ಯುನೆಸ್ಕೋ ಪರಂಪರೆಯ ಪಟ್ಟಿಗೆ ದೀಪಾವಳಿ ಸೇರ್ಪಡೆ; ಮೋದಿ ಸಂತಸ
ಒಗ್ಗಟ್ಟು, ಸಂಪ್ರದಾಯ, ಔದಾರ್ಯದ ಪ್ರತೀಕವಾಗಿ ದೇಶಾದ್ಯಂತ ಆಚರಿಸಲ್ಪಡುವ ದೀಪಾವಳಿಯನ್ನು ಯುನೆಸ್ಕೋ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ದೀಪಾವಳಿ ಆಚರಣೆಗೆ ಜಾಗತಿಕ ಮನ್ನಣೆ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜ್ಞಾನೋದಯ ಮತ್ತು ಸದಾಚಾರದ ಸಂಕೇತವಾಗಿರುವ ದೀಪಾವಳಿ ನಮ್ಮ ನಾಗರಿಕತೆಯ ಆತ್ಮ ಎಂದು ಬಣ್ಣಿಸಿದರು.
(ಸಂಗ್ರಹ ಚಿತ್ರ) -
ನವದೆಹಲಿ: ರಾಮಾಯಣದ ಕಾಲದಿಂದ ದೇಶಾದ್ಯಂತ ಅತ್ಯಂತ ವೈಭವದಿಂದ ಆಚರಿಸಲ್ಪಡುವ ದೀಪಾವಳಿಯನ್ನು (Deepavali 2025) ಇದೀಗ ಯುನೆಸ್ಕೋ (UNESCO) ಪರಂಪರೆಯ ಪಟ್ಟಿಗೆ (UNESCOs heritage List) ಸೇರಿಸಲಾಗಿದೆ. ನವದೆಹಲಿಯ ಕೆಂಪು ಕೋಟೆಯಲ್ಲಿ (Delhi red fort) ನಡೆಯುತ್ತಿರುವ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ (Safeguarding of Intangible Cultural Heritage) ನಡೆಯುತ್ತಿರುವ ಅಂತರಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ ಗುರುವಾರ ಈ ಘೋಷಣೆ ಮಾಡಲಾಗಿದೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra modi), ಜ್ಞಾನೋದಯ ಮತ್ತು ಸದಾಚಾರದ ಸಂಕೇತವಾಗಿರುವ ದೀಪಾವಳಿ ನಮ್ಮ ನಾಗರಿಕತೆಯ ಆತ್ಮವಾಗಿದೆ ಎಂದು ಹೇಳಿದರು.
ಸಾಮಾಜಿಕ ಒಗ್ಗಟ್ಟು, ಸಾಂಪ್ರದಾಯಿಕ ಕರಕುಶಲತೆ, ಔದಾರ್ಯ, ಯೋಗಕ್ಷೇಮ ಮತ್ತು ಸಮುದಾಯ ಮನೋಭಾವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೀವಂತ ಸಂಪ್ರದಾಯ ದೀಪಾವಳಿ ಎಂದು ಯುನೆಸ್ಕೋ ಮಾನ್ಯತೆಯಲ್ಲಿ ದೃಢಪಡಿಸಿದೆ.
ಭಾರತದ ವಿಚಾರದಲ್ಲಿ ಮೃದುವಾಯ್ತಾ ಅಮೆರಿಕದ ಧೋರಣೆ? ವ್ಯಾಪಾರ ಒಪ್ಪಂದದ ಬಗ್ಗೆ ಅಧಿಕಾರಿ ಹೇಳಿದ್ದೇನು?
ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಗೆ ಹಿಂದೂಗಳ ಹಬ್ಬವಾದ ದೀಪಾವಳಿಯನ್ನು ಯುನೆಸ್ಕೋ ಸೇರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಸ್ವಾಗತಾರ್ಹವಾಗಿದೆ. ಇದರಿಂದ ಭಾರತ ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯರು ಸಂತೋಷ ವ್ಯಕ್ತಪಡಿಸಿದ್ದಾರೆ. ದೀಪಾವಳಿಯು ಭಾರತದ ಸಂಸ್ಕೃತಿ ಮತ್ತು ನೀತಿಯಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದರು.
People in India and around the world are thrilled.
— Narendra Modi (@narendramodi) December 10, 2025
For us, Deepavali is very closely linked to our culture and ethos. It is the soul of our civilisation. It personifies illumination and righteousness. The addition of Deepavali to the UNESCO Intangible Heritage List will… https://t.co/JxKEDsv8fT
ದೀಪಾವಳಿಯನ್ನು ಯುನೆಸ್ಕೋ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದರಿಂದ ಇದರ ಆಚರಣೆಗೆ ಜಾಗತಿಕ ಮನ್ನಣೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ರಾಮಾಯಣ ಕಾಲದಿಂದ ಆಚರಿಸಲ್ಪಡುತ್ತಿರುವ ಈ ಹಬ್ಬಕ್ಕೆ ಕಾರಣವಾಗಿರುವ ಪ್ರಭು ಶ್ರೀ ರಾಮನ ಆದರ್ಶಗಳು ಶಾಶ್ವತವಾಗಿ ನಮಗೆ ಮಾರ್ಗದರ್ಶನ ನೀಡಲಿ ಎಂದು ಅವರು ತಿಳಿಸಿದರು.
ಇದೇ ಮೊದಲ ಬಾರಿಗೆ ಡಿಸೆಂಬರ್ 8 ರಿಂದ ಭಾರತದಲ್ಲಿಆರಂಭವಾಗಿರುವ ಯುನೆಸ್ಕೋದ ವಾರ್ಷಿಕ ಸಭೆಯು ಡಿಸೆಂಬರ್ 13 ರವರೆಗೆ ನಡೆಯಲಿದೆ.
ಯುನೆಸ್ಕೋ ಮಾನ್ಯತೆ ಹೇಳುವುದೇನು?
ಸಾಮಾಜಿಕ ಒಗ್ಗಟ್ಟನ್ನು ಬಲಪಡಿಸುವ, ಸಾಂಪ್ರದಾಯಿಕ ಕರಕುಶಲತೆಯನ್ನು ಪೋಷಿಸುವ, ಯೋಗಕ್ಷೇಮ, ಔದಾರ್ಯ ಮತ್ತು ಸಮುದಾಯ ಮನೋಭಾವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೀವಂತ ಸಂಪ್ರದಾಯವಾಗಿ ದೀಪಾವಳಿಯನ್ನು ಗುರುತಿಸಲಾಗಿದೆ. ಇದು ಹಲವರ ಜೀವನೋಪಾಯಕ್ಕೆ ಬೆಂಬಲವನ್ನು ನೀಡುತ್ತದೆ. ಲಿಂಗ ಸಮಾನತೆ, ಸಾಂಸ್ಕೃತಿಕ ಶಿಕ್ಷಣ ಮತ್ತು ಸಮುದಾಯ ಕಲ್ಯಾಣಕ್ಕಾಗಿ ಈ ಹಬ್ಬವು ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ ಎಂದು ಯುನೆಸ್ಕೋ ಹೇಳಿದೆ.
ಯುನೆಸ್ಕೋ ಮಾನ್ಯತೆ ಕುರಿತು ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ದೀಪಾವಳಿ ಪ್ರತಿಯೊಬ್ಬ ಭಾರತೀಯನಲ್ಲೂ ಆಳವಾದ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಇದು ಹಲವಾರು ತಲೆಮಾರುಗಳಿಂದ ಆಚರಿಸಲ್ಪಡುತ್ತಿರುವ ಹಬ್ಬವಾಗಿದೆ ಎಂದು ಹೇಳಿದರು.
ಕುಂಬಾರರಿಂದ ಕುಶಲಕರ್ಮಿಗಳವರೆಗೆ ಲಕ್ಷಾಂತರ ದೀಪಾವಳಿಯ ಸಂಪ್ರದಾಯಗಳನ್ನು ಜೀವಂತವಾಗಿಡುತ್ತಿದ್ದಾರೆ. ಯುನೆಸ್ಕೋ ಟ್ಯಾಗ್ ಅವರ ಜವಾಬ್ದಾರಿಯನ್ನು ಗೌರವಿಸಿದೆ ಎಂದರು.
ರಾಮ ರಾಜ್ಯದ ಮೌಲ್ಯಗಳನ್ನು ಸಾಕಾರಗೊಳಿಸುವ ದೀಪಾವಳಿ, ಇದರ ಆಚರಣೆಯನ್ನು ಮಕ್ಕಳಿಗೆ ಕಲಿಸಬೇಕು. ಹೆಚ್ಚುವರಿ, ಕೃತಜ್ಞತೆ, ಶಾಂತಿ, ಹಂಚಿಕೆ, ಮಾನವೀಯತೆ, ಉತ್ತಮ ಆಡಳಿತದ ದೀಪವನ್ನು ನಾವು ಬೆಳಗಿಸಬೇಕಿದೆ ಎಂದು ಹೇಳಿದರು.
ಯುನೆಸ್ಕೋದ ಪರಂಪರೆಯ ಪಟ್ಟಿಯಲ್ಲಿ ಭಾರತದ ಇನ್ನು ಹಲವಾರು ಸಂಪ್ರದಾಯಗಳು ಈಗಾಗಲೇ ಗುರುತಿಸಲ್ಪಟ್ಟಿವೆ. ಅವುಗಳಲ್ಲಿ ಮುಖ್ಯವಾಗಿ ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗುಜರಾತಿನ ಗರ್ಭ, ಯೋಗ, ವೇದ ಪಠಣ, ರಾಮಲೀಲಾ, ರಾಮಾಯಣದ ಸಾಂಪ್ರದಾಯಿಕ ನಾಟಕಗಳು ಸೇರಿವೆ.
ಗೋವಾ ನೈಟ್‌ಕ್ಲಬ್ ದುರಂತ: ಲೂತ್ರಾ ಸಹೋದರರು ಪರಾರಿ, ಸಹ-ಮಾಲೀಕನ ಬಂಧನ
ಏನಿದು ಅಮೂರ್ತ ಸಾಂಸ್ಕೃತಿಕ ಪರಂಪರೆ?
ಇದು ತಲೆಮಾರುಗಳಿಂದ ಬಂದಿರುವ ಸಾಂಸ್ಕೃತಿಕ ಪರಂಪರೆಗೆ ನೀಡುವ ಗೌರವವಾಗಿದೆ. ಇದರಲ್ಲಿ ಜೀವನ ಪದ್ಧತಿ ಮತ್ತು ಅಭಿವ್ಯಕ್ತಿಗಳನ್ನು ದರ್ಶಿಸಲಾಗುತ್ತದೆ. ಇದರಲ್ಲಿ ಸಮುದಾಯ ಆಧಾರಿತವಾಗಿರುವ ಮೌಖಿಕ ಸಂಪ್ರದಾಯ, ಪ್ರದರ್ಶನ ಕಲೆ, ಆಚರಣೆ, ಹಬ್ಬ, ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದ ಸಮುದಾಯ ಜ್ಞಾನ ಮತ್ತು ಸಾಂಪ್ರದಾಯಿಕ ಕರಕುಶಲತೆಗಳು ಇದರಲ್ಲಿ ಸೇರಿವೆ.