E20 ಶುದ್ಧ ಇಂಧನ, ಎಥನಾಲ್ ರಹಿತ ಪೆಟ್ರೋಲ್‌ಗೆ ಮರಳುವ ಯೋಜನೆ ಇಲ್ಲ: ಸಂಸತ್ತಿನಲ್ಲಿ ಕೇಂದ್ರದ ಸ್ಪಷ್ಟನೆ
E20 petrol: ಸಂಸತ್ತಿನಲ್ಲಿ ಕೇಂದ್ರ ಸರ್ಕಾರ E20 ಪೆಟ್ರೋಲ್ ಸಂಪೂರ್ಣ ಸುರಕ್ಷಿತವಾಗಿದ್ದು, ಸಾಮಾನ್ಯ ಎಥನಾಲ್ ರಹಿತ ಪೆಟ್ರೋಲ್‌ಗೆ ಮರಳುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. E20 ಇಂಧನದಿಂದ ಇಂಜಿನ್‌ಗೆ ಹಾನಿಯಾಗುವುದಿಲ್ಲ, ರೈತರಿಗೆ ಹಾಗೂ ದೇಶದ ಆರ್ಥಿಕತೆಗೆ ಮಹತ್ತರ ಲಾಭವಾಗಿದೆ ಎಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜು. 23: E20 ಪೆಟ್ರೋಲ್ (Petrol) ಅತ್ಯಂತ ಸುರಕ್ಷಿತ, ಸ್ವಚ್ಛ ಹಾಗೂ ತಾಂತ್ರಿಕವಾಗಿ ಸುಧಾರಿತ ಇಂಧನವಾಗಿದ್ದು, ಎಥನಾಲ್ ರಹಿತ ಸಾಮಾನ್ಯ ಪೆಟ್ರೋಲ್‌ಗೆ (Ethanol-free petrol) ಮರಳುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಶೇ. 20ಕ್ಕಿಂತ ಹೆಚ್ಚು ಎಥನಾಲ್ ಮಿಶ್ರಣ ಮಾಡುವ ಕುರಿತಾಗಿಯೂ ನಿರ್ಧಾರವಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ತಿಳಿಸಿದ್ದಾರೆ.
ತಂತ್ರಜ್ಞಾನದಲ್ಲಿ ಹಿಂದಕ್ಕೆ ಹೋಗುವ ಬದಲು ಆಧುನಿಕ ತಂತ್ರಜ್ಞಾನದತ್ತ ಸಾಗುವುದೇ ಸರ್ಕಾರದ ಮುಖ್ಯ ನೀತಿ. ಭಾರತವು ನಿಗದಿತ 5 ವರ್ಷ ಮುಂಚಿತವಾಗಿಯೇ ಶೇ. 20ರಷ್ಟು ಎಥನಾಲ್ ಮಿಶ್ರಣದ ಗುರಿ ತಲುಪಿದೆ. ಶೇ. 85 ಎಥನಾಲ್ ಹೊಂದಿರುವ E85 ಇಂಧನವು ಕೇವಲ ಫ್ಲೆಕ್ಸ್-ಫ್ಯೂಯಲ್ ವಾಹನಗಳಿಗೆ ಮಾತ್ರ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಹೇಳಿದ್ದಾರೆ.
ಎಂಜಿನ್‌ಗಳಿಗೆ ಹಾನಿಯಾಗಲಿದೆಯೇ?
E20 ಪೆಟ್ರೋಲ್‌ನಿಂದ ಎಂಜಿನ್ ಹಾಳಾಗುತ್ತದೆ ಮತ್ತು ಮೈಲೇಜ್ ಕಡಿಮೆಯಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ನಿರಾಕರಿಸಿದೆ. ನೀತಿ ಆಯೋಗ ಹಾಗೂ ಇತರ ಸಂಸ್ಥೆಗಳು ನಡೆಸಿದ ಪ್ರಯೋಗಾಲಯ ಪರೀಕ್ಷೆಗಳು E20ಯಿಂದ ಎಂಜಿನ್‌ಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದನ್ನು ನಿರೂಪಿಸಿವೆ. ಪ್ರಮುಖ ವಾಹನ ತಯಾರಕ ಕಂಪನಿಗಳು ಕೂಡ ಎಂಜಿನ್ ವೈಫಲ್ಯದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ದೃಢಪಡಿಸಿವೆ.
ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಪ್ರಸ್ತುತ ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಕಾರುಗಳು E20 ಇಂಧನದಲ್ಲಿ ಸುಗಮವಾಗಿ ಚಲಿಸುತ್ತಿವೆ. E10 ವಾಹನಗಳಲ್ಲಿ ಮೈಲೇಜ್ ಅತ್ಯಲ್ಪ (ಶೇ. 3-5) ಕಡಿಮೆಯಾಗಬಹುದಾದರೂ, ಈ ಇಂಧನದ ಹೆಚ್ಚಿನ ಆಕ್ಟೇನ್ ಸಂಖ್ಯೆಯು ವಾಹನದ ಚಾಲನಾ ಅನುಭವ, ಪಿಕ್-ಅಪ್ ಮತ್ತು ಇಂಜಿನ್ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಆರ್ಥಿಕತೆ ಮತ್ತು ರೈತರಿಗೆ ಅಪಾರ ಲಾಭ
ಎಥನಾಲ್ ಮಿಶ್ರಣ ಯೋಜನೆಯಿಂದ ದೇಶಕ್ಕೆ ಸುಮಾರು 2 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. ಕಚ್ಚಾ ತೈಲ ಆಮದು 316 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ತಗ್ಗಿದ್ದು, 952 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿದೆ. ಜತೆಗೆ ದೇಶದ ರೈತರಿಗೆ 1.66 ಲಕ್ಷ ಕೋಟಿ ರುಪಾಯಿಗೂ ಹೆಚ್ಚಿನ ಪಾವತಿಯಾಗಿದೆ.
ಗ್ರಾಹಕರ ದೂರು ಪರಿಹಾರ ವ್ಯವಸ್ಥೆ
ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಬಲವಾದ ವ್ಯವಸ್ಥೆ ರೂಪಿಸಿವೆ. ಪೆಟ್ರೋಲ್ ಪಂಪ್‌ಗಳು, ಟೋಲ್-ಫ್ರೀ ಹೆಲ್ಪ್‌ಲೈನ್‌ಗಳು, ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳ ಮೂಲಕ ಸಾರ್ವಜನಿಕರು ದೂರು ದಾಖಲಿಸಬಹುದು. ಬಂದ ದೂರುಗಳನ್ನು ತನಿಖೆ ನಡೆಸಿ ನಿಗದಿತ ಸಮಯದೊಳಗೆ ಪರಿಹರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.