Car Bomb Blast: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 13ಸೈನಿಕರು ಸಾವು
ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಈ ಸ್ಫೋಟದಲ್ಲಿ 13 ಸೈನಿಕರು ಸಾವನ್ನಪ್ಪಿದ್ದಾರೆ, 10 ಸೇನಾ ಸಿಬ್ಬಂದಿ ಮತ್ತು 19 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸ್ಫೋಟದ ಪರಿಣಾಮವಾಗಿ ಎರಡು ಮನೆಗಳ ಛಾವಣಿಗಳು ಕುಸಿದು ಬಿದ್ದಿದ್ದು, ಮನೆಯೊಳಗಿದ್ದ ಆರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.


ಇಸ್ಲಮಾಬಾದ್: ತಾಲಿಬಾನ್ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ(Car Bomb Blast) ಪಾಕಿಸ್ತಾನದ 13 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಈ ಸ್ಫೋಟದಲ್ಲಿ 13 ಸೈನಿಕರು ಸಾವನ್ನಪ್ಪಿದ್ದಾರೆ, 10 ಸೇನಾ ಸಿಬ್ಬಂದಿ ಮತ್ತು 19 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸ್ಫೋಟದ ಪರಿಣಾಮವಾಗಿ ಎರಡು ಮನೆಗಳ ಛಾವಣಿಗಳು ಕುಸಿದು ಬಿದ್ದಿದ್ದು, ಮನೆಯೊಳಗಿದ್ದ ಆರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ನಾಲ್ವರು ಸೈನಿಕರು ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನ ತಾಲಿಬಾನ್‌ನ ಒಂದು ಬಣವಾದ ಹಫೀಜ್ ಗುಲ್ ಬಹದ್ದೂರ್ ಸಶಸ್ತ್ರ ಗುಂಪಿನ ಆತ್ಮಹತ್ಯಾ ಬಾಂಬರ್ ವಿಭಾಗವು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಈ ಸುದ್ದಿಯನ್ನೂ ಓದಿ: Bomb Blast: ಉಪಚುನಾವಣೆ ಮತ ಎಣಿಕೆ ವೇಳೆ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ: ಬಾಲಕಿ ಸಾವು
ಮಾರ್ಚ್ ಮಧ್ಯದಲ್ಲಿ, ಟಿಟಿಪಿ ಭದ್ರತಾ ಪಡೆಗಳ ವಿರುದ್ಧ ಸ್ಪ್ರಿಂಗ್ ಅಭಿಯಾನವನ್ನು ಘೋಷಿಸಿತ್ತು. ಅದರನ್ವಯ ಪಾಕ್ ಸೈನಿಕರನ್ನು ಗುರಿಯಾಗಿಸಿ ಅಟ್ಯಾಕ್, ಆತ್ಮಹತ್ಯಾ ದಾಳಿಗಳು ಮತ್ತು ಮುಷ್ಕರ ನಡೆಸುತ್ತಲೇ ಬಂದಿದೆ. ಅಂದಿನಿಂದ ಖೈಬರ್ ಪಖ್ತುನ್ಖ್ವಾದಲ್ಲಿ ಸುಮಾರು 100 ದಾಳಿಗಳ ಹೊಣೆಯನ್ನು ಟಿಟಿಪಿ ಹೊತ್ತುಕೊಂಡಿದೆ. ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ ಎರಡರಲ್ಲೂ ಸರ್ಕಾರದ ವಿರುದ್ಧ ಹೋರಾಡುವ ಸಶಸ್ತ್ರ ಗುಂಪುಗಳು ಈ ವರ್ಷದ ಆರಂಭದಿಂದ ನಡೆಸಿದ ದಾಳಿಗಳಲ್ಲಿ ಪಾಕ್ ಸೈನಿಕರು ಸೇರಿದಂತೆ ಸುಮಾರು 290ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದರು.
ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಪಾಕಿಸ್ತಾನದಲ್ಲಿ ದಾಳಿಗಳು ಹೆಚ್ಚಾಗಿವೆ. ಪಾಕಿಸ್ತಾನದ ವಿರುದ್ಧ ದಾಳಿಗಳನ್ನು ಸಿದ್ಧಪಡಿಸಲು ಅಫ್ಘಾನ್ ನೆಲದಲ್ಲಿ ಆಶ್ರಯ ಪಡೆದಿರುವ ಉಗ್ರರನ್ನು ನಿರ್ಮೂಲನೆ ಮಾಡುವಲ್ಲಿ ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರ ವಿಫಲವಾಗಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ.