ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೋಟ್ ಚೋರಿ ಬಗ್ಗೆ ಬಹಿರಂಗ ಸವಾಲು ಹಾಕಿದರೂ ಗೃಹಸಚಿವರು ಉತ್ತರ ನೀಡಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

Rahul Gandhi allegation: ಸಂಸತ್ತಿನಲ್ಲಿ ವೋಟ್ ಚೋರಿ ಕುರಿತ ಸಾರ್ವಜನಿಕ ಸವಾಲಿನ ಬಳಿಕವೂ ಗೃಹ ಸಚಿವ ಅಮಿತ್ ಶಾ ಯಾವುದೇ ಉತ್ತರ ನೀಡಿಲ್ಲ ಎಂದು ರಾಹುಲ್ ಗಾಂಧಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಒತ್ತಡದಲ್ಲಿರುವಂತೆ ತೋರುತ್ತಿದೆ, ಅವರ ಕೈಗಳು ಕಂಪಿಸುತ್ತಿದ್ದವು ಎಂದು ಹೇಳಿದರು.

ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಕ್ಪ್ರಹಾರ

ಸಂಗ್ರಹ ಚಿತ್ರ -

Priyanka P
Priyanka P Dec 11, 2025 8:12 PM

ನವದೆಹಲಿ: ಲೋಕಸಭೆಯಲ್ಲಿ ಚುನಾವಣಾ ಸುಧಾರಣೆ ಕುರಿತು ಉದ್ವಿಗ್ನ ವಾತಾವರಣ ನಿರ್ಮಾಣವಾದ ಒಂದು ದಿನದ ಬಳಿಕ, ರಾಹುಲ್ ಗಾಂಧಿ (Rahul Gandhi) ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ತನ್ನ ದಾಳಿ ತೀವ್ರಗೊಳಿಸಿದ್ದಾರೆ. ಬಿಜೆಪಿ ನಾಯಕರು ಒತ್ತಡದಲ್ಲಿ ಇದ್ದಂತೆ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.

ಅಮಿತ್ ಶಾ ಅವರ ಕೈಗಳು ಕಂಪಿಸುತ್ತಿದ್ದವು, ತಪ್ಪು ಭಾಷೆಯನ್ನು ಬಳಸಿದರು. ಅಮಿತ್ ಶಾ ಬಹಳ ಮಾನಸಿಕ ಒತ್ತಡದಲ್ಲಿದ್ದಾರೆ. ನಿನ್ನೆ ಇದನ್ನು ಇಡೀ ದೇಶವೇ ನೋಡಿತು ಎಂದು ರಾಹುಲ್ ಗಾಂಧಿ ವಾಕ್ಪ್ರಹಾರ ನಡೆಸಿದರು. ಅಲ್ಲದೆ, ವೋಟ್ ಚೋರಿ ಕುರಿತು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಗಳ ಬಗ್ಗೆ ಚರ್ಚಿಸಲು ಅಮಿತ್ ಶಾ ಅವರಿಗೆ ನೇರವಾಗಿ ಸವಾಲು ಹಾಕಿದ್ದರೂ, ಯಾವುದೇ ಉತ್ತರ ಸಿಗಲಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ ಜೊತೆ ಮಹತ್ವದ ಸಭೆ; ಅಂಥದ್ದೇನಿದೆ?

ನಾನು ಹೇಳಿದ ವಿಷಯಗಳಿಗೆ ಅವರು ಯಾವುದೇ ಉತ್ತರ ನೀಡಲಿಲ್ಲ. ಯಾವುದೇ ಸಾಕ್ಷಿಯನ್ನೂ ನೀಡಲಿಲ್ಲ. ನನ್ನ ಪತ್ರಿಕಾಗೋಷ್ಠಿಯ ವಿಷಯವಾಗಿ ಚರ್ಚೆಗೆ ಬರಲು ನಾನು ಅಮಿತ್ ಶಾ ಅವರಿಗೆ ನೇರವಾಗಿ ಸವಾಲು ಹಾಕಿದೆ. ಆದರೆ ಅದಕ್ಕೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸತ್ಯ ಏನು ಎಂಬುದು ನಿಮಗೆಲ್ಲ ಗೊತ್ತೇ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಲೋಕಸಭೆಯಲ್ಲಿ ಇಬ್ಬರು ನಾಯಕರ ನಡುವೆ ತೀವ್ರ ವಾಗ್ವಾದ ನಡೆದ ಒಂದು ದಿನದ ನಂತರ, ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಚುನಾವಣಾ ಸುಧಾರಣೆಗಳ ಕುರಿತು ಶುರುವಾದ ಚರ್ಚೆಯು ಶೀಘ್ರದಲ್ಲೇ ವಾಕ್ಸಮರವಾಗಿ ಮಾರ್ಪಟ್ಟಿತು.

ಇನ್ನು ಸರ್ಕಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಶಾ ಸಮರ್ಥಿಸಿಕೊಂಡರು. ಅಕ್ರಮ ವಲಸಿಗರನ್ನು ಹೊರಹಾಕಲು ಇದು ಅಗತ್ಯವಾಗಿದೆ ಎಂದು ಹೇಳಿದರು. ಇನ್ನೊಂದೆಡೆ, ಬಿಜೆಪಿ ಮತ್ತು ಚುನಾವಣಾ ಆಯೋಗವು ದೊಡ್ಡ ಪ್ರಮಾಣದ ಮತದಾರರ ವಂಚನೆ ಮಾಡಲು ಕೈಜೋಡಿಸಿವೆ ಎಂಬ ಪ್ರತಿಪಕ್ಷದ ಆರೋಪಗಳಿಗೆ ಶಾ ಸಾರ್ವಜನಿಕವಾಗಿ ಉತ್ತರ ನೀಡಬೇಕೆಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ಅವರು ತಮ್ಮ ಮತದಾರರ ವಂಚನೆಯ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಆರೋಪಗಳ ಬಗ್ಗೆ ಚರ್ಚೆ ಮಾಡಲು ಶಾ ಅವರಿಗೆ ಸವಾಲು ಹಾಕಿದಾಗ ಅವರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಾತನಾಡಿದ ಶಾ, ನಾನು ಕಳೆದ 30 ವರ್ಷಗಳಿಂದ ಶಾಸನಸಭೆಗಳಲ್ಲಿ ಮತ್ತು ಸಂಸತ್ತಿನಲ್ಲಿ ಆಯ್ಕೆಗೊಂಡಿದ್ದೇನೆ. ನನಗೆ ವಿಸ್ತೃತ ಅನುಭವವಿದೆ ಎಂದು ಹೇಳಿದರು.

ಪ್ರತಿಪಕ್ಷದ ನಾಯಕರು, ತಾನು ಆ ಪ್ರಶ್ನೆಗೆ ಉತ್ತರಿಸಬೇಕೆಂದು ಹೇಳುತ್ತಿದ್ದಾರೆ. ಸಂಸತ್ ನಿಮ್ಮ ಇಚ್ಛೆಯ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ನಾನು ಯಾವ ರೀತಿ ಮಾತನಾಡುತ್ತೇನೆ ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ಅವರು ಸಹನೆಯಿಂದ ನನ್ನ ಉತ್ತರವನ್ನು ಕೇಳಬೇಕು. ನಾನು ಎಲ್ಲಾ ಪ್ರಶ್ನೆಗೂ ಉತ್ತರ ನೀಡುತ್ತೇನೆ. ಆದರೆ, ನನ್ನ ಭಾಷಣದ ಕ್ರಮವನ್ನು ಅವರು ನಿರ್ಧರಿಸಲಾರರು ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕರೇ? ನಿರಾಧಾರ ಆರೋಪಗಳ ಸರದಾರರೇ?

ಆ ನಂತರ ಗೃಹ ಸಚಿವ ಅಮಿತ್ ಶಾ, ಗಾಂಧಿ-ನೆಹರು ಕುಟುಂಬವನ್ನು ಟೀಕಿಸಿದರು. ದೇಶದಲ್ಲಿ ಮೊದಲ ವೋಟ್ ಚೋರಿಯು ಭಾರತದ ಮೊದಲ ಪ್ರಧಾನಿ ಆಯ್ಕೆಯಾದಾಗ ಸಂಭವಿಸಿತು ಎಂದು ಆರೋಪಿಸಿದರು. ಅಲ್ಲದೆ, ಸೋನಿಯಾ ಗಾಂಧಿ ಭಾರತೀಯ ಪೌರತ್ವವನ್ನು ಪಡೆಯುವ ಮುನ್ನ ಮತ ಚಲಾಯಿಸಿದರು ಎಂಬ ಆರೋಪವು ಅವರ ಮೇಲಿತ್ತು, ಆ ಪ್ರಕರಣ ಕೋರ್ಟ್‌ನಲ್ಲಿದೆ ಎಂಬುದನ್ನು ನೆನಪಿಸಿದರು.

ಕೊನೆಗೆ, ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ಸದಸ್ಯರು ಭಾಷಣದ ಮಧ್ಯದಲ್ಲಿ ಸಭಾತ್ಯಾಗ ಮಾಡಿದರು. ಸಂಜೆ ಮಾತನಾಡಿದ ಅವರು, ಪಾರದರ್ಶಕ ಮತದಾರರ ಪಟ್ಟಿಯಿಂದ ಹಿಡಿದು ಇವಿಎಂಗಳ ನಿರ್ವಹಣೆವರೆಗೆ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ವಿನಾಯಿತಿ ನೀಡುವವರೆಗೆ, ಕೇಳಿರುವ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರ ನೀಡಲು ಶಾ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.