ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್ ಗಾಂಧಿ ಹುಟ್ಟುಹಬ್ಬದಂದೇ ವಿವಾದ: ಪೋಸ್ಟರ್‌ನಲ್ಲಿ ಪರಶುರಾಮನ ಅವತಾರ, ಹಿಂದೂಗಳಿಗೆ ಮಾಡಿದ ಅವಮಾನ ಎಂದ ಬಿಜೆಪಿ

Controversy on Rahul Gandhi's Birthday: ರಾಹುಲ್ ಗಾಂಧಿ ಅವರನ್ನು ಪರಶುರಾಮ ಎಂದು ಚಿತ್ರಿಸುವ ಪೋಸ್ಟರ್ ಹಿಡಿದು ಗಂಗಾ ನದಿಯ ದಡದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಪೋಸ್ಟರ್‌ನಲ್ಲಿ ನಾಯಕ ಒಂದು ಕೈಯಲ್ಲಿ ಕೊಡಲಿಯನ್ನು ಮತ್ತು ಇನ್ನೊಂದು ಕೈಯಲ್ಲಿ ಭಾರತದ ಸಂವಿಧಾನದ ಪ್ರತಿಯನ್ನು ಹಿಡಿದಿರುವುದನ್ನು ತೋರಿಸಲಾಗಿದೆ.

ರಾಹುಲ್ ಗಾಂಧಿ ಹುಟ್ಟುಹಬ್ಬದಂದೇ ವಿವಾದ

ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ ಪರಶುರಾಮನ ಅವತಾರ -

Priyanka P
Priyanka P Jun 19, 2026 6:52 PM

ನವದೆಹಲಿ, ಜೂ.19: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು (ಶುಕ್ರವಾರ, ಜೂ.19) 56 ನೇ ವರ್ಷಕ್ಕೆ ಕಾಲಿಟ್ಟರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಎಲ್ಲೆಡೆಯಿಂದ ಕಾಂಗ್ರೆಸ್ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶುಭಹಾರೈಸಿದ್ದು, ಎಕ್ಸ್ ಪೋಸ್ಟ್‌ನಲ್ಲಿ ಆರೋಗ್ಯವಂತರಾಗಲಿ ಎಂದು ಹಾರೈಸಿದರು. ದೇಶಾದ್ಯಂತ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಆದರೆ, ವಾರಣಸಿ ಯುವ ಕಾಂಗ್ರೆಸ್ ಘಟಕದ ಆಚರಣೆಯ ಬಗ್ಗೆ ಇದೀಗ ವಿವಾದ ಭುಗಿಲೆದ್ದಿದೆ.

ರಾಹುಲ್ ಗಾಂಧಿ ಅವರನ್ನು ಪರಶುರಾಮ ಎಂದು ಚಿತ್ರಿಸುವ ಪೋಸ್ಟರ್ ಹಿಡಿದು ಗಂಗಾ ನದಿಯ ದಡದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಪೋಸ್ಟರ್‌ನಲ್ಲಿ ನಾಯಕ ಒಂದು ಕೈಯಲ್ಲಿ ಕೊಡಲಿಯನ್ನು ಮತ್ತು ಇನ್ನೊಂದು ಕೈಯಲ್ಲಿ ಭಾರತದ ಸಂವಿಧಾನದ ಪ್ರತಿಯನ್ನು ಹಿಡಿದಿರುವುದನ್ನು ತೋರಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಮೇಲೆ ಹಾಲು ಸುರಿದು, ವೇದ ಮಂತ್ರಗಳೊಂದಿಗೆ ರುದ್ರಾಭಿಷೇಕ ಮಾಡಿದರು. 11 ಕೆಜಿ ತೂಕದ ಕೇಕ್ ಕತ್ತರಿಸಿ ರಾಹುಲ್ ಗಾಂಧಿಯವರ ದೀರ್ಘ, ಆರೋಗ್ಯಕರ ಮತ್ತು ಯಶಸ್ವಿ ಜೀವನಕ್ಕಾಗಿ ಪ್ರಾರ್ಥಿಸಿದರು.

ಆದರೆ ರಾಹುಲ್ ಗಾಂಧಿಯನ್ನು ಪರಶುರಾಮ ಎಂದು ಬಿಂಬಿಸಿದ್ದು, ರಾಜಕೀಯ ವಿವಾದವನ್ನು ಹುಟ್ಟುಹಾಕಿತು. ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಕ್ಪ್ರಹಾರ ನಡೆಸಿದೆ. ಕಾಂಗ್ರೆಸ್ ಕಾರ್ಯಕರ್ತರ ನಡೆಯು ಸ್ವೀಕಾರಾರ್ಹವಲ್ಲ, ಭಗವಾನ್ ಪರಶುರಾಮರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಮಾದರಿ: ರಾಜೀನಾಮೆ ಬಳಿಕ ರಾಹುಲ್ ಗಾಂಧಿ ಶ್ಲಾಘನೆ

“ಕಾಂಗ್ರೆಸ್ ನಾಯಕರು ತಮ್ಮ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ಭಗವಾನ್ ಪರಶುರಾಮ ವಿಷ್ಣುವಿನ ಅವತಾರ. ರಾಹುಲ್ ಗಾಂಧಿಯನ್ನು ಭಗವಾನ್ ಪರಶುರಾಮರೊಂದಿಗೆ ಹೋಲಿಸುವುದು ಅಸಾಧ್ಯ ಮತ್ತು ಗ್ರಹಿಸಲಾಗದು. ಸನಾತನ ಧರ್ಮವನ್ನು ವಿರೋಧಿಸುವವರು ತಮ್ಮನ್ನು ಭಗವಾನ್ ಪರಶುರಾಮರೊಂದಿಗೆ ಹೋಲಿಸಿಕೊಳ್ಳುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ” ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ. “364 ದಿನಗಳ ಕಾಲ ಕಾಂಗ್ರೆಸ್ ನಾಯಕರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಒಂದು ದಿನ ಅವರು ಪರಶುರಾಮರನ್ನು ನೆನಪಿಸಿಕೊಳ್ಳುವಂತೆ ನಟಿಸುತ್ತಾರೆ. ಜನರು ಎಂದಿಗೂ ಮರೆಯುವುದಿಲ್ಲ” ಎಂದು ಅವರು ಹೇಳಿದರು.

ಆದರೆ, ಕಾಂಗ್ರೆಸ್ ಇದನ್ನು ಸಮರ್ಥಿಸಿಕೊಂಡಿದೆ. ಗಂಗಾ ನದಿಯ ಪೂಜೆಯನ್ನು ಆಯೋಜಿಸಿದ್ದ ವಾರಣಾಸಿ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಸಿಂಗ್, “ಇವು ನಮ್ಮ ನಾಯಕನ ಬಗೆಗಿನ ನಮ್ಮ ಭಾವನೆಗಳು. ಭಗವಂತ ಪರಶುರಾಮರು ಭೂಮಿಯಿಂದ ದುಷ್ಟಶಕ್ತಿಗಳನ್ನು ತೊಡೆದುಹಾಕಿದ ರೀತಿಯಲ್ಲಿ, ರಾಹುಲ್ ಗಾಂಧಿ ಕೂಡ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಆಯೋಜಿಸಿದವರು ಸ್ವತಃ ಬ್ರಾಹ್ಮಣರು. ಭಗವಂತ ಪರಶುರಾಮನ ವಂಶದಿಂದ ಬಂದವರು. ಅವರು ತಮ್ಮ ಭಾವನೆಗಳನ್ನು ಪ್ರದರ್ಶಿಸಿದರು ಅಷ್ಟೇ ಎಂದು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಪೂಜೆಯನ್ನು ಸಮರ್ಥಿಸಿಕೊಂಡರು.