ಪ್ರಧಾನಿ ಹುದ್ದೆ ಬಿಟ್ಟು ಕೊಟ್ಟು ಸೋನಿಯಾ ಗಾಂಧಿ ಸೂಪರ್ ಪಿಎಂ ಆಗಿದ್ದರು: ಬಿಜೆಪಿ ವ್ಯಂಗ್ಯ
Sonia Gandhi: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ರಿಲೀಸ್ ಆಗಿದ್ದು, ಅದರಲ್ಲಿ ಅವರು ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಉಲ್ಲೇಖಿಸಿ ಬಿಜೆಪಿ ವ್ಯಂಗ್ಯವಾಡಿದ್ದು, ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟು ಸೂಪರ್ ಪಿಎಂ ಆಗಿದ್ದರು ಎಂದಿದೆ.
ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ (ಸಂಗ್ರಹ ಚಿತ್ರ) -
ದೆಹಲಿ, ನ. 11: 2004ರಲ್ಲಿ ಸೋನಿಯಾ ಗಾಂಧಿ (Sonia Gandhi) ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟು ಸೂಪರ್ ಪಿಎಂ ಆದರು ಎಂದು ಬಿಜೆಪಿ ಕಾಲೆಳೆದಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ರಿಲೀಸ್ ಆಗಿದ್ದು, ಅದರಲ್ಲಿನ ಅಂಶವನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ಮತ್ತು ಸಂಸದ ಸುಧಾಂಶು ತ್ರಿವೇದಿ ವ್ಯಂಗ್ಯವಾಡಿದ್ದಾರೆ. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟಿರುವ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾವಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತ್ರಿವೇದಿ ಮಾತನಾಡಿ, ಸೋನಿಯಾ ಗಾಂಧಿ ನ್ಯಾಷನಲ್ ಅಡ್ವೈಸರಿ ಕಮಿಟಿ (NAC)ಯಲ್ಲಿ ಸಂಪುಟ ದರ್ಜೆಯ ಸಚಿವರ ಸ್ಥಾನವನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ಅವರು ಸರ್ಕಾರದ ಮೇಲೆ ಗಣನೀಯ ಪ್ರಭಾವವನ್ನು ಹೊಂದಿದ್ದರು ಎಂದೂ ಆರೋಪಿಸಿದ್ದಾರೆ.
ಸಂಸದ ಸುಧಾಂಶು ತ್ರಿವೇದಿ ಅವರ ಸುದ್ದಿಗೋಷ್ಠಿ:
Delhi: On Sonia Gandhi's book, BJP National Spokesperson and MP Sudhanshu Trivedi says, "...She gave up the post of Prime Minister and became a Super PM. You will not find such an example anywhere in the world, where someone gives up the post of Prime Minister but +1 https://t.co/VJJTbxOJEF
— Avinash K S🇮🇳 (@AvinashKS14) November 11, 2026
ʼʼಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಜಿಸಿ ಸೂಪರ್ ಪಿಎಂ ಆಗಿದ್ದರು. ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟು ನಾಯಕರೊಬ್ಬರು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿರುವ ಇಂತಹ ಉದಾಹರಣೆ ಪ್ರಪಂಚದ ಎಲ್ಲೂ ಕಾಣಲು ಸಾಧ್ಯವಿಲ್ಲʼʼ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಣಬ್ ಮುಖರ್ಜಿಗೆ ಪ್ರಧಾನಿಯಾಗುವ ಆಸೆಯಿತ್ತು; ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಬಹಿರಂಗಗೊಂಡಿದ್ದ ಸತ್ಯಗಳೇನು?
ಎನ್‌ಎಸಿ ಅಧ್ಯಕ್ಷರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಅವರ ನೇಮಕಾತಿಯನ್ನು ಪ್ರಶ್ನಿಸಿದ ಅವರು, ಈ ಹುದ್ದೆಯು ಸಂಪುಟ ಸಚಿವರ ಶ್ರೇಣಿಯನ್ನು ಹೊಂದಿದ್ದು, ಲಾಭದಾಯಕ ಹುದ್ದೆ ನಿಬಂಧನೆಗಳ ವ್ಯಾಪ್ತಿಗೆ ಬರುತ್ತದೆ ಎಂದಿದ್ದಾರೆ. "ಈ ಎಲ್ಲ ವಿಚಾರಗಳು ಈಗ ದೇಶದ ಮುಂದಿದೆ. ಆ ಆಡಳಿತಾವಧಿಯಲ್ಲಿನ ಸೂಪರ್ ಪ್ರಧಾನಿ ಮತ್ತು ಸೂಪರ್ ಸಂಪುಟ ಏನೆಂಬುದು ಎಲ್ಲರಿಗೂ ತಿಳಿದಿದೆ" ಎಂದು ತ್ರಿವೇದಿ ಹೇಳಿದ್ದಾರೆ.
2004ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆ ಬಿಟ್ಟು ಕೊಡಲು ಕಾರಣವಾದ ಸಂದರ್ಭವನ್ನು ಸೋನಿಯಾ ಗಾಂಧಿ ಪುಸ್ತಕದಲ್ಲಿ ವಿವರಿಸಿದ್ದಾರೆ. ತಾವು ಪ್ರಧಾನ ಮಂತ್ರಿಯಾಗುವ ಸಾಧ್ಯತೆಯನ್ನು ಆರಂಭದಲ್ಲಿಯೇ ತಳ್ಳಿಹಾಕಿದ್ದಾಗಿ ಅವರು ಬರೆದಿದ್ದಾರೆ. ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳಿಂದ ಉಂಟಾದ ಆಘಾತವನ್ನು ಅನುಭವಿಸಿದ್ದ ರಾಹುಲ್ ಮತ್ತು ಪ್ರಿಯಾಂಕಾ ತಾಯಿ ಈ ಹುದ್ದೆಯನ್ನು ಅಲಂಕರಿಸುವುದನ್ನು ವಿರೋಧಿಸಿದ್ದರು.
ಮೈತ್ರಿಕೂಟದ ನಾಯಕರು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವಂತೆ ಒತ್ತಡ ಹೇರಿದ್ದರು. ಅನಿವಾರ್ಯವಾಗಿ ಮೊದಲು ಒಪ್ಪಿಕೊಂಡರೂ ನಂತರ ಹುದ್ದೆ ಸ್ವೀಕರಿಸದಿರಲು ದೃಢ ನಿರ್ಧಾರ ಕೈಗೊಂಡಿದ್ದರು. ಕೊನೆಗೆ ಡಾ. ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರನ್ನಾಗಿ ಸೋನಿಯಾ ನಾಮನಿರ್ದೇಶನ ಮಾಡಿದರು. ಹೀಗಾಗಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾದರು. ಸದ್ಯ ಸೋನಿಯಾ ಅವರ ಈ ಪುಸ್ತಕ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.