ಪ್ರಧಾನಿ ಮೋದಿ ದೇಶದ್ರೋಹಿ ಎಂದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೇಶ ದ್ರೋಹಿಗಳು ಎಂದು ಹೇಳಿದ್ದು, ಇದ್ದಕ್ಕೆ ಬಿಜೆಪಿ ನಾಯಕರು ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಸಂಗ್ರಹ ಚಿತ್ರ -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM narendra modi), ಕೇಂದ್ರ ಗೃಹ ಸಚಿವ ಅಮಿತ್ ಶಾ (amit shah) ದೇಶ ದ್ರೋಹಿಗಳು. ಆರ್‌ಎಸ್‌ಎಸ್ (RSS) ಸಂಘಟನೆ ಕೂಡ ದೇಶದ್ರೋಹಿಯೇ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (rahul gandhi) ಹೇಳಿರುವುದು ಬಿಜೆಪಿ (BJP) ನಾಯಕರನ್ನು ಕೆರಳಿಸಿದೆ. ಉತ್ತರ ಪ್ರದೇಶದ (uttar pradesh) ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದರ ಹೇಳಿಕೆಗಳಿಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸಂಸದರು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದೆ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಕಾರ್ಯಕರ್ತರು ನಿಮ್ಮ ಬಳಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಮಾತನಾಡುತ್ತಾರೆ. ಅವರ ಮುಖವನ್ನು ನೋಡಿ, ನಿಮ್ಮ ಪ್ರಧಾನಿ ದೇಶದ್ರೋಹಿ, ನಿಮ್ಮ ಗೃಹ ಸಚಿವರು ದೇಶದ್ರೋಹಿ, ನಿಮ್ಮ ಸಂಘಟನೆ ದೇಶದ್ರೋಹಿ. ನೀವು ಭಾರತವನ್ನು ಮಾರುವ ಕೆಲಸ ಮಾಡಿದ್ದೀರಿ. ನೀವು,ನಿಮ್ಮ ಸಂಘಟನೆ ನಮ್ಮ ಸಂವಿಧಾನ, ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಮೇಲೆ ದಾಳಿ ಮಾಡಿದೆ ಎಂದು ಹೇಳಿ ಎಂದಿದ್ದರು.
ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪ್ರಧಾನಿ ಮೋದಿ ಅವರು ಮೆಲೋಡಿ ಕ್ಯಾಂಡಿ ಪ್ಯಾಕ್ ನೀಡುತ್ತಿರುವ ವೈರಲ್ ವಿಡಿಯೋವನ್ನು ಟೀಕಿಸಿದರು.
ದೇಶದಲ್ಲಿ ಆರ್ಥಿಕ ತಲ್ಲಣ ಉಂಟಾಗಿದ್ದರೆ ಪ್ರಧಾನಿ ಮೋದಿ ಅವರು ಇಟಲಿಯಲ್ಲಿ ಮಿಠಾಯಿಗಳನ್ನು ಹಂಚುತ್ತಿದ್ದಾರೆ. ದೇಶದ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳೆಲ್ಲರೂ ಕಣ್ಣೀರು ಹಾಕುತ್ತಿದ್ದರೆ ಪ್ರಧಾನಿ ಮೋದಿ ಅವರು ನಗುತ್ತಾ ರೀಲ್‌ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ಒಂದು ಪ್ರಹಸನ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಭಾರತದ ವಿರುದ್ಧ ಹೋರಾಡಲು ಬಯಸುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಹೇಳಿಕೆಗಳು ಅರಾಜಕ ಮತ್ತು ವಿಭಜಕ ಮನಸ್ಥಿತಿಯನ್ನು ಬಹಿರಂಗಪಡಿಸುತ್ತವೆ ಎಂದು ತಿಳಿಸಿದ್ದಾರೆ.
ಭಾರತೀಯ ರಾಜಕೀಯದಲ್ಲಿ ಸಮಗ್ರತೆ ಮತ್ತು ಪರಸ್ಪರ ಗೌರವದ ಸಂಪ್ರದಾಯವಿದೆ. ಇಂತಹ ಅಸಭ್ಯ ಭಾಷೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಚುನಾವಣಾ ಸೋಲುಗಳಿಂದ ಅವರು ಹತಾಶರಾಗಿದ್ದಾರೆ. ಅವರ ಪೂರ್ವಜರು ದೇಶದ ಭೂಮಿ ಮತ್ತು ಆತ್ಮಸಾಕ್ಷಿಯನ್ನು ಅಡವಿಟ್ಟಿದ್ದರು. ಆದರೆ ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದ ಭೂಮಿಯನ್ನು ಸುರಕ್ಷಿತಗೊಳಿಸಲಾಗಿದೆ ಮತ್ತು ನಾಗರಿಕರ ವಿಶ್ವಾಸವನ್ನು ಬಲಪಡಿಸಲಾಗಿದೆ ಎಂದರು.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ರಾಹುಲ್ ಗಾಂಧಿಯವರ ಭಾಷೆ ಶತ್ರು ರಾಷ್ಟ್ರದ ಭಾಷೆಯಂತಿದೆ. ಜಗತ್ತಿಗೆ ಈಗಾಗಲೇ ಭಾರತದ ಆರ್ಥಿಕತೆ ಬಗ್ಗೆ ತಿಳಿದಿದೆ. ಇದಕ್ಕೆ ರಾಹುಲ್ ಗಾಂಧಿಯವರ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು, ರಾಹುಲ್ ಗಾಂಧಿಯವರು 140 ಕೋಟಿ ಭಾರತೀಯರನ್ನು ದೇಶದ್ರೋಹಿಗಳೆಂದು ಕರೆಯುತ್ತಿದ್ದಾರೆ. ಅವರ ಭಾಷೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಭಾಷೆಗೆ ಹೋಲುತ್ತದೆ ಎಂದು ಹೇಳಿದರು.
ದೇಶಾದ್ಯಂತ ಇ-ಬಸ್, ಇ-ಟ್ರಕ್ ಬಳಕೆಗೆ ವೇಗ; ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು. ರಾಜಕೀಯದ ತಾಯಿಯಾದ ಕಾಂಗ್ರೆಸ್ ಪಕ್ಷದ ಯುವರಾಜ ಅವರ ಅಸಭ್ಯ ಹೇಳಿಕೆ ಅವರ ನಕಾರಾತ್ಮಕ ರಾಜಕೀಯ, ಅನಿಯಂತ್ರಿತ ಚಿಂತನೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸಂಪೂರ್ಣ ಅಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
ಹಿರಿಯ ಬಿಜೆಪಿ ನಾಯಕ ಮತ್ತು ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಭಾರತದ ಸಂವಿಧಾನವನ್ನು ಕೆಡವುವ ಕೆಲಸವನ್ನು ಕೈಗೆತ್ತಿಕೊಂಡಿದೆ. ಪ್ರಧಾನಿ ಮೋದಿಯವರನ್ನು ನಿಂದಿಸುವುದು ಮತ್ತು ಆರ್‌ಎಸ್‌ಎಸ್ ಅನ್ನು ಅವಹೇಳನ ಮಾಡುವುದು ಅವರಿಗೆ ಅಭ್ಯಾಸವಾಗಿದೆ ಎಂದು ಹೇಳಿದ್ದಾರೆ.