ಬಂಗಾಳ ಕೊಲ್ಲಿಯಲ್ಲಿ ಅರ್ನಾಬ್ ಚಂಡಮಾರುತದ ಅಬ್ಬರ: ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ
Cyclone Arnab: ಬಂಗಾಳ ಕೊಲ್ಲಿಯಲ್ಲಿ ಅರ್ನಾಬ್ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಅಕ್ಟೋಬರ್ 28ರಂದು ಬಾಪಟ್ಲಾ–ವಿಶಾಖಪಟ್ಟಣಂ ನಡುವಿನ ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಗಂಟೆಗೆ 140 ಕಿ.ಮೀ. ವೇಗದ ಗಾಳಿ ಹಾಗೂ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅರ್ನಾಬ್ ಚಂಡಮಾರುತ -
ನವದೆಹಲಿ, ಅ. 26: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅರ್ನಾಬ್ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಅಕ್ಟೋಬರ್ 28ರಂದು ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ಚಂಡಮಾರುತವು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲ ಪಡೆದು ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗುವ ನಿರೀಕ್ಷೆಯಿದೆ.
ಭಾರತದ INSAT-3DS ಹವಾಮಾನ ಉಪಗ್ರಹದ ಚಿತ್ರಗಳಲ್ಲಿ ಬಂಗಾಳ ಕೊಲ್ಲಿಯ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಚಂಡಮಾರುತಕ್ಕೆ ಸಂಬಂಧಿಸಿದ ದಟ್ಟ ಮೋಡಗಳ ಚಟುವಟಿಕೆ ಕಂಡುಬಂದಿದೆ. ಈ ಮೋಡಗಳ ಬೆಳವಣಿಗೆಯು ಚಂಡಮಾರುತದ ಚಟುವಟಿಕೆ ತೀವ್ರವಾಗಿರುವುದನ್ನು ಸೂಚಿಸುತ್ತದೆ.
ಬಲವಾಗುತ್ತಿರುವ ಅರ್ನಾಬ್ ಚಂಡಮಾರುತ:
🚨📣 #CycloneAlert Cyclonic storm #Arnab intensified into SEVERE Cyclonic storm. #CycloneArnab Past 12 satellite loop ➿ 2130IST/Oct/26. #Meteosat9 #Odisha #andhra #chhatisgarh #ArnabCyclone #WeatherUpdate https://t.co/qC5JMehl14
— AshimMitra 🛰 (@ashimmitra) October 26, 2026
ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಅಕ್ಟೋಬರ್ 26ರ ರಾತ್ರಿ ವೇಳೆಗೆ ಚಂಡಮಾರುತವು ತೀವ್ರ ಚಂಡಮಾರುತದ ಸ್ವರೂಪ ಪಡೆದುಕೊಳ್ಳಬಹುದು. ಅಕ್ಟೋಬರ್ 27ರಂದು ಅತ್ಯಂತ ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ. ಬಳಿಕ ಅಕ್ಟೋಬರ್ 28ರ ಬೆಳಗ್ಗೆ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ತೀವ್ರ ಮಳೆ ಬೀಳಲಿದೆ. ಆಂಧ್ರ ಪ್ರದೇಶ–ಯಾನಂ ಕರಾವಳಿ ಭಾಗದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.
ಗಂಟೆಗೆ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಚಂಡಮಾರುತವು ಕರಾವಳಿಗೆ ಅಪ್ಪಳಿಸುವ ಸಂದರ್ಭದಲ್ಲಿ ಗಂಟೆಗೆ 115ರಿಂದ 125 ಕಿ.ಮೀ. ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ. ಗಾಳಿಯ ವೇಗವು ಕೆಲವೆಡೆ ಗಂಟೆಗೆ 140 ಕಿ.ಮೀ. ತಲುಪಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅತಿಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಒಡಿಶಾದಲ್ಲಿ ಮುನ್ನೆಚ್ಚರಿಕಾ ಕ್ರಮಗಳು
ಚಂಡಮಾರುತದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಒಡಿಶಾ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಗಂಜಾಂ, ಗಜಪತಿ, ರಾಯಗಡ, ಮಲ್ಕಾನಗಿರಿ, ಕೊರಾಪುಟ್ ಮತ್ತು ನವರಂಗಪುರ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಮುದ್ರದಲ್ಲಿ ಮೀನುಗಾರಿಕೆಗೂ ನಿರ್ಬಂಧ ವಿಧಿಸಲಾಗಿದೆ.
ದೆಹಲಿಯ ಕೇಂದ್ರ ಗೃಹ ಸಚಿವಾಲಯ ಕಟ್ಟಡದಲ್ಲಿ ಬೆಂಕಿ ಅವಘಡ; ಸ್ಥಳದಲ್ಲಿ ದಟ್ಟವಾಗಿ ಆವರಿಸಿದ ಹೊಗೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF), ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಅಪಾಯದ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಸಿದ್ಧತೆ ನಡೆದಿದೆ. ಈ ಆರು ಜಿಲ್ಲೆಗಳಲ್ಲಿ ಅಕ್ಟೋಬರ್ 28 ಮತ್ತು 29ರಂದು ಶಾಲೆಗಳು, ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ನಿಯಂತ್ರಣ ಕೊಠಡಿಗಳನ್ನೂ ಸ್ಥಾಪಿಸಲಾಗಿದೆ.
ಚಂಡಮಾರುತದ ಚಲನೆ ಮತ್ತು ತೀವ್ರತೆಯನ್ನು ಹವಾಮಾನ ಇಲಾಖೆ ನಿರಂತರವಾಗಿ ಗಮನಿಸುತ್ತಿದ್ದು, ಕರಾವಳಿ ಪ್ರದೇಶಗಳ ಜನರು ಅಧಿಕೃತ ಹವಾಮಾನ ಮುನ್ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.