ಕೊನೆಯ ಮಾವೋವಾದಿ, ಐವರು ಸಹಚರರಿಗಾಗಿ ಹುಡುಕಾಟ: ಮಾಹಿತಿ ನೀಡಿದವರಿಗೆ 1.34 ಕೋಟಿ ರುಪಾಯಿ ಬಹುಮಾನ ಘೋಷಣೆ
Anti-Maoist operation: ಆರು ಮಾವೋವಾದಿಗಳ ಮಾಹಿತಿ ನೀಡಿದವರಿಗೆ 1.34 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್‌ನ ಪೊಲೀಸರು ಘೋಷಿಸಿದ್ದಾರೆ. ಪ್ರಮುಖ ಮಾವೋವಾದಿ ಅಸಿಮ್ ಮಂಡಲ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ರುಪಾಯಿ ನಗದು ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ರಾಂಚಿ, ಆ. 31: ಆರು ಮಾವೋವಾದಿಗಳ ಮಾಹಿತಿ ನೀಡಿದವರಿಗೆ 1.34 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಜಾರ್ಖಂಡ್‌ನ (Jharkhand) ಪೂರ್ವ ಸಿಂಗ್‌ಭೂಮ್‌ನ ಪೊಲೀಸರು ಘೋಷಿಸಿದ್ದಾರೆ. ಇದರಲ್ಲಿ ಕೊನೆಯ ಪ್ರಮುಖ ಮಾವೋವಾದಿ ಅಸಿಮ್ ಮಂಡಲ್ ಪತ್ತೆಗೆ ಖೆಡ್ಡಾ ತೋಡಲಾಗಿದೆ. ಮಂಡಲ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ರುಪಾಯಿ ಬಹುಮಾನ ಸಿಗಲಿದೆ ಪೊಲೀಸರು ತಿಳಿಸಿದ್ದಾರೆ. ಉಳಿದ ಐವರು ಆತನ ಸಹಚರರು (Anti-Maoist operation). ಆರು ಮಾವೋವಾದಿಗಳು ಪಶ್ಚಿಮ ಸಿಂಗ್‌ಭೂಮ್ ತೊರೆದು ಪೂರ್ವ ಸಿಂಗ್‌ಭೂಮ್ ಮತ್ತು ನೆರೆಯ ಪಶ್ಚಿಮ ಬಂಗಾಳದ ಪುರುಲಿಯಾ, ಜಾರ್ಗ್ರಾಮ್ ಮತ್ತು ಪಶ್ಚಿಮ ಮಿಡ್ನಾಪುರದಲ್ಲಿ ಅಡಗಿಕೊಂಡಿರುವ ಶಂಕೆಯಿದೆ.
ಜಾರ್ಖಂಡ್‌ನಲ್ಲಿ ತೀವ್ರಗೊಳಿಸಲಾದ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳ ಫಲವಾಗಿ, 2 ಕೋಟಿ ರುಪಾಯಿ ಬಹುಮಾನ ಹೊಂದಿದ್ದ ಮಾವೋವಾದಿ ಪಾಲಿಟ್‌ಬ್ಯುರೊ ಸದಸ್ಯ ಮಿಸಿರ್ ಬೆಸ್ರಾನ ಬಂಧನವಾಗಿದೆ. ಅಲ್ಲದೆ, ಸೆಂಟ್ರಲ್ ಕಮಿಟಿ ಸದಸ್ಯರಾದ ಪತಿರಾಮ್ ಮಾಝಿ, ಲಾಲ್‌ಚಂದ್ ಹೆಂಬ್ರಾಮ್ ಮತ್ತು ಮೂರು ಡಜನ್ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದ್ದು, ಇದು ಸರಣಿ ಸಾಮೂಹಿಕ ಶರಣಾಗತಿಗೆ ಕಾರಣವಾಗಿದೆ. ಈ ಮೂಲಕ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯನ್ನು ಮಾವೋವಾದಿ ಮುಕ್ತ ಎಂದು ಘೋಷಿಸಲಾಗಿದೆ.
ಆರು ಮಾವೋವಾದಿಗಳಾದ ಅಸಿಮ್ ಮಂಡಲ್, ರಾಮಪ್ರಸಾದ್ ಮರ್ಡಿ, ಆತನ ಪತ್ನಿ ಮಿತಾ, ಮಂಗಲ್ ಸರ್ದಾರ್, ಮಾಲ್ತಿ ಮುರ್ಮು ಮತ್ತು ಬುಲು ಮಹಾತೋ ಅವರ ಪೋಸ್ಟರ್‌ಗಳನ್ನು 25 ಸ್ಥಳಗಳಲ್ಲಿ ಅಂಟಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ದಯಾನಂದ ಕುಮಾರ್ ತಿಳಿಸಿದ್ದಾರೆ. ಈ ಮಾವೋವಾದಿಗಳ ಬಗ್ಗೆ ಯಾವುದೇ ಮಾಹಿತಿ ತಿಳಿದವರು ಹಂಚಿಕೊಳ್ಳುವಂತೆ ಜನರನ್ನು ವಿನಂತಿಸಲಾಗಿದೆ. ಮಾಹಿತಿದಾರರ ಹೆಸರನ್ನು ರಹಸ್ಯವಾಗಿಡುವ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದರು.
ಒಂದು ಕೋಟಿ ರುಪಾಯಿ ಬಹುಮಾನವಿದ್ದ, ದೇಶದ ಕೊನೆಯ ಸಕ್ರಿಯ ಮಾವೋವಾದಿ ಮಿಸಿರ್ ಬೆಸ್ರ ಅರೆಸ್ಟ್
ಈ ಮಾವೋವಾದಿಗಳು ಭೂಗತರಾಗಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಸಲಾಗುತ್ತಿರುವ ತೀವ್ರ ಶೋಧ ಕಾರ್ಯಾಚರಣೆ ಮತ್ತು ಗಸ್ತು ತಿರುಗುವಿಕೆಯ ಸಮಯದಲ್ಲಿ ಅವರ ಯಾವುದೇ ಬಹಿರಂಗ ಚಟುವಟಿಕೆಗಳು ಅಥವಾ ಸಂಚಾರಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಪೊಲೀಸ್ ಪಡೆಗಳು ಮತ್ತು ಕೇಂದ್ರ ಅರೆಸೈನಿಕ ಪಡೆಗಳು ಈ ಕೊನೆಯ ಮಾವೋವಾದಿಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಅವರೆಲ್ಲರನ್ನೂ ಸೆರೆಹಿಡಿಯುವವರೆಗೆ ಅಥವಾ ನಿರ್ಮೂಲನೆ ಮಾಡುವವರೆಗೆ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸಿಮ್ ಮಂಡಲ್ ಎಲ್ಲಿದ್ದಾನೆ ಎಂಬುದರ ಕುರಿತು ಗುರ್ಜೋರ್, ಮಿರ್ಗಿಟಾಂಡ್ ಮತ್ತು ಕಾಸಿದಿಹ್ ಗ್ರಾಮಗಳಲ್ಲಿ ಜನರನ್ನು ಪ್ರಶ್ನಿಸಲಾಗಿದೆ. 40-55 ಕಿ.ಮೀ. ವ್ಯಾಪ್ತಿಯಲ್ಲಿರುವ ದಾಲ್ಮಾ ಬೆಟ್ಟಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಅಸಿಮ್ ಮಂಡಲ್ ಸೇರಿ ಈಗ ಕೇವಲ 18 ನಕ್ಸಲರು ಮಾತ್ರ ತಲೆಮರೆಸಿಕೊಂಡಿದ್ದಾರೆ. ಜನವರಿಯಿಂದ ಆಗಸ್ಟ್‌ವರೆಗೆ 113 ಮಾವೋವಾದಿಗಳನ್ನು ಬಂಧಿಸಲಾಗಿದೆ, 50 ಮಂದಿ ಶರಣಾಗಿದ್ದಾರೆ ಮತ್ತು 22 ನಕ್ಸಲರು ಸಾವಿಗೀಡಾಗಿದ್ದಾರೆ. ಈ ಅವಧಿಯಲ್ಲಿ 111 ಶಸ್ತ್ರಾಸ್ತ್ರಗಳು, 9904 ಸುತ್ತುಗಳ ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು 6 ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ನರೇಂದ್ರ ಕುಮಾರ್ ಸಿಂಗ್ ಹೇಳಿದರು.