ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕರೇ? ನಿರಾಧಾರ ಆರೋಪಗಳ ಸರದಾರರೇ?
Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಈ ಸಲ ನಿರಾಧಾರವಾದ ಗಂಭೀರ ಆಪಾದನೆಯನ್ನು ಮಾಡಿದ್ದಾರೆ. ಕೇಂದ್ರ ಸರಕಾರವು ಪ್ರತಿಪಕ್ಷಗಳನ್ನು ಕಡೆಗಣಿಸುತ್ತಿದೆ. ವಿದೇಶಿ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಅವರು ತಮ್ಮನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಹಾಗಾದರೆ ವಾಸ್ತವವೇನು? ಇಲ್ಲಿದೆ ವಿವರ.
ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -
-ಚಂದ್ರಕಾಂತ ಶೆಟ್ಟಿ
ಬೆಂಗಳೂರು, ಡಿ. 7: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಈ ಸಲ ನಿರಾಧಾರವಾದ ಗಂಭೀರ ಆಪಾದನೆಯನ್ನು ಮಾಡಿದ್ದಾರೆ. ಕೇಂದ್ರ ಸರಕಾರವು ಪ್ರತಿಪಕ್ಷಗಳನ್ನು ಕಡೆಗಣಿಸುತ್ತಿದೆ. ವಿದೇಶಿ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಅವರು ತಮ್ಮನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಅವರ ಪ್ರಕಾರ, ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡದಿರುವಂತೆ ಕೇಂದ್ರ ಸರಕಾರವು ವಿದೇಶಿ ಗಣ್ಯರಿಗೆ ಹೇಳುತ್ತದೆ. ಇದರೊಂದಿಗೆ ರಾಹುಲ್ ಗಾಂಧಿಯವರು ಮತ್ತೊಮ್ಮೆ ನಿರಾಧಾರವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗಾದರೆ ವಾಸ್ತವವೇನು?
ವಿದೇಶಿ ಗಣ್ಯರು ದೇಶಕ್ಕೆ ಭೇಟಿ ನೀಡಿದಾಗ, ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ನಿರ್ಧಾರವಾಗುತ್ತದೆ. ಸರಕಾರ ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಮಧ್ಯಪ್ರವೇಶಿಸುವುದಿಲ್ಲ. ಈಗ ಯಾವುದೇ ಸರಕಾರ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಇಷ್ಟಪಡದಿದ್ದರೆ, ಅದಕ್ಕೆ ಕೇಂದ್ರ ಸರಕಾರ ಏನುತಾನೆ ಮಾಡಲು ಸಾಧ್ಯವಿದೆ? ರಾಹುಲ್ ಗಾಂಧಿ ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಅವರ ಮಾನಸಿಕತೆ ಹೇಗಿದೆ ಎಂದರೆ ಕಾನ್ವೆಂಟ್ ಶಾಲಾ ಮಕ್ಕಳ " ಶೌಂಟಿ-ಬೌಂಟಿʼʼ ಆಟದ ಗದ್ದಲದಂತೆ ಇದೆ. ಶೌಂಟಿ ಎಂಬ ಮಗು ಬೌಂಟಿ ಎಂಬ ಮತ್ತೊಂದರ ಜತೆಗೆ ಜಗಳವಾಡುವ ರೀತಿಯಲ್ಲಿ. ಈ ಮಕ್ಕಳಾಟದಲ್ಲಿ ಶೌಂಟಿಯು ಎಲ್ಲರ ಬಳಿ ಬೌಂಟಿಯ ಜತೆಗೆ ಮಾತನಾಡದಿರುವಂತೆ ಕೇಳುತ್ತದೆ. ರಾಹುಲ್ ಗಾಂಧಿಯವರು ತಮ್ಮ ಸ್ಥಾನಮಾನದ ಘನತೆ-ಗೌರವವನ್ನು ಅರ್ಥ ಮಾಡಿಕೊಂಡಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಮ್ಮದು ಗೌರವಯುತ ಮತ್ತು ಜವಾಬ್ದಾರಿಯ ಹುದ್ದೆ ಎಂಬುದನ್ನು ಅವರು ಮನನ ಮಾಡಿಕೊಂಡಿಲ್ಲ. ರಾಹುಲ್ ಗಾಂಧಿಯವರ ಹೇಳಿಕೆಗಳು ನಿರರ್ಥಕವಾಗಿರುತ್ತವೆ. ಅದನ್ನು ಕೇಳಿದರೆ ನಗು ತರಿಸುತ್ತದೆ. ಪ್ರಧಾನ ಮಂತ್ರಿ ಮೋದಿ ಇಡೀ ದೇಶದ ಪ್ರಧಾನ ಮಂತ್ರಿ. ರಾಷ್ಟ್ರೀಯ ಅಭಿವೃದ್ಧಿಯ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಕ್ಷುಲ್ಲಕ ವಿಷಯಗಳಿಗೆಲ್ಲ ಪ್ರತಿಕ್ರಿಯಿಸುವಷ್ಟು ಸಮಯಾವಕಾಶ ಅವರ ಬಳಿ ಇರುವುದಿಲ್ಲ. ಅಂಥ ಪ್ರಧಾನಿಯವರು, ದೇಶಕ್ಕೆ ಭೇಟಿ ನೀಡುವ ಗಣ್ಣ ಅತಿಥಿಗಳಿಗೆ " ರಾಹುಲ್ ಗಾಂಧಿಯನ್ನು ಭೇಟಿ ಮಾಡದಿರಿʼʼ ಹೇಳಲು ಸಾಧ್ಯವೇ? ದೇಶ ನಿರ್ಮಾಣಕ್ಕಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಪ್ರಧಾನಿ ಇಂಥ ಕ್ಷುಲ್ಲಕ ಸಂಗತಿಗೆ ತಮ್ಮ ಕಾಲಹರಣವನ್ನು ಖಂಡಿತ ಮಾಡಲಾರರು.
ನ್ಯಾಶನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್
ಈಗ ರಾಹುಲ್ ಗಾಂಧಿಯರ ಸುಳ್ಳು ಆರೋಪಗಳನ್ನು ಗಮನಿಸೋಣ. ಈಗಾಗಲೇ ಹಲವಾರು ವಿದೇಶಿ ಗಣ್ಯ ಅತಿಥಿಗಳು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಇದರದಲ್ಲಿ ಶೇಖ್ ಹಸೀನಾ (10 ಜೂನ್, 2024), ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ (21 ಆಗಸ್ಟ್ 2024), ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸುನ್ (18 ಮಾರ್ಚ್ 2025), ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಳಂ( 16 ಸೆಪ್ಟೆಂಬರ್ 2025) ಇದ್ದಾರೆ.
ಮಾತ್ರವಲ್ಲದೆ, ವಿದೇಶಿ ಗಣ್ಯರು ಭಾರತಕ್ಕೆ ಬಂದಾಗ ಅವರು ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಲೇಬೇಕು ಎಂಬ ನಿಶ್ಚಿತ ಅಥವಾ ಅಧಿಕೃತ ನಿಯಮವಿಲ್ಲ. ಆದರೆ ಪ್ರಜಾಪ್ರಭುತ್ವದ ಸಂಪ್ರದಾಯ ಮತ್ತು ಶಿಷ್ಟಾಚಾರದ ಭಾಗವಾಗಿ ಭೇಟಿ ಮಾಡಬಹುದು. ಆದರೆ ಇದು ಕಡ್ಡಾಯ ಎಂದು ವಿದೇಶಾಂಗ ಸಚಿವಾಲಯವು ಘೋಷಿಸಿಲ್ಲ.ರಾಹುಲ್ ಗಾಂಧಿಯವರು ಈಗಲೂ "10 ಜನ್‌ಪಥ್ ಮನಸ್ಥಿತಿಯಲ್ಲಿʼʼ ಇದ್ದಾರೆ. ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಸಲಹಾ ಮಂಡಳಿಯ ( ಎನ್‌ಎಸಿ) ಅಧ್ಯಕ್ಷರಾಗಿ, ಪ್ರಧಾನಿಯವರಿಗಿಂತಲೂ ಉನ್ನತ ಮಟ್ಟದಲ್ಲಿ ಇದ್ದಂತೆ ಇರುತ್ತಿದ್ದರು. ವಿದೇಶಿ ಗಣ್ಯರು ಬಂದಾಗ ಅವರು ಪ್ರಧಾನಿಯವರನ್ನು ಭೇಟಿಯಾಗದಿದ್ದರೂ, ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿದ್ದರು. ರಾಹುಲ್ ಗಾಂಧಿಯವರಲ್ಲೂ ಇಂಥ ವರ್ತನೆ, ಆಭೀಪ್ಸೆಯನ್ನು ಗಮನಿಸಬಹುದು. ಅವರ ಹತಾಶೆಭರಿತ ಹೇಳಿಕೆಗಳಲ್ಲಿ ಇದು ವ್ಯಕ್ತವಾಗುತ್ತದೆ.
ಯಾವುದೇ ಪ್ರೊಟೊಕಾಲ್ ಇರದಿದ್ದರೂ, ವಿದೇಶಿ ನಾಯಕರು ಭಾರತಕ್ಕೆ ಬಂದಾಗ ತಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ತಕರಾರು ತೆಗೆದಿದ್ದಾರೆ. ಪ್ರತಿಪಕ್ಷದ ನಾಯಕನಾಗಿ ಹಲವಾರು ಸಲ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅವರು ಅರ್ಥ ಮಾಡಿಕೊಂಡಿಲ್ಲ. ಬದಲಿಗೆ ಅವಮಾನಿಸಿದ್ದಾರೆ. ಸ್ವತಃ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವಶಗ ಅಧಿಕೃತವಾಗಿ ಮಾಹಿತಿ ನೀಡುವುದಿಲ್ಲ. ರಾಜಕೀಯ ಮತ್ತು ಸಾಂವಿಧಾನಿಕ ಜವಾಬ್ದಾರಿಗಳನ್ನು ರಾಹುಲ್ ಗಾಂಧಿಯವರು ಗಂಭೀರವಾಗಿ ತೆಗೆದುಕೊಂಡಿಲ್ಲ.
ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ಮಹತ್ವದ ಸಾಂವಿಧಾನಿಕ ಹುದ್ದೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್, ಮಾಜಿ ಸಿಜೆಐ ಬಿಆರ್ ಗವಾಯಿ ಮತ್ತು ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗೈರು ಹಾಜರಾಗಿದ್ದರು. ಈ ಹಿಂದೆ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಕೂಡ ರಾಹುಲ್ ಗಾಂಧಿ ಭಾಗವಹಿಸಿರಲಿಲ್ಲ. ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಗೈರು ಹಾಜರಾಗಿದ್ದರು. ಇಂಥ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜವಾಬ್ದಾರಿಯನ್ನು ಅವರು ಮರೆತಿದ್ದರು.
ಪದೇ ಪದೆ ಹೀಗೆ ಮಹತ್ವದ ಸಮಾರಂಭಗಳಲ್ಲಿ ಗೈರು ಹಾಜರಾಗುವ ರಾಹುಲ್ ಗಾಂಧಿಯವರ ಧೋರಣೆಯು, ದುರುದ್ದೇಶಪೂರ್ವಕವಾಗಿ ವರ್ತಿಸುತ್ತಿರುವುದನ್ನು ಮತ್ತು ಬೇಜವಾಬ್ದಾರಿತನದ ನಡವಳಿಕೆಯನ್ನು ಬಿಂಬಿಸಿದೆ. ಇಂಥ ಸಾಂವಿಧಾನಿಕ ಸಂಸ್ಥೆಗಳ ಬಗಗೆ ನಿಮ್ಮಲ್ಲಿರುವ ಅನಾದರವನ್ನು ಪರೋಕ್ಷವಾಗಿ ತೋರಿಸುತ್ತದೆ. ರಾಹುಲ್ ಗಾಂಧಿಯವರು ತಮ್ಮನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕಿಂತಲೂ ಮೇಲಿರುವವರೆಂದು ಭಾವಿಸಿದ್ದಾರೆಯೇ? ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿಯವರು, ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ ಎಂದು ಆರೋಪಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಬೇಜವಾಬ್ದಾರಿಯ ನಡೆಯನ್ನು ಅನುಸರಿಸುತ್ತಾರೆ.
R T Vittalmurthy Column: ರಾಹುಲ್ ಗಾಂಧಿಯವರಿಗೆ ಒಪ್ಪಂದದ ಕತೆ ಬೇಕಿಲ್ಲ
ರಾಹುಲ್ ಗಾಂಧಿಯವರು ತಾವು ಬಯಸಿದಂತಹ ಗೌರವಾದರಗಳು ಒಲಿಯಬೇಕು ಎಂದು ಭಾವಿಸಿದರೆ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಡವೇ? ಈಗಲೂ ಪಾಳೇಗಾರಿಕೆಯ ಮನಸ್ಥಿತಿ ಇಟ್ಟುಕೊಂಡಿದ್ದರೆ, ರಾಜ ಪ್ರಭುತ್ವ ಎಂದೋ ಭಾರತದಲ್ಲಿ ಮುಗಿದ ಅಧ್ಯಾಯವಾಗಿದೆ ಎಂಬುದನ್ನು ಸ್ಮರಿಸಿಕೊಳ್ಳುವುದು ಸೂಕ್ತ. 10 ಜನಪಥ್‌ನಲ್ಲಿ ಹಿಂದೆ ಏನೆಲ್ಲ ಮಾಡಿದ್ದರೋ, 2014ರಲ್ಲಿ ಮೋದಿಯವರ ಆಗಮನದೊಂದಿಗೆ ಮುಕ್ತಾಯವಾಗಿದೆ.
ರಾಹುಲ್ ಗಾಂಧಿಯವರು ಒಂದನ್ನು ಮನನ ಮಾಡಿಕೊಳ್ಳಬೇಕು. ವಿದೇಶಿ ಗಣ್ಯರು ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಅವರನ್ನು ಭೇಟಿಯಾಗಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಸರಕಾರ ಕೂಡ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದ್ದರಿಂದ ಬಾಲಿಶತನದಿಂದ ಕೂಡಿದ ಹೇಳಿಕೆಗಳನ್ನು ಕೊಡುವುದು ಸೂಕ್ತವಲ್ಲ. ಅದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತಕ್ಕೆ ಮುಜುಗರವಾಗಲು ಅವರು ಆಸ್ಪದ ಕೊಡಬಾರದು. ಏಕೆಂದರೆ ರಾಹುಲ್ ಗಾಂಧಿಯವರು ಪ್ರತಿಪಕ್ಷ ಸ್ಥಾನದಲ್ಲಿ ಇದ್ದಾರೆ. ಅವರು ನೀಡುವ ಹೇಳಿಕೆಗಳು ಪ್ರಬುದ್ಧತೆಯಿಂದ ಕೂಡಿರಬೇಕು.