಳಲ್ಲಿ 15 ಲಕ್ಷ ಸೈಟು ನೀಡಲು ಉದ್ದೇಶಿಸಲಾಗಿದ್ದು, ಮುಂದಿನ ಎರಡು ತಿಂಗಳೊಳಗೆ ಮೊದಲ ಹಂತದಲ್ಲಿ 5 ಲಕ್ಷ ನಿವೇಶನ ನೀಡಲಾಗುವುದು.
- ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಶ್ರಮಿಕ್ ನಿವಾಸ ಹೆಸರಿನಲ್ಲಿ ದೊಡ್ಡ ಕಂಪನಿಗಳಿಂದ ಹೇಳಿ 10 ಸಾವಿರ ಮನೆ ಕಟ್ಟಿಸಿಕೊಡಲಾಗುವುದು. ಇದಕ್ಕಾಗಿ ಕಂಪನಿಗಳಿಗೆ ವಿವಿಧ ರೀತಿಯ ಸಹಾಯ ಮಾಡಲಾಗುವುದು. ಮನೆ ನಿರ್ಮಾಣಕ್ಕಾಗಿ ಕೆಐಎಡಿಬಿಗೆ ಜಾಗ ಕೇಳಿದರೆ ಸಬ್ಸಿಡಿ ಸಹಿತ ಭೂಮಿ ಮಂಜೂರು ಮಾಡಲಾಗುವುದು.
- ನೂತನ ಜವಳಿ ಹಾಗೂ ಸಿದ್ದ ಉಡುಪು ನೀತಿ, 2026-2031ಕ್ಕೆ ಅನುಮೋದನೆ.
- ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರ ಅಥವಾ ಪಟ್ಟಣಗಳಲ್ಲಿ ಜಿಐಎಸ್ ಆಧಾರಿತ ರೋಡ್ ನೆಟ್ ವರ್ಕ್ ಗ್ರೀಡ್ ಪ್ಲ್ಯಾನ್‌ನಂತೆ ರಾಜ್ಯದ 172 ಸ್ಥಳೀಯ ಪ್ರದೇಶಗಳಲ್ಲಿ ಹೊರವರ್ತುಲ ರಸ್ತೆ (ರಿಂಗ್ ರೋಡ್ ) ನಿರ್ಮಾಣ. ರಸ್ತೆ ಸುತ್ತಮುತ್ತ 2 ಕೀ.ಮೀ. ಇಂಪ್ಯಾಕ್ಟ್ ಝೋನ್ ನಿರ್ಮಾಣ.
- ದೇಶದಲ್ಲಿ ಮೊದಲ ಬಾರಿಗೆ ಡ್ರೋನ್ ಪರೀಕ್ಷಾ ಸೌಲಭ್ಯ (ಟೆಸ್ಟಿಂಗ್ ಫೆಸಿಲಿಟಿ ಸೆಂಟರ್) ಕೇಂದ್ರ- ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆ, ಇದಕ್ಕಾಗಿ 42.83 ಕೋಟಿ ರೂ. ಮೀಸಲು.
- ಬೆಂಗಳೂರಿನ ಐಐಐಟಿಯಲ್ಲಿ ಎಐ ಹಬ್ ಆರಂಭಕ್ಕಾಗಿ 35 ಕೋಟಿ ವಿನಿಯೋಗ.
- ಶಕ್ತಿ ಯೋಜನೆ ಮಹಿಳಾ ಪ್ರಯಾಣಿಕರಿಗಾಗಿ ಶಕ್ತಿ ಸ್ಮಾರ್ಟ್ ಕಾರ್ಡ್, ಇದಕ್ಕಾಗಿ 237 ಕೋಟಿ ವೆಚ್ಚ ಪಿಪಿಪಿ ಮಾದರಿಯಲ್ಲಿ ಜಾರಿ .
- ರಾಜ್ಯದ 185 ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ "ಟೆಲಿ-ಐಸಿಯು ಯೋಜನೆಯನ್ನು ಜಾರಿಗೊಳಿಸಲು ಅಗತ್ಯವಿರುವ ಐಟಿ ಹಾರ್ಡ್ ವೇರ್ ಮೂಲಸೌಕರ್ಯದ ಖರೀದಿ, ಸರಬರಾಜು ಹಾಗೂ ನಿರ್ವಹಣೆಯ ರೂ 10.78 ಕೋಟಿಗಳ ಅಂದಾಜು ಮೊತ್ತದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ.
- ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ 300 mA ಮತ್ತು 500 mA ಎಕ್ಸ್-ರೇ ವ್ಯವಸ್ಥೆಗಳಲ್ಲಿ ಗರಿಷ್ಠ 162 ಘಟಕಗಳನ್ನು ಡಿಜಿಟಲ್ ರೇಡಿಯೋಗ್ರಫಿ (DR) ವ್ಯವಸ್ಥೆಗೆ ಉನ್ನತೀಕರಿಸುವ ರೂ.40.50 ಕೋಟಿಗಳ ಅಂದಾಜು ಮೊತ್ತದ ಕರ್ನಾಟಕ ಡಿಜಿಟಲ್ ರೇಡಿಯೋಗ್ರಫಿ ಮಿಷನ್ (KDRM) ಹಂತ-1ನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
- ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಕಿವಿ ಆರೈಕೆ ಹಾಗೂ ಶ್ರವಣ ಆರೈಕೆ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ 50 ತಾಲೂಕು ಆಸ್ಪತ್ರೆಗಳಿಗೆ ಕಿವಿ ಶಸ್ತ್ರಚಿಕಿತ್ಸೆ ಹಾಗೂ ಶ್ರವಣ ದೋಷ ತಪಾಸಣೆಗೆ ಅಗತ್ಯವಿರುವ ಉಪಕರಣಗಳನ್ನು ರೂ 20.39 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಹಾಗೂ ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬರಂತೆ 50 ಆಡಿಯಾಲಜಿಸ್ಟ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಆಡಳಿತಾತ್ಮಕ ಅನುಮೋದನೆ.
- ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಮತ್ತು ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಅನುಮತಿ.
- 2026-31ರವರೆಗಿನ ಕರ್ನಾಟಕ ಏರೋಸ್ಪೆಸ್ ನೀತಿಗೆ ಅನುಮೋದನೆ ನೀಡಲಾಗಿದೆ. ಏರೋಸ್ಪೇಸ್, ಡಿಫೆನ್ಸ್, ಏವಿಯೇಷನ್ ಉತ್ಪಾದನೆ, ನಾವೀನ್ಯತೆ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಕೇಂದ್ರವನ್ನಾಗಿ ಸ್ಥಾಪಿಸುವ ಉದ್ದೇಶವಿದೆ. ಮುಂದಿನ 5 ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಹೂಡಿಕೆ, 60 ಸಾವಿರ ಉದ್ಯೋಗ ಸೃಷ್ಟಿ ಗುರಿ.