ವೈರಲ್ ಸೋಂಕು, ಡಿಹೈಡ್ರೇಶನ್: ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು
Anna Hazare: ಭ್ರಷ್ಟಾಚಾರದ ವಿರೋಧಿ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ 87 ವರ್ಷದ ಅಣ್ಣಾ ಹಜಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈರಲ್ ಸೋಂಕು, ನಿರ್ಜಲೀಕರಣದಿಂದ ಬಳಲುತ್ತಿರುವ ಅವರನ್ನು ಮುಂಬೈನ ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದೆ. ಅವರು ಮೂತ್ರಪಿಂಡದ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ಮುಂಬೈ: ತೀವ್ರವಾದ ವೈರಲ್ ಸೋಂಕಿನಿಂದ (viral infection) ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರದ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅವರನ್ನು ಸೋಮವಾರ ಮುಂಬೈನ (Mumabi) ಬಾಂಬೆ ಆಸ್ಪತ್ರೆಯ (Bombay Hospital) ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ನಿರ್ಜಲೀಕರಣ (dehydration), ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ವೈದ್ಯರು ರೋಗ ನಿರ್ಣಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. 87 ವರ್ಷದ ಅವರು ತಮ್ಮ ಹುಟ್ಟೂರು ರಾಲೇಗನ್ ಸಿದ್ಧಿ ಗ್ರಾಮದ ಸಮೀಪವಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಾಂಬೆ ಆಸ್ಪತ್ರೆಯ ವೈದ್ಯರಾದ ಗೌತಮ್ ಬನ್ಸಾಲಿ ಅವರು ಅಣ್ಣಾ ಹಜಾರೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಗನಿರ್ಣಯ ಪರೀಕ್ಷೆ ವರದಿಗಳ ಆಧಾರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಣ್ಣಾ ಹಜಾರೆ ಅವರು ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಕೇಳಿ ಅವರ ಬೆಂಬಲಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ತ್ವರಿತ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ರಾಜ್ಯದ 16 ಸಿಹಿ ಖಾದ್ಯ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ; ಅವಧಿ ಮೀರಿದ ವಸ್ತುಗಳ ಜಪ್ತಿ
ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿರುವ ಅಣ್ಣಾ ಹಜಾರೆ ಜಲಾನಯನ ಅಭಿವೃದ್ಧಿ, ಅರಣ್ಯೀಕರಣ, ಗ್ರಾಮೀಣ ಸ್ವಾವಲಂಬನೆ ಮತ್ತು ವ್ಯಸನ ನಿರ್ಮೂಲನೆಯಲ್ಲಿ ಹಲವು ಕ್ರಮಗಳನ್ನು ಆಡಳಿತ ಕೈಗೊಳ್ಳುವಂತೆ ಮಾಡಿ ಮಹಾರಾಷ್ಟ್ರದ ರಾಲೆಗನ್ ಸಿದ್ಧಿಯನ್ನು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದ್ದರು.
ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಮತ್ತು ಜನ ಲೋಕಪಾಲ್ ಮಸೂದೆ ಅನುಷ್ಠಾನಕ್ಕಾಗಿ ಉಪವಾಸ ಸತ್ಯಾಗ್ರಹ ಮತ್ತು ನಿರಂತರ ಚಳುವಳಿಗಳನ್ನು ನಡೆಸಿದ್ದರು. ಸಮಾಜ ಮತ್ತು ಗ್ರಾಮೀಣ ಅಭಿವೃದ್ಧಿಗೆ ಅವರ ಸೇವೆಯನ್ನು ಗುರುತಿಸಿ, ಭಾರತ ಸರ್ಕಾರವು 1992ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಮಹಾರಾಷ್ಟ್ರ ಭೂಷಣ ಸೇರಿದಂತೆ ಹಲವಾರು ಪುರಸ್ಕಾರಗಳು ಅವರಿಗೆ ಲಭ್ಯವಾಗಿವೆ.
ಕಳೆದ ಜುಲೈ ತಿಂಗಳಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆ ಕುರಿತು ವಿದ್ಯಾರ್ಥಿಗಳನ್ನು ಬೆಂಬಲಿಸಿ ಅಣ್ಣಾ ಹಜಾರೆ ಅವರು ಕೂಡ ಹೇಳಿಕೆಯನ್ನು ನೀಡಿದ್ದರು. ಯುವಕರು ಮತ್ತು ವಿದ್ಯಾರ್ಥಿಗಳು ದೇಶದ ಪ್ರಮುಖ ಶಕ್ತಿಯನ್ನು ಪ್ರತಿನಿಧಿಸುತ್ತಾರೆ ಮತ್ತು ಕೆಳ ಹಂತದ ಅಧಿಕಾರಿಗಳ ಮೇಲೆ ಆರೋಪ ಹೊರಿಸುವ ಬದಲು ಹಿರಿಯ ನಾಯಕತ್ವದ ಮೇಲೆ ಹೊಣೆಗಾರಿಕೆ ಇರಬೇಕು ಎಂದು ಅವರು ತಿಳಿಸಿದ್ದರು.
ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಅವರು, ಪ್ರಮುಖ ಸಾರ್ವಜನಿಕ ಸಮಸ್ಯೆಗೆ ಸಚಿವರ ರಾಜೀನಾಮೆಯನ್ನು ಅಂಗೀಕರಿಸುವುದು ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ಬಲಪಡಿಸುತ್ತದೆ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಬಲವಾದ ಸಂದೇಶವನ್ನು ರವಾನಿಸುತ್ತದೆ ಎಂದು ವಾದಿಸಿದರು.
ಜ್ಞಾನೇಂದ್ರ ಕುಮಾರ್ ಪ್ರಶ್ನೆ ಪತ್ರಿಕೆ ಸೋರಿಕೆ ರೂವಾರಿ: ಕೆಪಿಎಸ್ʼಸಿ ಹಗರಣ ಬಗೆದಷ್ಟೂ ಅಕ್ರಮ
ಅಹಲ್ಯಾನಗರದಲ್ಲಿ ಮೌನ ಉಪವಾಸ ನಡೆಸಿದ್ದ ಅವರು ದೆಹಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಬಲಪ್ರಯೋಗ ಮತ್ತು ಲಾಠಿ ಚಾರ್ಜ್ ಮಾಡುವುದನ್ನು ಖಂಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಮಾತುಕತೆಗಳೇ ಉತ್ತಮ. ಸಾರ್ವಜನಿಕ ಕುಂದುಕೊರತೆಗಳನ್ನು ಬಲಪ್ರಯೋಗಕ್ಕಿಂತ ಹೆಚ್ಚಾಗಿ ಅಹಿಂಸಾತ್ಮಕ ಚರ್ಚೆಯ ಮೂಲಕ ಪರಿಹರಿಸಬೇಕು ಎಂದು ತಿಳಿಸಿದ್ದರು.