Kangana Ranaut: ಕಾಂಗ್ರೆಸ್ ಬೆಂಬಲದಿಂದಲೇ ವಕ್ಫ್ ಮಂಡಳಿ ನಿಯಮ ಉಲ್ಲಂಘಿಸಿದ್ದು: ಕಂಗನಾ ರಾಣಾವತ್ ವಾಗ್ದಾಳಿ
Waqf Boards: ʼʼಕಾಂಗ್ರೆಸ್‌ನ ಕೃಪಕಟಾಕ್ಷದಿಂದಲೇ ವಕ್ಫ್ ಮಂಡಳಿಗೆ ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಾಯಿತು. ಸ್ವಾತಂತ್ರ್ಯ ಪೂರ್ವದಲ್ಲೇ ದೊಡ್ಡ ಪಿತೂರಿ ನಡೆಸಿ ವಕ್ಫ್ ಮಂಡಳಿ ರಚಿಸಲಾಯಿತುʼʼ ಎಂದು ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಾಣಾವತ್ ವಾಗ್ದಾಳಿ ನಡೆಸಿದ್ದಾರೆ.

ಕಂಗನಾ ರಾಣಾವತ್.

ಶಿಮ್ಲಾ: ʼʼಕಾಂಗ್ರೆಸ್‌ನ (Congress) ಕೃಪಕಟಾಕ್ಷದಿಂದಲೇ ವಕ್ಫ್ ಮಂಡಳಿ (Waqf boards)ಗೆ ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಾಯಿತು. ಸ್ವಾತಂತ್ರ್ಯ ಪೂರ್ವದಲ್ಲೇ ದೊಡ್ಡ ಪಿತೂರಿ ನಡೆಸಿ ವಕ್ಫ್ ಮಂಡಳಿ ರಚಿಸಲಾಯಿತುʼʼ- ಕಾಂಗ್ರೆಸ್ ವಿರುದ್ಧ ಹಿಮಾಚಲ ಪ್ರದೇಶದ ಮಂಡಿ ಸಂಸದೆ, ಬಿಜೆಪಿ ನಾಯಕಿ, ಬಾಲಿವುಡ್ ನಟಿ ಕಂಗನಾ ರಾಣಾವತ್ (Kangana Ranaut) ವಾಗ್ದಾಳಿ ನಡೆಸಿದ್ದು ಹೀಗೆ. ಮಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. "ವಕ್ಫ್ ಮಂಡಳಿಯ ಅನಾಚಾರಕ್ಕೆ ಇಡೀ ದೇಶವೇ ನಲುಗಿದೆ" ಎಂದು ಅವರು ಆರೋಪಿಸಿದರು. ಇದೇ ವೇಳೆ ಅವರು ವಕ್ಫ್ ತಿದ್ದುಪಡಿ ಮಸೂದೆ ಅತಿಕ್ರಮಣವನ್ನು ನಿಯಂತ್ರಿಸುತ್ತದೆ ಎಂದು ಹೇಳಿದರು.
ವಕ್ಫ್ ಮಂಡಳಿಗಳ ಹೆಸರಿನಲ್ಲಿ ಬೃಹತ್ ಪ್ರಮಾಣದ ಭೂಮಿಯನ್ನು ಕಬಳಿಸಲಾಗಿದೆ. ಹೊಸ ಮಸೂದೆಯು ವಕ್ಫ್ ಮಂಡಳಿಗಳನ್ನು ಕಾನೂನಿನ ವ್ಯಾಪ್ತಿಗೆ ತರುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Tejaswi Surya: ಹಿಂದೂಗಳಿಗೆ ಒಂದು ಇಂಚು ಭೂಮಿಯ ಅಗತ್ಯವಿಲ್ಲ- ಓವೈಸಿ ವಿರುದ್ಧ ತೇಜಸ್ವಿ ಸೂರ್ಯ ಅಬ್ಬರ; ಭಾರೀ ವೈರಲಾಗ್ತಿದೆ ಈ ವಿಡಿಯೊ
ಐತಿಹಾಸಿಕ ಕ್ಷಣ ಎಂದ ಕಂಗನಾ
ಏ. 3ರಂದು ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಮಾತನಾಡಿದ್ದ ಕಂಗನಾ, ಇದು ಅಂಗೀಕಾರವಾಗಿದ್ದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದರು. ಇದರ ಕ್ರಡಿಟ್ ಅನ್ನು ಅವರು ಪ್ರಧಾನಿ ನರೇಂದ್ರ ಮೋದಿಗೆ ಅರ್ಪಿಸಿದ್ದರು. ʼʼಇವತ್ತು ನಮ್ಮ ಪಾಲಿಗೆ ಐತಿಹಾಸಿಕ ದಿನ. ಈ ಮಹತ್ವದ ಬೆಳವಣಿಗೆ ನಡೆಯಲು ಪ್ರಧಾನಿ ನರೇಂದ್ರ ಮೋದಿ ಕಾರಣ. ದೇಶದ ಮೇಲೆ ಪರಿಣಾಮ ಬೀರುವ ಇಂತಹ ಎಷ್ಟು ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎಂದು ಯೋಚಿಸಿ. ಈ ದೇಶದಲ್ಲಿ ಕಾನೂನನ್ನು ಮೀರಿ ಏನಾದರೂ ಇರಬಹುದೇ?" ಎಂದು ಅವರು ಪ್ರಶ್ನಿಸಿದ್ದರು.
ಆಡಳಿತ ಪಕ್ಷ ಮತ್ತು ವಿಪಕ್ಷಗಳ ಬಿಸಿಯೇರಿದ ಸುದೀರ್ಘ ಚರ್ಚೆಗಳ ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ ಬೀಳುವುದೊಂದೇ ಬಾಕಿ. ಅದಾದ ಬಳಿಕ ಈ ವಿಧೇಯಕ ಜಾರಿಗೆ ಬರಲಿದೆ. ರಾಜ್ಯಸಭೆಯಲ್ಲಿ ಮಸೂದೆ ಪರವಾಗಿ 128 ಸದಸ್ಯರು ಮತ್ತು ವಿರುದ್ದವಾಗಿ 95 ಸದ್ಯರು ಮತ ಚಲಾಯಿಸಿದರೆ, ಇನ್ನು ಲೋಕಸಭೆಯಲ್ಲಿ 288 ಸದ್ಯರು ಪರವಾಗಿದ್ದರೆ, 232 ವಿರೋಧಿಸಿದ್ದರು.
ಪ್ರಧಾನಿ ಮೋದಿ ಹರ್ಷ
ರಾಜ್ಯಸಭೆಯು ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ 2025 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯನ್ನು ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ನಿರ್ಣಾಯಕ ಕ್ಷಣ ಎಂದು ಕರೆದಿದ್ದರು. ಈ ಮಸೂದೆಗಳು ಧ್ವನಿ ಹತ್ತಿಕ್ಕಲ್ಪಟ್ಟ ಮತ್ತು ಅವಕಾಶ ವಂಚಿತ ಜನರಿಗೆ ಸಹಾಯ ಮಾಡುತ್ತವೆ ಎಂದು ಹೇಳುವ ಮೂಲಕ ಮಸೂದೆಯನ್ನು ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಅವರು ಸಂಸತ್ ಸದಸ್ಯರು ಮತ್ತು ಮಸೂದೆಯ ಕುರಿತು ಶಿಫಾರಸುಗಳನ್ನು ಮಾಡಲು ನೇಮಕಗೊಂಡ ಜಂಟಿ ಸಂಸದೀಯ ಸಮಿತಿಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡ ಜನರಿಗೆ ಕೃತಜ್ಞತೆ ಸಲ್ಲಿಸಿದ್ದರು.
ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿದ್ದ ಮೋದಿ, "ಸಂಸತ್ತಿನ ಎರಡೂ ಸದನಗಳಿಂದ ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯ ಅಂಗೀಕಾರವು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಇದು ವಿಶೇಷವಾಗಿ ದೀರ್ಘಕಾಲದಿಂದ ಅವಕಾಶ ವಂಚಿತರಿಗೆ ಸಹಾಯ ಮಾಡುತ್ತದೆ. ಸಂಸದೀಯ ಮತ್ತು ಸಮಿತಿ ಚರ್ಚೆಗಳಲ್ಲಿ ಭಾಗವಹಿಸಿದ, ತಮ್ಮ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿದ ಮತ್ತು ಈ ಶಾಸನಗಳ ಬಲವರ್ಧನೆಗೆ ಕೊಡುಗೆ ನೀಡಿದ ಎಲ್ಲಾ ಸಂಸತ್ ಸದಸ್ಯರಿಗೆ ಕೃತಜ್ಞತೆಗಳುʼʼ ಎಂದು ಬರೆದುಕೊಂಡಿದ್ದರು.