ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ರಾಜಸ್ಥಾನದಲ್ಲಿ ಪತ್ತೆ; ನಿಗೂಢ ಸಾವಿಗೆ ಕಾರಣವೇನು?

Jaisalmer: ಪಾಕಿಸ್ತಾನ ಮೂಲದ ಹಿಂದೂ ಧರ್ಮದ ಇಬ್ಬರ ಮೃತದೇಹ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಗುರುತಿನ ಚೀಟಿಯೂ ಕಂಡು ಬಂದಿದೆ. ಅದರ ಪ್ರಕಾರ ಮೃತರನ್ನು ರವಿ ಕುಮಾರ್‌ (18) ಮತ್ತು ಅಪ್ರಾಪ್ತೆಯನ್ನು ಶಾಂತಿ ಭಾಯಿ (15) ಎಂದು ಗುರುತಿಸಲಾಗಿದೆ.

ಪಾಕಿಸ್ತಾನದ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ರಾಜಸ್ಥಾನದಲ್ಲಿ ಪತ್ತೆ

-

Ramesh Ballamoole
Ramesh Ballamoole Jun 29, 2025 10:51 PM

ಜೈಪುರ: ಪಾಕಿಸ್ತಾನ ಮೂಲದ ಹಿಂದೂ ಧರ್ಮದ ಇಬ್ಬರ ಮೃತದೇಹ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ (Jaisalmer) ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಗುರುತಿನ ಚೀಟಿಯೂ ಕಂಡು ಬಂದಿದೆ. ಜೈಸಲ್ಮೇರ್‌ನ ಭಾರತ-ಪಾಕಿಸ್ತಾನ ಗಡಿಯ ಬಳಿಯ ಮರಳು ದಿಬ್ಬಗಳಲ್ಲಿ ಪತ್ತೆಯಾದ ಯುವಕ ಮತ್ತು ಅಪ್ರಾಪ್ತೆಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಶವದ ಸ್ಥಿತಿ ನೋಡಿದರೆ ಇವರು ಮೃತಪಟ್ಟು ವಾರ ಕಳೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10ರಿಂದ 12 ಕಿ.ಮೀ. ಭಾರತದ ಒಳಗೆ ತನೌಟ್ ಮತ್ತು ಸಾಧೇವಾಲಾ ಪ್ರದೇಶದಲ್ಲಿ ಮೃತದೇಹ ಒಳಗೆ ಪತ್ತೆಯಾಗಿದೆ ಎಂದು ವರದಿಯಾಗಿದೆ.



ಈ ಸುದ್ದಿಯನ್ನೂ ಓದಿ: Car Bomb Blast: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ; 16ಸೈನಿಕರು ಹತ್ಯೆ

ಐಎಎನ್‌ಎಸ್‌ ಸುದ್ದಿಸಂಸ್ಥೆ ವರದಿಯ ಪ್ರಕಾರ, ಮೃತದೇಹದ ಬಳಿ ಪಾಕಿಸ್ತಾನದ ಮೊಬೈಲ್‌ ಸಿಮ್‌ ಮತ್ತು ಗುರುತಿನ ಚೀಟಿ ಪತ್ತೆಯಾಗಿದ್ದರಿಂದ ಇವರು ಪಾಕ್‌ ಮೂಲದವರೆಂದ ದೃಢಪಡಿಸಲಾಗಿದೆ. ಈ ಗುರುತಿನ ಚೀಟಿ ಪ್ರಕಾರ ಈ ಇಬ್ಬರ ವಯಸ್ಸು 20 ವರ್ಷದೊಳಗಿದೆ. ಯುವಕನನ್ನು ರವಿ ಕುಮಾರ್‌ (18) ಮತ್ತು ಅಪ್ರಾಪ್ತೆಯನ್ನು ಶಾಂತಿ ಭಾಯಿ (15) ಎಂದು ಗುರುತಿಸಲಾಗಿದೆ. ವಾರದ ಹಿಂದ ಇವರು ಗಡಿ ದಾಟಿ ಭಾರತಕ್ಕೆ ನುಸುಳಲು ಯತ್ನಿಸಿದ್ದರು ಎಂದು ಶಂಕಿಸಲಾಗಿದೆ.

ಮೃತದೇಹ ಪತ್ತೆಯಾದ ಮಾಹಿತಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (BSF) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದಾದ ಬಳಿಕ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಬಿಎಸ್‌ಎಫ್ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಗಡಿಯಾಚೆಯಿಂದ ಭಾರತೀಯ ಪ್ರದೇಶಕ್ಕೆ ನುಸುಳುವಿಕೆಯ ಯಾವುದೇ ಕುರುಹುಗಳು ಅಥವಾ ಹೆಜ್ಜೆಗುರುತುಗಳು ಕಂಡುಬಂದಿಲ್ಲ. ಇಬ್ಬರ ಬಗ್ಗೆ ಮಾಹಿತಿ ಪಡೆಯಲು ಬಿಎಸ್‌ಎಫ್ ವಿದೇಶಿಯರ ನೋಂದಣಿ ಕಚೇರಿ (FRO) ಯನ್ನು ಸಹ ಸಂಪರ್ಕಿಸುತ್ತಿದೆ.

ಕಾರಣವೇನು?

ಸ್ಥಳೀಯ ವರದಿಗಳ ಪ್ರಕಾರ, ಮೇಲ್ನೋಟಕ್ಕೆ ಇಬ್ಬರೂ ದಾರಿ ತಪ್ಪಿ ಈ ಕಡೆ ಬಂದಿದ್ದು, ಹಸಿವು ಮತ್ತು ಬಾಯಾರಿಕೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆದಾಗ್ಯೂ ಸಾವಿಗೆ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಶವಗಳನ್ನು ರಾಮಗಢ ಶವಾಗಾರದಲ್ಲಿ ಇರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅದು ಹೊರ ಬಂದ ಬಳಿಕ ಸಾವಿಗೆ ನಿಜವಾದ ಕಾರಣ ಗೊತ್ತಾಗಲಿದೆ. ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ. ಶವಗಳನ್ನು ಗುರುತಿಸಲು ಮತ್ತು ಘಟನೆಯ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನ ನಡೆಯುತ್ತಿದೆ.

''ಗಡಿ ಪ್ರದೇಶದಲ್ಲಿ ಸಮಗ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ, ಪಾಕಿಸ್ತಾನದ ಕಡೆಯಿಂದ ಇತ್ತೀಚೆಗೆ ನುಸುಳುವಿಕೆಯನ್ನು ಸೂಚಿಸುವ ಯಾವುದೇ ಪುರಾವೆಗಳು ಅಥವಾ ಹೆಜ್ಜೆಗುರುತುಗಳು ಕಂಡುಬಂದಿಲ್ಲ'' ಎಂದು ಬಿಎಸ್‌ಎಫ್ ಐಜಿ ಎಂಎಲ್ ಗರ್ಗ್ ಟೈಮ್ಸ್‌ ಆಫ್‌ ಇಂಡಿಯಾಕ್ಕೆ ತಿಳಿಸಿದ್ದಾರೆ. ಮೃತರು ಯಾಕಾಗಿ ಭಾರತದತ್ತ ಬಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲೂ ತನಿಖೆ ಮುಂದುವರಿದಿದೆ.