Kotak Mahindra Bank: ಕೋಟಕ್ ಮಹೀಂದ್ರಾ ಬ್ಯಾಂಕ್‌ನ ನೂತನ ಎಂಡಿ ಮತ್ತು ಸಿಇಒ ಆಗಿ ಅನೂಪ್ ಕುಮಾರ್ ಸಹಾ ನೇಮಕ: ಆರ್‌ಬಿಐ ಅನುಮೋದನೆ
ಅನೂಪ್ ಕುಮಾರ್ ಸಹಾ ಅವರು ಪ್ರಸ್ತುತ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಪೂರ್ಣಾವಧಿ ನಿರ್ದೇಶಕರಾಗಿ (ಕಾರ್ಯನಿರ್ವಾಹಕ ನಿರ್ದೇಶಕ) ಸೇವೆ ಸಲ್ಲಿಸುತ್ತಿದ್ದಾರೆ. 2026ರ ಜನವರಿಯಲ್ಲಿ ಬ್ಯಾಂಕ್‌ಗೆ ಸೇರಿದ ಇವರು, ಮಾರ್ಚ್ 2026ರಿಂದ ರಿಟೇಲ್ ಬ್ಯಾಂಕಿಂಗ್, ಡೇಟಾ ಅನಾಲಿಟಿಕ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗಗಳ ಮುಖ್ಯಸ್ಥರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
-
ಬೆಂಗಳೂರು: ಖಾಸಗಿ ರಂಗದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank)ಲಿಮಿಟೆಡ್‌ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಅನೂಪ್ ಕುಮಾರ್ ಸಹಾ(Anup Kumar Saha) ಅವರನ್ನು ನೇಮಕ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಅನುಮೋದನೆ ನೀಡಿದೆ ಎಂದು ಬ್ಯಾಂಕ್ ಗುರುವಾರ ಪ್ರಕಟಿಸಿದೆ.
ಮೂರು ವರ್ಷಗಳ ಅವಧಿಗೆ ಈ ನೇಮಕಾತಿ ನಡೆದಿದ್ದು, 2027ರ ಜನವರಿ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ವಿಧ್ಯುಕ್ತಗೊಳಿಸಲು ಹಾಗೂ ಷೇರುದಾರರ (ಸದಸ್ಯರ) ಒಪ್ಪಿಗೆ ಪಡೆಯಲು ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ಸಕಾಲದಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ.
ಅನೂಪ್ ಕುಮಾರ್ ಸಹಾ ಅವರು ಪ್ರಸ್ತುತ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಪೂರ್ಣಾವಧಿ ನಿರ್ದೇಶಕರಾಗಿ (ಕಾರ್ಯನಿರ್ವಾಹಕ ನಿರ್ದೇಶಕ) ಸೇವೆ ಸಲ್ಲಿಸುತ್ತಿದ್ದಾರೆ. 2026ರ ಜನವರಿಯಲ್ಲಿ ಬ್ಯಾಂಕ್‌ಗೆ ಸೇರಿದ ಇವರು, ಮಾರ್ಚ್ 2026ರಿಂದ ರಿಟೇಲ್ ಬ್ಯಾಂಕಿಂಗ್, ಡೇಟಾ ಅನಾಲಿಟಿಕ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗಗಳ ಮುಖ್ಯಸ್ಥರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: Kotak: ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ನೆರವಾಗಲು ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ಆರಂಭಿಸಿದ ಕೋಟಕ್
ನೇಮಕಾತಿ ಕುರಿತು ಪ್ರತಿಕ್ರಿಯಿಸಿದ ಸಿ.ಎಸ್.ರಾಜನ್(C S Rajan) ಅವರು, "ರಿಸರ್ವ್ ಬ್ಯಾಂಕ್‌ನ ಅನು ಮೋದನೆಯನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಅನೂಪ್ ಅವರು ಬ್ಯಾಂಕಿಂಗ್ ಹಾಗೂ ಹಣಕಾಸು ಸೇವಾ ವಲಯದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಪ್ರಸ್ತುತ ಹುದ್ದೆ ಯಲ್ಲೂ ಬ್ಯಾಂಕ್‌ನ ವ್ಯವಹಾರಗಳಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಬ್ಯಾಂಕ್ ತನ್ನ ಬಲಿಷ್ಠ ಅಡಿಪಾಯದ ಮೇಲೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ಸಂಸ್ಥೆ ಯನ್ನು ಮತ್ತಷ್ಟು ಶಕ್ತಿಯುತಗೊಳಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಮುಂದುವರಿಸಲು ಅನೂಪ್ ಅವರ ನಾಯಕತ್ವವನ್ನು ಎದುರುನೋಡುತ್ತಿದ್ದೇವೆ. ಬ್ಯಾಂಕ್ ಅನ್ನು ಮುಂದಿನ ಹಂತದ ಬೆಳವಣಿಗೆಯತ್ತ ಮುನ್ನಡೆಸಲಿರುವ ಅವರಿಗೆ ಆಡಳಿತ ಮಂಡಳಿಯ ಪರವಾಗಿ ಶುಭ ಹಾರೈಸು ತ್ತೇನೆ" ಎಂದರು.
ಬ್ಯಾಂಕ್ ನ ಹಾಲಿ ಎಂಡಿ ಮತ್ತು ಸಿಇಒ ಅಶೋಕ್ ವಾಸ್ವಾನಿ(Ashok Vasavani) ಮಾತನಾಡಿ, "ಅನೂಪ್ ಅವರು ವ್ಯವಹಾರ, ಗ್ರಾಹಕ ವಿಭಾಗಗಳು ಮತ್ತು ಕಾರ್ಯಾಚರಣೆಗಳಲ್ಲಿ ಆಳವಾದ ಅನುಭವ ಹೊಂದಿರುವ ಪರಿಣಿತ ಹಣಕಾಸು ಕ್ಷೇತ್ರದ ನಾಯಕರಾಗಿದ್ದಾರೆ. ಕೋಟಕ್ ಬ್ಯಾಂಕ್ ಸೇರಿದಾಗಿನಿಂದಲೂ ನಮ್ಮ ತಂಡಗಳೊಂದಿಗೆ ನಿಕಟವಾಗಿ ಶ್ರಮಿಸಿದ್ದು, ಮುಂದಿರುವ ಅವಕಾಶಗಳ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ. ಅನೂಪ್ ಅವರು ಕೊಟಕ್‌ನ ಬಲಿಷ್ಠ ಅಡಿಪಾಯ ವನ್ನು ಮತ್ತಷ್ಟು ವಿಸ್ತರಿಸಿ, ಗ್ರಾಹಕರೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಶಿಸ್ತು ಮತ್ತು ಬದ್ಧತೆಯಿಂದ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂಬ ಅಚಲ ವಿಶ್ವಾಸ ನನಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ನೇಮಕಾತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅನೂಪ್ ಕುಮಾರ್ ಸಹಾ ಅವರು, "ನಿರ್ದೇಶಕ ಮಂಡಳಿಯು ನನ್ನ ಮೇಲಿಟ್ಟಿರುವ ನಂಬಿಕೆಗೆ ಕೃತಜ್ಞನಾಗಿದ್ದೇನೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ಸಂಸ್ಥೆಯನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ನನಗೆ ಸಂದ ಗೌರವ. ಕೋಟಕ್ ಬಲಿಷ್ಠ ನೆಲೆ, ವಿಶ್ವಾಸಾರ್ಹ ಬ್ರ್ಯಾಂಡ್ ಹಾಗೂ ಅತ್ಯಂತ ಪ್ರತಿಭಾವಂತ ತಂಡಗಳನ್ನು ಒಳಗೊಂಡಿದೆ. ಗ್ರಾಹಕರೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು, ಷೇರುದಾರರು ಮತ್ತು ಪ್ರತಿಯೊಬ್ಬ ಪಾಲುದಾರರಿಗೂ ಸುಸ್ಥಿರ ಮೌಲ್ಯವನ್ನು ನಿರ್ಮಿಸಲು ಸಹೋದ್ಯೋಗಿ ಗಳೊಂದಿಗೆ ಒಟ್ಟಾಗಿ ನಿರಂತರವಾಗಿ ಶ್ರಮಿಸಲಿದ್ದೇನೆ. ಗ್ರಾಹಕರ ಹಿತಾಸಕ್ತಿ ಕಾಯುವುದು ಹಾಗೂ ಸರಿಯಾದ ಮಾರ್ಗದಲ್ಲಿ ಮುನ್ನಡೆಯುವುದೇ ನಮ್ಮ ಪ್ರಮುಖ ಆದ್ಯತೆಯಾಗಿರಲಿದೆ" ಎಂದು ಹೇಳಿದರು.
ಅನೂಪ್ ಸಹಾ ಅವರು ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಸೇರಿದಂತೆ ಹಣಕಾಸು ಸೇವಾ ವಲಯದಲ್ಲಿನ 25 ವರ್ಷಗಳ ಅನುಭವದೊಂದಿಗೆ ಒಟ್ಟು 32 ವರ್ಷಗಳಿಗೂ ಹೆಚ್ಚಿನ ಸುದೀರ್ಘ ವೃತ್ತಿಪರ ಹಿನ್ನೆಲೆ ಹೊಂದಿದ್ದಾರೆ. ಕೋಟಕ್ ಬ್ಯಾಂಕ್ ಸೇರ್ಪಡೆ ಗೊಳ್ಳುವ ಮುನ್ನ ಅವರು ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಹಿರಿಯ ನಾಯಕತ್ವದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ, ಕೊನೆಯದಾಗಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮೊದಲು ಐಸಿಐಸಿಐ ಬ್ಯಾಂಕ್ ಲಿಮಿಟೆಡ್‌ನಲ್ಲಿ 14 ವರ್ಷಗಳ ಕಾಲ ರಿಟೇಲ್ ಸೆಕ್ಯೂರ್ಡ್ ಅಸೆಟ್ಸ್, ಬಿಸಿನೆಸ್ ಇಂಟೆಲಿಜೆನ್ಸ್, ರಿಟೇಲ್ ಮತ್ತು ಗ್ರಾಮೀಣ ವಸೂಲಾತಿ, ಕ್ರೆಡಿಟ್ ಕಾರ್ಡ್ಸ್ ಹಾಗೂ ರಿಟೇಲ್ ಸ್ಟ್ರಕ್ಚರ್ಡ್ ಫೈನಾನ್ಸ್ ವಿಭಾಗಗಳ ಉಸ್ತುವಾರಿ ವಹಿಸಿದ್ದರು.
ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಜಿಇ ಕ್ಯಾಪಿಟಲ್ ಸಂಸ್ಥೆಯಲ್ಲಿ ಕ್ರೆಡಿಟ್ ಕಾರ್ಡ್, ಮಾರಾಟ ಮತ್ತು ಅನಾಲಿಟಿಕ್ಸ್ ವಿಭಾಗಗಳಲ್ಲಿ ಹಾಗೂ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿ ಎಚ್ ಇ ಎಲ್) ಸಂಸ್ಥೆಯಲ್ಲಿ ಪ್ರೊಡಕ್ಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಪ್ರತಿಷ್ಠಿತ ಐಐಟಿ ಖರಗ್‌ಪುರದಿಂದ ಬಿ.ಟೆಕ್ ಎಂಜಿನಿಯರಿಂಗ್ ಪದವಿ ಹಾಗೂ ಐಐಎಂ ಲಖನೌ ದಿಂದ ಎಂಬಿಎ ಪದವಿ ಪಡೆದಿರುವ ಹೆಗ್ಗಳಿಕೆ ಇವರದ್ದಾಗಿದೆ.