ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಭಾರತ-ಪಾಕ್, ಇಸ್ರೇಲ್-ಇರಾನ್ ಸಂಘರ್ಷ; 2025ರ 5 ಪ್ರಮುಖ ಯುದ್ಧಗಳಿವು

5 Major Wars: 2025ರಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಹಲವು ಪ್ರಮುಖ ಯುದ್ಧ, ಸಂಘರ್ಷಗಳು ಸಂಭವಿಸಿ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ಪರಿಸ್ಥಿತಿಯನ್ನು ಗಂಭೀರವಾಗಿ ಬದಲಿಸಿವೆ. ಭಾರತ-ಪಾಕಿಸ್ತಾನ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳು ಸೇರಿದಂತೆ ಈ ಐದು ಪ್ರಮುಖ ಯುದ್ಧಗಳು ಈ ವರ್ಷ ಜಗತ್ತಿನ ನಿದ್ದೆಗೆಡಿಸಿದವು.

2025ರಲ್ಲಿ ಸಂಭವಿಸಿದ 5 ಪ್ರಮುಖ ಯುದ್ಧಗಳಿವು

ಸಂಗ್ರಹ ಚಿತ್ರ -

Priyanka P
Priyanka P Dec 10, 2025 1:23 PM

ದೆಹಲಿ, ಡಿ. 10: 2025ರಲ್ಲಿ ಹಲವು ಪ್ರಮುಖ ಸಶಸ್ತ್ರ ಸಂಘರ್ಷಗಳು ಸಂಭವಿಸಿವೆ. ಇವು ಪ್ರಾದೇಶಿಕ ಭದ್ರತೆಯನ್ನು ಮರು ರೂಪಿಸಿದ್ದು, ವಿಶ್ವಾದಾದ್ಯಂತ ತಾಂತ್ರಿಕ ಮತ್ತು ರಾಜನೀತಿಯನ್ನು ವ್ಯವಸ್ಥೆಗಳನ್ನು ಬದಲಿಸಿದವು. ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ನೆರೆಹೊರೆಯ ದೇಶಗಳ ನಡುವೆ ಉದ್ರಿಕ್ತ ಪರಿಸ್ಥಿತಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಯುದ್ಧಗಳು ಮತ್ತು ದೀರ್ಘಾವಧಿಯ ದಂಗೆಗಳವರೆಗೆ, ಈ ಐದು ಸಂಘರ್ಷಗಳು ಭಯದ ವಾತಾವರಣ ಮೂಡಿಸಿದವು.

ಭಾರತ-ಪಾಕಿಸ್ತಾನ ಬಿಕ್ಕಟ್ಟು

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವಿಗೀಡಾಗಿದ್ದಕ್ಕೆ ಪ್ರತೀಕಾರವಾಗಿ ಭಾರತವು ಮೇ 7ರಂದು ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯ ಮೂಲಕ ಕ್ಷಿಪಣಿ ದಾಳಿ ನಡೆಸಿತು. ಈ ಕಾರಣದಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಭಾರತದ ಈ ದಾಳಿಯಿಂದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಅಡಗು ತಾಣ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಅಡಗುತಾಣಗಳು ಧ್ವಂಸಗೊಂಡವು.

ಮೊಂಡು ಸ್ವಭಾವ ಬಿಡಿದ ಪಾಕಿಸ್ತಾನ ಕೂಡ ಇದಕ್ಕೆ ಪ್ರತಿದಾಳಿ ನಡೆಸಿತು. ನಾಲ್ಕು ದಿನಗಳ ಕಾಲ ನಡೆದ ಮಿಲಿಟರಿ ಕಾರ್ಯಾಚರಣೆಯು ಮೇ 10ರಂದು ಕದನ ವಿರಾಮದೊಂದಿಗೆ ಕೊನೆಗೊಂಡಿತು. ಇದು ಪರಮಾಣು-ಸಶಸ್ತ್ರ ಹೊಂದಿರುವ 2 ನೆರೆಹೊರೆಯ ದೇಶಗಳ ನಡುವಿನ ಅತ್ಯಂತ ಗಂಭೀರ ಬಿಕ್ಕಟ್ಟು ಎನಿಸಿಕೊಂಡಿತು.

ಡೊನಾಲ್ಡ್ ಟ್ರಂಪ್‍ - ಶುಭಾಂಶು ಶುಕ್ಲಾ: 2025ರ ಟಾಪ್ 10 ಸುದ್ದಿಯಲ್ಲಿದ್ದವರಿವರು

ಇಸ್ರೇಲ್-ಇರಾನ್ ಯುದ್ಧ

ಜೂನ್ 13ರಂದು ಇರಾನ್ ವಿರುದ್ಧ ಇಸ್ರೇಲ್ ವ್ಯಾಪಕ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿತು. ಪರಮಾಣು ಸೌಲಭ್ಯಗಳು, ಮಿಲಿಟರಿ ಸ್ಥಾಪನೆಗಳು ಮತ್ತು ಆಡಳಿತ-ಸಂಬಂಧಿತ ಮೂಲಸೌಕರ್ಯಗಳನ್ನು ನಾಶ ಮಾಡಿತು. ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕ ಮಧ್ಯಸ್ಥಿಕೆ ವಹಿಸಲು ಧಾವಿಸಿತು. ಜೂನ್ 24ರಂದು ಕದನ ವಿರಾಮವನ್ನು ಘೋಷಿಸಲಾಯಿತು. ಆ ಮೂಲಕ ಹನ್ನೆರಡು ದಿನಗಳ ಸಂಘರ್ಷವನ್ನು ಕೊನೆಗೊಳಿಸಲಾಯಿತು. ಇರಾನ್ ಮತ್ತು ಇಸ್ರೇಲ್ ಎರಡು ಕಡೆಯೂ ಸಾಕಷ್ಟು ಸಾವು-ನೋವು ಸಂಭವಿಸಿದವು.

ಥೈಲ್ಯಾಂಡ್-ಕಾಂಬೋಡಿಯಾ ಗಡಿ ಸಂಘರ್ಷ

ಜುಲೈ 24ರಂದು ಥೈಲ್ಯಾಂಡ್-ಕಾಂಬೋಡಿಯಾ ಗಡಿಯಲ್ಲಿ ಸಶಸ್ತ್ರ ಘರ್ಷಣೆಗಳು ಭುಗಿಲೆದ್ದವು. ಪ್ರಿಯಾ ವಿಹಿಯರ್ ಮತ್ತು ತಾ ಮುಯೆನ್ ಥಾಮ್ ಸೇರಿದಂತೆ ಪ್ರಾಚೀನ ದೇವಾಲಯ ಮತ್ತು ವಸಾಹತುಶಾಹಿ ಯುಗದ ಅಸ್ಪಷ್ಟ ಗಡಿರೇಖೆಗಳಿಂದ, ಸುತ್ತಮುತ್ತಲಿನ ಪ್ರದೇಶದ ಬಗ್ಗೆ ದೀರ್ಘಕಾಲದಿಂದ ಉಳಿದುಕೊಂಡಿರುವ ವಿವಾದಗಳಿಂದ ಈ ಹೋರಾಟವು ಹುಟ್ಟಿಕೊಂಡಿತು.

ಜುಲೈ 27ರ ಹೊತ್ತಿಗೆ ಕನಿಷ್ಠ 12 ಸ್ಥಳಗಳಲ್ಲಿ ಸಂಘರ್ಷ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಕನಿಷ್ಠ 38 ಜನರು ಸಾವಿಗೀಡಾದರು ಮತ್ತು 3,00,000ಕ್ಕೂ ಹೆಚ್ಚು ನಾಗರಿಕರು ಸ್ಥಳಾಂತರಗೊಂಡರು. 2025ರಲ್ಲಿ ಮಲೇಷ್ಯಾ ಅಧ್ಯಕ್ಷತೆಯಲ್ಲಿ ನಡೆದ ಆಸಿಯಾನ್ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತು ಅಧಿವೇಶನವನ್ನು ಕರೆಯಿತು. ಮಲೇಷ್ಯಾದ ಮಧ್ಯಸ್ಥಿಕೆ ಮತ್ತು ಅಮೆರಿಕ ಹಾಗೂ ಚೀನಾದ ರಾಜತಾಂತ್ರಿಕ ಬೆಂಬಲದ ನಂತರ ಜುಲೈ 28ರಂದು ಕೌಲಾಲಂಪುರದಲ್ಲಿ ನಡೆದ ಮಾತುಕತೆಯ ಸಮಯದಲ್ಲಿ ಎರಡೂ ದೇಶಗಳು ತಕ್ಷಣದ ಮತ್ತು ಬೇಷರತ್ತಾದ ಕದನ ವಿರಾಮಕ್ಕೆ ಒಪ್ಪಿಕೊಂಡವು.

ಅಫ್ಘಾನಿಸ್ತಾನ-ಪಾಕಿಸ್ತಾನ ಉದ್ವಿಗ್ನತೆ

ಅಕ್ಟೋಬರ್ 9,ರಂದು ಪಾಕಿಸ್ತಾನವು ಕಾಬೂಲ್‌ನಲ್ಲಿ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಾಯಕ ನೂರ್ ವಾಲಿ ಮೆಹ್ಸೂದ್‌ನನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಪ್ರಾರಂಭವಾಯಿತು.

ಕೆಲವು ದಿನಗಳ ನಂತರ ಅಫ್ಘಾನಿಸ್ತಾನ ಪ್ರತೀಕಾರದ ಕಾರ್ಯಾಚರಣೆ ನಡೆಸಿತು. ಪರಿಣಾಮವಾಗಿ ಕನಿಷ್ಠ 23 ಪಾಕಿಸ್ತಾನಿ ಸೈನಿಕರು ಮೃತಪಟ್ಟರು. ಈ ವೇಳೆ ಕನಿಷ್ಠ ಒಂಬತ್ತು ಅಫ್ಘಾನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕೊನೆಗೆ ಎರಡೂ ದೇಶಗಳು ಕದನ ವಿರಾಮವನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡವು.

ಈ ವರ್ಷ ನೆಟ್ಟಿಗರ ಮನಗೆದ್ದ ವಿದೇಶಿ ಪ್ರವಾಸಿಗರು ಭಾರತವನ್ನು ಹೊಗಳಿದ ಟಾಪ್‌ 8 ವಿಡಿಯೊ ಇದು

ಡಿಆರ್‌ಸಿ-ರುವಾಂಡಾ ಸಂಘರ್ಷ ಮತ್ತು ಗೋಮಾ ಆಕ್ರಮಣ

ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಜನವರಿಯಲ್ಲಿ ರುವಾಂಡನ್ ಪಡೆಗಳ ಬೆಂಬಲದೊಂದಿಗೆ M23 ಬಂಡುಕೋರರು ಗೋಮಾ ಆಕ್ರಮಣವನ್ನು ಪ್ರಾರಂಭಿಸಿದಾಗ ಸಂಘರ್ಷ ತೀವ್ರಗೊಂಡಿತು. ಜನವರಿ 23ರ ಸುಮಾರಿಗೆ ಪ್ರಾರಂಭವಾದ ಈ ಕಾರ್ಯಾಚರಣೆಯು ಜನವರಿ 27ರಂದು ಉತ್ತರ ಕಿವು ಪ್ರಾಂತ್ಯದ ರಾಜಧಾನಿ ಗೋಮಾವನ್ನು ವಶಪಡಿಸಿಕೊಳ್ಳುವಲ್ಲಿ ಕೊನೆಗೊಂಡಿತು. ತಿಂಗಳ ಅಂತ್ಯದವರೆಗೆ ಹೋರಾಟ ಮುಂದುವರಿಯಿತು.

2012ರ ನಂತರದ ಕಿವು ಸಂಘರ್ಷದಲ್ಲಿ ಗೋಮಾದ ಪತನವು ಈ ವರ್ಷದ ಪ್ರಮುಖ ಬೆಳವಣಿಗೆ ಎನಿಸಿಕೊಂಡಿತು. ಡಿಆರ್‌ಸಿ ಮತ್ತು ರುವಾಂಡಾ ನಡುವಿನ ಅಮೆರಿಕ-ಮಧ್ಯಸ್ಥಿಕೆಯ ಶಾಂತಿ ಒಪ್ಪಂದಕ್ಕೆ ಜೂನ್‌ನಲ್ಲಿ ಸಹಿ ಹಾಕಲಾಯಿತು. ಆದರೆ ಈ ಒಪ್ಪಂದವು ಹೋರಾಟವನ್ನು ನಿಲ್ಲಿಸುವಲ್ಲಿ ವಿಫಲವಾಯಿತು. M23 ಪಡೆಗಳು ದೊಡ್ಡ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದವು ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಕಾಂಗೋಲೀಸ್ ಮತ್ತು ಮಿತ್ರಪಕ್ಷದ ಬುರುಂಡಿಯನ್ ಪಡೆಗಳೊಂದಿಗೆ ಘರ್ಷಣೆಗಳು ಮುಂದುವರಿದವು.