ಮತ್ತೆ ಹೊಸ ಅಭಿಯಾನ ಘೋಷಿಸಿದ ಸಿಜೆಪಿ: ಸೆಪ್ಟೆಂಬರ್ 17ರಿಂದ ʼಬುಡಕಟ್ಟು ಶಾಲೆಗಳನ್ನು ಸುಧಾರಿಸಿ’ ಅಭಿಯಾನ ಪ್ರಾರಂಭ
Adivasi School Thik Karo: ಮಹಾರಾಷ್ಟ್ರದಿಂದ 'ಆದಿವಾಸಿ ಸ್ಕೂಲ್ ಟೀಕ್ ಕರೋ' ಅಭಿಯಾನವನ್ನು ಸೆಪ್ಟೆಂಬರ್ 17ರಂದು ಸಿಜೆಪಿ ಪ್ರಾರಂಭಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಭಿಜಿತ್ ದೀಪ್ಕೆ ತಿಳಿಸಿದರು. ಬುಡಕಟ್ಟು ಶಾಲೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷಿಸಿವೆ ಎಂದು ಅವರು ಆರೋಪಿಸಿದರು.
ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ) -
ಮುಂಬೈ, ಸೆ. 16: ಮಹಾರಾಷ್ಟ್ರದಿಂದ 'ಆದಿವಾಸಿ ಸ್ಕೂಲ್ ಟೀಕ್ ಕರೋ' (ಬುಡಕಟ್ಟು ಶಾಲೆಗಳನ್ನು ಸುಧಾರಿಸಿ) ಅಭಿಯಾನವನ್ನು ಸೆಪ್ಟೆಂಬರ್ 17ರಿಂದ ಸಿಜೆಪಿ (Cockroach Janta Party) ಪ್ರಾರಂಭಿಸಲಿದೆ. ಗಡ್ಚಿರೋಲಿ ಜಿಲ್ಲೆಯ ಬುಡಕಟ್ಟು ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಸುಧಾರಿಸುವತ್ತ ಗಮನಹರಿಸುವ ಅಭಿಯಾನವನ್ನು ಕಾಕ್ರೋಚ್ ಜನತಾ ಪಕ್ಷ ಪ್ರಾರಂಭಿಸಲಿದೆ ಎಂದು ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ತಿಳಿಸಿದ್ದಾರೆ. ಬುಡಕಟ್ಟು ಶಾಲೆಗಳನ್ನು ಸುಧಾರಿಸಿ ಎಂಬ ಈ ಅಭಿಯಾನವು ಬುಡಕಟ್ಟು ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೀಪ್ಕೆ, ಬುಡಕಟ್ಟು ಶಾಲೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷಿಸಿವೆ ಎಂದು ಆರೋಪಿಸಿದರು. ಆ ಶಾಲೆಗಳ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಲು ಸಿಜೆಪಿ ಪ್ರತಿನಿಧಿಗಳು ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. “80 ವರ್ಷಗಳಲ್ಲಿ ಭಾರತದಾದ್ಯಂತ ಬುಡಕಟ್ಟು ಪ್ರದೇಶಗಳಲ್ಲಿನ ಶಾಲೆಗಳನ್ನು ಎಲ್ಲ ಸರ್ಕಾರಗಳು ನಿರ್ಲಕ್ಷಿಸಿವೆ” ಎಂದು ಗಡ್ಚಿರೋಲಿಯಿಂದ ಅಭಿಯಾನವನ್ನು ಘೋಷಿಸುತ್ತಾ ದೀಪ್ಕೆ ಹೇಳಿದರು.
ಬುಡಕಟ್ಟು ಪ್ರದೇಶದ ಶಾಲೆಗಳಿಗೆ ಸಿಜೆಪಿ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ವಿದ್ಯಾರ್ಥಿಗಳ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನಹರಿಸಲಿದ್ದಾರೆ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಶಾಲೆಗಳು, ಸೌಲಭ್ಯಗಳ ಕೊರತೆ ಮತ್ತು ಬುಡಕಟ್ಟು ವಲಯದ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯದ ಕುರಿತು ದೀಪ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
''ಅಧಿಕಾರದಲ್ಲಿದ್ದವರು ತಮ್ಮ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡ್ತಾರ?'' ಅಭಿಜಿತ್ ದೀಪ್ಕೆ ಕಿಡಿ
ಎರಡು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 590ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ದೀಪ್ಕೆ ಆರೋಪಿಸಿದ್ದಾರೆ. ಇದರಲ್ಲಿ ಹಲವು ಸಾವುಗಳು ಹಾವಿನ ಕಡಿತದಂತಹ ಘಟನೆಗಳಿಗೆ ಸಂಬಂಧಿಸಿವೆ ಎಂದು ಅವರು ಪ್ರತಿಪಾದಿಸಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಿತಿಗತಿಯ ಬಗ್ಗೆಯೂ ದೀಪ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದೇಶದಲ್ಲಿ ಮಂಜೂರಾಗಿರುವ ಒಟ್ಟು 720 ಶಾಲೆಗಳ ಪೈಕಿ 477 ಶಾಲೆಗಳು ಸದ್ಯ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ. 22.8ರಷ್ಟಿದ್ದರೆ, ಕೇವಲ 130 ಎಸ್‌ಟಿ ಅರ್ಜಿದಾರರು ಮಾತ್ರ ಐಐಟಿಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಸಿಜೆಪಿ ತನ್ನ ರಾಷ್ಟ್ರವ್ಯಾಪಿ ಸ್ಕೂಲ್ ಟೀಕ್ ಕರೋ ಅಭಿಯಾನವನ್ನು ಪ್ರಾರಂಭಿಸಿದ ಒಂದು ತಿಂಗಳ ನಂತರ ಈ ಹೊಸ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಜಂತರ್ ಮಂತರ್‌ನಲ್ಲಿ ಸೀಸನ್ 2 ಹೋರಾಟ ಶೀಘ್ರದಲ್ಲೇ ಪ್ರಾರಂಭ: ಅಭಿಜಿತ್ ದೀಪ್ಕೆ ಸುಳಿವು
ಪೋಷಕರು, ಗ್ರಾಮ ಪಂಚಾಯತ್ ಮುಖ್ಯಸ್ಥರು ಮತ್ತು ಸ್ಥಳೀಯ ಸಮುದಾಯಗಳು ಶಾಲಾ ಮೂಲ ಸೌಲಭ್ಯಗಳನ್ನು ಸುಧಾರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ದೀಪ್ಕೆ ಒತ್ತಾಯಿಸಿದ್ದರು. ತಮ್ಮ ಹುಟ್ಟೂರು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿಯಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡುವ ಮೂಲಕ ಅಭಿಯಾನ ಪ್ರಾರಂಭವಾಯಿತು.
ಶಾಲಾ ದುರಸ್ತಿ, ಶಿಕ್ಷಕರ ಹುದ್ದೆಗಳು, ಸರ್ಕಾರಿ ಹಣಕಾಸು, ಡಿಜಿಟಲ್ ಕಲಿಕಾ ಸೌಲಭ್ಯಗಳು, ಶೌಚಾಲಯಗಳು ಮತ್ತು ಕ್ರೀಡಾ ಮೂಲಸೌಕರ್ಯಗಳ ಬಗ್ಗೆಯೂ ಸಿಜೆಪಿ ರಾಜ್ಯ ಶಿಕ್ಷಣ ಸಚಿವರಿಂದ ಮಾಹಿತಿ ಕೋರಿತ್ತು.