ಮಿತವ್ಯಯ ಕ್ರಮ ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ: ಸಚಿವರ ಪ್ರವಾಸ, ಔತಣಕೂಟಗಳಿಗೆ ಬ್ರೇಕ್
ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಜಾಗತಿಕ ತೈಲ ಬೆಲೆ ಏರಿಕೆಯ ಹಿನ್ನೆಲೆ ಕೇಂದ್ರ ಸರ್ಕಾರ ಮಿತವ್ಯಯ ಕ್ರಮಗಳನ್ನು ಆರಂಭಿಸಿದೆ. ಸಚಿವರು ಮತ್ತು ಅಧಿಕಾರಿಗಳ ಅನಗತ್ಯ ಪ್ರವಾಸ, ಭವ್ಯ ಔತಣಕೂಟಗಳಿಗೆ ಕಡಿವಾಣ ಹಾಕಲಾಗುತ್ತಿದ್ದು, ವಿಡಿಯೋ ಕಾನ್ಫರೆನ್ಸ್, ವರ್ಕ್ ಫ್ರಮ್ ಹೋಂ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಮೇ 12: ಪಶ್ಚಿಮ ಏಷ್ಯಾದ (West Asia) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಕಠಿಣ ಮಿತವ್ಯಯ ಕ್ರಮಗಳನ್ನು ತನ್ನಿಂದಲೇ ಆರಂಭಿಸಲು ಮುಂದಾಗಿದೆ. ಸಾರ್ವಜನಿಕರಿಗೆ ಮನವಿ ಮಾಡುವ ಮೊದಲು, ಸರ್ಕಾರವು ಸಚಿವರು ಮತ್ತು ಅಧಿಕಾರಿಗಳ ಅನಗತ್ಯ ಪ್ರವಾಸ ಹಾಗೂ ಭವ್ಯ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಮೂಲಕ ಮಾದರಿಯಾಗಲು ನಿರ್ಧರಿಸಿದೆ.
ಮೂಲಗಳ ಪ್ರಕಾರ, ವಿವಿಧ ಸಚಿವಾಲಯಗಳಿಗೆ ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಇದರ ಭಾಗವಾಗಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಅನಗತ್ಯ ವಿದೇಶಿ ಹಾಗೂ ದೇಶೀಯ ಪ್ರವಾಸಗಳನ್ನು ರದ್ದುಗೊಳಿಸಲು ಅಥವಾ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಸೆಮಿನಾರ್‌ಗಳು ಮತ್ತು ಸಮ್ಮೇಳನಗಳನ್ನು ನೇರವಾಗಿ ನಡೆಸುವ ಬದಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆನ್‌ಲೈನ್‌ನಲ್ಲಿ ನಡೆಸಲು ಆದ್ಯತೆ ನೀಡಲಾಗುವುದು.
ಸಾರ್ವಜನಿಕ ಸಾರಿಗೆ ಮತ್ತು ವರ್ಕ್ ಫ್ರಮ್ ಹೋಂ
ಹೊಸದಿಲ್ಲಿಯ ಕರ್ತವ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮೆಟ್ರೋ ಅಥವಾ ಇತರ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ. ಜತೆಗೆ, ಸಂಚಾರಕ್ಕಾಗಿ ವ್ಯಯವಾಗುವ ಇಂಧನ ಉಳಿಸಲು 'ವರ್ಕ್ ಫ್ರಮ್ ಹೋಂ' ಅಥವಾ ಹೈಬ್ರಿಡ್ ಕೆಲಸದ ವಿಧಾನವನ್ನು ವಿಸ್ತರಿಸುವ ಬಗ್ಗೆಯೂ ಇಲಾಖೆಗಳು ಪರಿಶೀಲಿಸುತ್ತಿವೆ. ಭಾರಿ ಇಂಧನ ಮತ್ತು ಅಡುಗೆ ಅನಿಲ ಬಳಕೆಯಾಗುವ ದೊಡ್ಡ ಸರ್ಕಾರಿ ಔತಣಕೂಟಗಳನ್ನು ಕೂಡ ಕಡಿತಗೊಳಿಸಲಾಗುವುದು.
ವಿನೇಶ ಫೋಗಟ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿ: ಪಿಎಂ ಮೋದಿಗೆ ಸಾಕ್ಷಿ ಮಲಿಕ್ ಮನವಿ!
ಖಾಸಗಿ ವಲಯಕ್ಕೂ ಮುನ್ಸೂಚನೆ
ಸರ್ಕಾರದ ಈ ಆಂತರಿಕ ಕ್ರಮಗಳು ಮುಂದಿನ ದಿನಗಳಲ್ಲಿ ಖಾಸಗಿ ವಲಯಕ್ಕೂ ವಿಸ್ತರಣೆಯಾಗುವ ಸಾಧ್ಯತೆಯಿದೆ. ಖಾಸಗಿ ಕಂಪನಿಗಳಲ್ಲಿಯೂ ಕಾರ್ ಪೂಲಿಂಗ್, ಅನಗತ್ಯ ವಾಹನ ಸಂಚಾರ ಕಡಿತ ಮತ್ತು ರಿಮೋಟ್ ಕೆಲಸಕ್ಕೆ ಉತ್ತೇಜನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದರೆ, ದೊಡ್ಡ ಸಾಮಾಜಿಕ ಸಮಾರಂಭಗಳು ಮತ್ತು ವಿವಾಹಗಳ ಮೇಲೂ ಕೆಲವು ನಿಯಂತ್ರಣಗಳನ್ನು ಹೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಆರ್ಥಿಕ ಒತ್ತಡ ಮತ್ತು ಇಂಧನ ನಿರ್ವಹಣೆ
ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದಲ್ಲಿ ಇಂಧನ ಕೊರತೆಯಿಲ್ಲ ಎಂದು ಭರವಸೆ ನೀಡಿದ್ದರೂ, ತೈಲ ಕಂಪನಿಗಳು ಪ್ರತಿದಿನ ಸುಮಾರು 1,000 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿದೆ. ಜಾಗತಿಕ ತೈಲ ಬೆಲೆ ಏರಿಕೆಯ ಹೊರೆಯು ಸರ್ಕಾರದ ಬೊಕ್ಕಸದ ಮೇಲೆ ಬೀರುತ್ತಿರುವುದು ಹಣಕಾಸು ಸಚಿವಾಲಯದ ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮನವಿಯ ಬೆನ್ನಲ್ಲೇ, "ಇದು ಕೇವಲ ಹಣ ಉಳಿಸುವ ವಿಷಯವಲ್ಲ, ಬದಲಿಗೆ ಇಂಧನ ಉಳಿಸುವ ಮೂಲಕ ಬಿಕ್ಕಟ್ಟನ್ನು ತಡೆಯುವ ಪ್ರಯತ್ನ" ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಈ ಮಿತವ್ಯಯದ ಹಾದಿಯು ದೇಶದ ವಿತ್ತೀಯ ಸ್ಥಿರತೆಯನ್ನು ಕಾಪಾಡುವಲ್ಲಿ ನಿರ್ಣಾಯಕವಾಗಲಿದೆ.