ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯಿಂದ ಮಹತ್ವದ ನಿರ್ಧಾರ: 'ವಂದೇ ಮಾತರಂ'ಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ
Vande Mataram given status of the national anthem: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 'ವಂದೇ ಮಾತರಂ'ಗೆ ರಾಷ್ಟ್ರಗೀತೆ 'ಜನ ಗಣ ಮನ'ಕ್ಕೆ ಸಮಾನವಾದ ಸ್ಥಾನಮಾನವನ್ನು ನೀಡುವ ಪ್ರಸ್ತಾಪವನ್ನು ಅನುಮೋದಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆ -
ನವದೆಹಲಿ, ಮೇ 6: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭರ್ಜರಿ ಜಯಗಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 'ವಂದೇ ಮಾತರಂ' (Vande Mataram) ಈತೆಗೆ ರಾಷ್ಟ್ರಗೀತೆ ʼಜನ ಗಣ ಮನʼಕ್ಕೆ ಸಮಾನವಾದ ಸ್ಥಾನಮಾನವನ್ನು ನೀಡುವ ಪ್ರಸ್ತಾಪವನ್ನು ಅನುಮೋದಿಸಿದೆ.
4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ - ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳಂ, ಅಸ್ಸಾಂ ಮತ್ತು ಪುದುಚೇರಿ ಚುನಾವಣಾ ಫಲಿತಾಂಶದ ನಂತರ ಮಂಗಳವಾರ (ಮೇ 5) ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಗೆಲುವಿಗೆ ಸಚಿವರು ಪ್ರಧಾನಿ ಅವರನ್ನು ಅಭಿನಂದಿಸಿದರು.
ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ಕಾನೂನಾದ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆಗೆ (Prevention of Insults to National Honour Act) ತಿದ್ದುಪಡಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈ ತಿದ್ದುಪಡಿಯ ಮೂಲಕ ʼವಂದೇ ಮಾತರಂʼ ಅನ್ನು ಈಗಾಗಲೇ ರಾಷ್ಟ್ರೀಯ ಗೀತೆಯಾದ ʼಜನ ಗಣ ಮನʼಕಕ್ಕೆ ಇರುವ ಕಾನೂನು ಚೌಕಟ್ಟಿನ ಅಡಿಗೆ ತರಲಾಗುತ್ತದೆ. ಈ ತಿದ್ದುಪಡಿ ಜಾರಿಗೆ ಬಂದ ನಂತರ, ʼವಂದೇ ಮಾತರಂʼ ಹಾಡುವ ಸಂದರ್ಭದಲ್ಲಿ ಅವಮಾನ ಮಾಡುವುದಾಗಲಿ, ಅಡ್ಡಿಪಡಿಸುವುದಾಗಲಿ ಮಾಡಿದರೆ, ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.
ವಂದೇ ಮಾತರಂ ಹಾಡಲು ನಿರಾಕರಿಸಿದ ಇಂದೋರ್‌ನ ಇಬ್ಬರು ಮುಸ್ಲಿಂ ಕಾರ್ಪೊರೇಟರ್‌ಗಳು
ಪ್ರಸ್ತುತವಿರುವ ಕಾನೂನು ಪ್ರಕಾರ ರಾಷ್ಟ್ರಧ್ವಜ, ಸಂವಿಧಾನ ಅಥವಾ ರಾಷ್ಟ್ರಗೀತೆಗೆ ಅವಮಾನ ಮಾಡಿದ ಪ್ರಕರಣಗಳಲ್ಲಿ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆ ಇದೆ. ಈಗ ಪ್ರಸ್ತಾಪಿತ ತಿದ್ದುಪಡಿಯ ಮೂಲಕ, ಇದೇ ನಿಯಮಗಳನ್ನು ʼವಂದೇ ಮಾತರಂʼಗೂ ವಿಸ್ತರಿಸಲಾಗುತ್ತದೆ. ಅದರ ಉಲ್ಲಂಘನೆಯು ಕಾನೂನು ಶಿಕ್ಷೆಗೆ ಕಾರಣವಾಗಬಹುದು.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ರಾಷ್ಟ್ರಗೀತೆ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವ ಅಥವಾ ಅಡ್ಡಿಪಡಿಸುವ ಯಾವುದೇ ವ್ಯಕ್ತಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು. ಪುನರಾವರ್ತಿತ ಅಪರಾಧಿಗಳಿಗೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ತಿದ್ದುಪಡಿ ಜಾರಿಗೆ ಬಂದ ನಂತರ ಈ ನಿಬಂಧನೆಗಳು ʼವಂದೇ ಮಾತರಂʼಗೂ ಅನ್ವಯವಾಗುವ ನಿರೀಕ್ಷೆಯಿದೆ.
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ರಚಿಸಿದ ʼವಂದೇ ಮಾತರಂʼ ಗೀತೆ ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ದೇಶವು ಈ ಪ್ರತಿಷ್ಠಿತ ಗೀತೆಯ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದೆ. ರಾಷ್ಟ್ರಧ್ವಜದ ಅಗೌರವ ಬಳಕೆಯನ್ನು ತಡೆಯಲು 2005ರಲ್ಲಿ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ನಡೆದ ವಿಶೇಷ ಚರ್ಚೆಯ ಸಂದರ್ಭದಲ್ಲಿ ʼವಂದೇ ಮಾತರಂʼಗೆ ರಾಷ್ಟ್ರ ಗೀತೆಗೆ ಸಮಾನ ಸ್ಥಾನಮಾನ ನೀಡುವ ಬೇಡಿಕೆಯನ್ನು ಎತ್ತಲಾಗಿತ್ತು. ಈ ಚರ್ಚೆ ಅದರ 150ನೇ ವಾರ್ಷಿಕೋತ್ಸವದ ಸಂದರ್ಭಕ್ಕೆ ಸಂಬಂಧಿಸಿದಂತೆ ನಡೆದಿತ್ತು. ಪ್ರಸ್ತಾವಿತ ತಿದ್ದುಪಡಿಯನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.