ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನವೆಂಬರ್ 1ರ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ರ‍್ಯಾಲಿಗೆ ಬಿಜೆಪಿ ತಿರುಗೇಟು: ದೇಶಾದ್ಯಂತ ʼಪ್ರಜಾಪ್ರಭುತ್ವ ಉಳಿಸಿʼ ಪಾದಯಾತ್ರೆಗೆ ಸಿದ್ಧತೆ

INDIA Alliance: ನವೆಂಬರ್ 1ರಂದು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ, ಎಸ್‌ಐಆರ್ ಪ್ರಕ್ರಿಯೆ ಕುರಿತು ಜನಜಾಗೃತಿ ಮೂಡಿಸಲು ಬಿಜೆಪಿ ದೇಶಾದ್ಯಂತ ಪಾದಯಾತ್ರೆಗಳನ್ನು ಆಯೋಜಿಸಲು ನಿರ್ಧರಿಸಿದೆ. ಯೋಗಿ ಆದಿತ್ಯನಾಥ್, ಹಿಮಂತ ಬಿಸ್ವ ಶರ್ಮಾ ಸೇರಿ ಹಲವು ಪ್ರಮುಖ ನಾಯಕರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.

SIR ವಿವಾದ: ಬಿಜೆಪಿ ಪಾದಯಾತ್ರೆಗೆ ಸಿದ್ಧತೆ

ಸಾಂದರ್ಭಿಕ ಚಿತ್ರ -

Profile
Sushmitha Jain Oct 26, 2026 10:09 PM

ನವದೆಹಲಿ, ಅ. 26: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿಚಾರವಾಗಿ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ಹಮ್ಮಿಕೊಂಡಿರುವ ಪ್ರತಿಭಟನೆಗೆ ಪ್ರತಿಯಾಗಿ ರಾಜಕೀಯವಾಗಿ ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಈ ಸಂಬಂಧ ದೇಶಾದ್ಯಂತ ಜನಜಾಗೃತಿ ಅಭಿಯಾನ ನಡೆಸಲು ಪಕ್ಷ ನಿರ್ಧರಿಸಿದ್ದು, ಹಿರಿಯ ನಾಯಕರು ಹಾಗೂ ಕೇಂದ್ರ ಸಚಿವರು ಬೀದಿಗಿಳಿದು ಪಾದಯಾತ್ರೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್ಐಆರ್ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ 'ಮತಗಳ್ಳತನ' ಆರೋಪಗಳಿಗೆ ಉತ್ತರ ನೀಡುವುದು ಹಾಗೂ ಮತದಾರರ ಪಟ್ಟಿಯ ಸಮಗ್ರತೆಯ ಕುರಿತು ಜನರಿಗೆ ಮಾಹಿತಿ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶ.

ನವೆಂಬರ್ 1ರಂದು ಇಂಡಿಯಾ ಮೈತ್ರಿಕೂಟ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ದಿನವೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖನೌನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶಿಮ್ಲಾದಲ್ಲಿ ಪಾದಯಾತ್ರೆಗೆ ನೇತೃತ್ವ ವಹಿಸಲಿದ್ದಾರೆ.

ನಂತರದ ದಿನ ತೆಲಂಗಾಣದ ಹೈದರಾಬಾದ್‌ನಲ್ಲಿ ಪಾದಯಾತ್ರೆ ನಡೆಯಲಿದ್ದು, ನವೆಂಬರ್ 5ರಂದು ಹರಿಯಾಣದ ಕರ್ನಾಲ್‌ನಲ್ಲಿ ಮತ್ತೊಂದು ಪಾದಯಾತ್ರೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಭಾಗವಹಿಸಲಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಅಬ್ಬರಿಸುತ್ತಿರುವ ‘ಅರ್ನಬ್’ ಚಂಡಮಾರುತ: ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಕೇಂದ್ರದ ಹಿರಿಯ ಸಚಿವರು ಕೂಡ ಪಾದಯಾತ್ರೆಗಳನ್ನು ಮುನ್ನಡೆಸಿ, ಎಸ್ಐಆರ್ ಪ್ರಕ್ರಿಯೆ ಕುರಿತು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಈ ಅಭಿಯಾನದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.

ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಪಾದಯಾತ್ರೆಗಳನ್ನು ಆಯೋಜಿಸಲು ಬಿಜೆಪಿ ಯೋಜನೆ ರೂಪಿಸಿದೆ. ಪ್ರತಿ ಕಾರ್ಯಕ್ರಮದಲ್ಲಿ ಸುಮಾರು 10,000 ಜನರನ್ನು ಸೇರಿಸುವ ಗುರಿಯನ್ನು ಪಕ್ಷ ಹೊಂದಿದೆ.

ಈ ಅಭಿಯಾನದ ಮೇಲ್ವಿಚಾರಣೆಗಾಗಿ ಬಿಜೆಪಿ ನಾಯಕ ನಿತಿನ್ ನವೀನ್ ತಂಡವೊಂದನ್ನು ರಚಿಸಿದ್ದಾರೆ. 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಂತ್ಯಗೊಳಿಸಿ' (Loktantra Bachao, Arajakta Hatao) ಎಂಬ ಹೆಸರಿನ ಯಾತ್ರೆಗಳ ಸಮನ್ವಯದ ಜವಾಬ್ದಾರಿಯನ್ನು ತರುಣ್ ಚುಗ್, ಭೂಪೇಂದರ್ ಯಾದವ್, ಹರೀಶ್ ದ್ವಿವೇದಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವಹಿಸಲಾಗಿದೆ.

ಈ ಪಾದಯಾತ್ರೆಗಳ ಮೂಲಕ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ, ಎಸ್ಐ ಆರ್ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಉದ್ದೇಶಿಸಿದೆ.