ಡಾ. ಶಾಹೀನ್ ಪ್ರೇಯಸಿಯಲ್ಲ... ಹೆಂಡತಿ ಎಂದ ದೆಹಲಿ ಸ್ಫೋಟದ ಆರೋಪಿ ಮುಝಮ್ಮಿಲ್!
Delhi blast case: ದೆಹಲಿ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಂತೆ, ಆರೋಪಿಯಾಗಿರುವ ಮುಝಮ್ಮಿಲ್ ಮತ್ತು ಡಾ. ಶಾಹೀನ್‌ರ ನಡುವಿನ ನಿಜವಾದ ಸಂಬಂಧ ಕುರಿತು ಹೊಸ ಮಾಹಿತಿಗಳು ಹೊರಬಿದ್ದಿವೆ. ಮೊದಲಿನಿಂದಲೇ ಗೆಳತಿ ಎಂದು ತಿಳಿದುಬಂದಿದ್ದ ಡಾ. ಶಾಹೀನ್, ವಾಸ್ತವದಲ್ಲಿ ಮುಝಮ್ಮಿಲ್‌ನ ಹೆಂಡತಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ದೆಹಲಿ ಸ್ಫೋಟ ಆರೋಪಿಗಳಾದ ಮುಝಮ್ಮಿಲ್ ಮತ್ತು ಡಾ. ಶಾಹೀನ್ -
ದೆಹಲಿ: ರಾಷ್ಟ್ರ ರಾಜಧಾನಿಯ ದೆಹಲಿ ಕೆಂಪುಕೋಟೆ ಕಾರು ಸ್ಫೋಟದ (Delhi Blast Case) ತನಿಖೆಯಲ್ಲಿ ಮತ್ತೊಂದು ಹೊಸ ವಿಚಾರ ಬಹಿರಂಗವಾಗಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾಗಿರುವ ಡಾ. ಶಾಹೀನ್ ಶಾಹಿದ್ (Dr. Shaheen) ತನ್ನ ಗೆಳತಿಯಲ್ಲ, ಆಕೆ ತನ್ನ ಪತ್ನಿ ಎಂದು ಬಂಧಿತ ಆರೋಪಿ ಮುಝಮ್ಮಿಲ್ ಅಹ್ಮದ್ ಗನೈ ಹೇಳಿದ್ದಾನೆ. ಸೆಪ್ಟೆಂಬರ್ 2023 ರಲ್ಲಿ ಇಬ್ಬರೂ ಔಪಚಾರಿಕವಾಗಿ ವಿವಾಹವಾದರು ಎಂದು ಅವನು ಹೇಳಿಕೊಂಡಿದ್ದಾನೆ.
ವರದಿಯ ಪ್ರಕಾರ, ಕಳೆದ ವರ್ಷ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಳಿಯ ಮಸೀದಿಯಲ್ಲಿ ತಮ್ಮ ನಿಕಾಹ್ ಕಾರ್ಯಕ್ರಮ ನಡೆಸಿದ್ದರು ಎಂದು ಮುಜಮ್ಮಿಲ್ ಹೇಳಿದ್ದಾನೆ. ಇದಕ್ಕೆ ಷರಿಯಾ ಕಾನೂನಿನ ಪ್ರಕಾರ 5,000–6,000 ರೂ. ಮೆಹರ್ ನಿಗದಿಪಡಿಸಲಾಗಿದೆ. ಈ ಹೊಸ ವಿಚಾರವು, ಭಯೋತ್ಪಾದನಾ ಘಟಕಕ್ಕೆ ಶಾಹೀನ್ ನೀಡಿರುವ ಆರ್ಥಿಕ ಬೆಂಬಲದ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಹೇಳಲಾಗಿದೆ.
ನವೆಂಬರ್ 10ರ ಸ್ಫೋಟದ ಹಿಂದಿನ ಪಿತೂರಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಬಾಂಬರ್ ಉಮರ್ ಉನ್ ನಬಿಗೆ ಆಶ್ರಯ ನೀಡಿದ್ದ ಮತ್ತು ದಾಳಿಗೆ ಸ್ವಲ್ಪ ಮೊದಲು ಲಾಜಿಸ್ಟಿಕಲ್ ಬೆಂಬಲವನ್ನು ನೀಡಿದ ಆರೋಪದ ಮೇಲೆ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್‍ನನ್ನು ಬಂಧನಕ್ಕೆ ಒಳಪಡಿಸಿದೆ.
ದೆಹಲಿ ಕಾರು ಸ್ಫೋಟ ಪ್ರಕರಣ: ಏಳನೇ ಆರೋಪಿ NIA ಬಲೆಗೆ
ಜೈಶ್-ಎ-ಮೊಹಮ್ಮದ್ (ಜೆಇಎಂ) ಮಾಡ್ಯೂಲ್‌ಗೆ ಶಾಹೀನ್ ಗಣನೀಯ ಪ್ರಮಾಣದ ಹಣವನ್ನು ವರ್ಗಾಯಿಸಿದ್ದು, ಮುಜಮ್ಮಿಲ್ ಜೊತೆಗಿನ ಕಾನೂನು ಸಂಬಂಧ ಇದಕ್ಕೆ ಕಾರಣವೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. 2023ರಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಅವರು ಮುಜಮ್ಮಿಲ್‌ಗೆ ಸುಮಾರು 6.5 ಲಕ್ಷ ರೂ. ನೀಡಿದ್ದರು. ನಂತರ 2024ರಲ್ಲಿ ಸ್ಫೋಟದ ಸಂಚಿನಲ್ಲಿ ಬಳಸಲಾದ ಫೋರ್ಡ್ ಇಕೋಸ್ಪೋರ್ಟ್ ಖರೀದಿಸಲು ಉಮರ್‌ಗೆ 3 ಲಕ್ಷ ರೂ. ಸಾಲ ನೀಡಿದ್ದರು ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ, ಶಾಹೀನ್‍ಳು ಗುಂಪಿಗೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಖರೀದಿಸಲು 27–28 ಲಕ್ಷ ರೂ. ಕೊಡುಗೆ ನೀಡಿದ್ದಾಳೆ ಎಂದು ಶಂಕಿಸಲಾಗಿದೆ. ಆದರೆ, ವಿಚಾರಣೆಯ ವೇಳೆ ಆ ಹಣವನ್ನು ಭಯೋತ್ಪಾದನೆಗೆ ಒದಗಿಸಿದ್ದಲ್ಲ, ಬದಲಾಗಿ ಜಕಾತ್ (ಧಾರ್ಮಿಕ ದೇಣಿಗೆ) ಗಾಗಿ ಎಂದು ಆಕೆ ವಿಚಾರಣಾಧಿಕಾರಿಗಳಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.
ದಾಳಿಗೆ ಸಂಬಂಧಿಸಿರುವ ಎಲ್ಲ ವ್ಯಕ್ತಿಗಳನ್ನು ಪತ್ತೆಹಚ್ಚಲು ರಾಜ್ಯಗಳಾದ್ಯಂತ ಎನ್‌ಐಎ ಕಾರ್ಯಾಚರಣೆ ಕೈಗೊಂಡಿದೆ. ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮತ್ತು ಮಾರಾಟ ಮಾಡುವಲ್ಲಿ ಭಾಗಿಯಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಮಾಡ್ಯೂಲ್‌ಗಳ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Delhi Blast: ಬುರ್ಹಾನ್ ವಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ದೆಹಲಿ ಸ್ಫೋಟ ಮಾಡಿದ್ರಾ?
ಬಾರಾಮುಲ್ಲಾ, ಶ್ರೀನಗರ, ಅನಂತ್‌ನಾಗ್ ಮತ್ತು ಗಂಡರ್‌ಬಾಲ್‌ನಲ್ಲಿ 2016 ರಿಂದ ಸಕ್ರಿಯವಾಗಿರುವ ಈ ಜಾಲಗಳು ಪಾಕಿಸ್ತಾನ ಮೂಲದ ನಿರ್ವಾಹಕರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿವೆ. ಮುಜಮ್ಮಿಲ್ ಮತ್ತು ಉಮರ್ ಬಳಸುವ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಶಂಕಿಸಲಾಗಿದೆ.