ಡೆಲಿವರಿ ಬಾಯ್ ಆಗಿದ್ದ ಹುಡುಗ ಈಗ ಎಐ ಸ್ಟಾರ್ಟ್ ಅಪ್ ಬಾಸ್: ಸುರಾಜ್ ಬಿಸ್ವಾಸ್ ಎಂಬ ಯುವ ಸಾಧಕನ ಯಶೋಗಾಥೆ
ಸುರಾಜ್ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಡೆಲಿವರಿ ಕೆಲಸ ಅನಿವಾರ್ಯತೆಯಷ್ಟೇ ಅಲ್ಲ, ಅವರ ದೊಡ್ಡ ಕನಸುಗಳಿಗೆ ಅತ್ಯಂತ ದೊಡ್ಡ ಆಸರೆಯಾಗಿತ್ತು. ಸ್ವಾವಲಂಬಿ ಬದುಕು ನಡೆಸುತ್ತಾ, ಅವರು ತಮ್ಮ ದೊಡ್ಡ ಗುರಿಗಳನ್ನು ತಲುಪಲು ಬೇಕಾದ ಅಗತ್ಯಗಳಿಗಾಗಿ ಅವರು ಈ ಡೆಲಿವರಿ ಬಾಯ್ ಉದ್ಯೋಗವನ್ನು ಪ್ರಜ್ಞಾ ಪೂರ್ವಕವಾಗಿ ಆರಿಸಿಕೊಂಡಿದ್ದರು.
-
ಶಿಕ್ಷಣಕ್ಕೆ ಆಸರೆಯಾಗಲು ಜೊಮ್ಯಾಟೊ ಡೆಲಿವರಿ ಪಾರ್ಟ್ ನರ್ ಆಗಿ ಕೆಲಸ ಆರಂಭಿಸಿದ ಯುವಕ ನೊಬ್ಬ, ಇಂದು ಕೋಟಿ ಬೆಲೆಯ ಎಐ ಸ್ಟಾರ್ಟ್ ಅಪ್ ಕಂಪನಿಯ ಮಾಲೀಕ! ಹೌದು, ಇದು ಕೇವಲ ಕಷ್ಟಪಟ್ಟು, ಸ್ವಯಂ-ಕಲಿಕೆಯಿಂದಲೇ ಅಸೆಸ್ಲಿ ಎಂಬ ಎಐ ಸ್ಟಾರ್ಟ್ ಅಪ್ ಕಟ್ಟಿ ಬೆಳೆಸುತ್ತಿರುವ ಸುರಾಜ್ ಬಿಸ್ವಾಸ್ ಅವರ ಸ್ಫೂರ್ತಿದಾಯಕ ಯಶೋಗಾಥೆ.
ಸುರಾಜ್ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಡೆಲಿವರಿ ಕೆಲಸ ಅನಿವಾರ್ಯತೆಯಷ್ಟೇ ಅಲ್ಲ, ಅವರ ದೊಡ್ಡ ಕನಸುಗಳಿಗೆ ಅತ್ಯಂತ ದೊಡ್ಡ ಆಸರೆಯಾಗಿತ್ತು. ಸ್ವಾವಲಂಬಿ ಬದುಕು ನಡೆಸುತ್ತಾ, ಅವರು ತಮ್ಮ ದೊಡ್ಡ ಗುರಿಗಳನ್ನು ತಲುಪಲು ಬೇಕಾದ ಅಗತ್ಯಗಳಿಗಾಗಿ ಅವರು ಈ ಡೆಲಿವರಿ ಬಾಯ್ ಉದ್ಯೋಗವನ್ನು ಪ್ರಜ್ಞಾ ಪೂರ್ವಕವಾಗಿ ಆರಿಸಿಕೊಂಡಿದ್ದರು. ಡೆಲಿವರಿ ಪಾರ್ಟನರ್ ಕೆಲಸ ಅವರಿಗೊಂದು ಆರ್ಥಿಕ ಭದ್ರತೆ ನೀಡಿದ್ದಲ್ಲದೆ, ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಆತ್ಮವಿಶ್ವಾಸವನ್ನೂ ತಂದುಕೊಟ್ಟಿತು.
ಸುರಾಜ್ ಅವರದ್ದು ತೀರಾ ಸಾಧಾರಣ ಹಿನ್ನೆಲೆಯ ಕುಟುಂಬ. ತಂದೆ ದಿನಗೂಲಿ ಕಾರ್ಮಿಕ ರಾಗಿದ್ದರೂ ಮಗನನ್ನು ಡಾಕ್ಟರ್ ಮಾಡಬೇಕೆಂಬ ದೊಡ್ಡ ಕನಸು ಕಂಡಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ದಿನ ಕಳೆದಂತೆ ಕುಟುಂಬದ ಖರ್ಚುಗಳು ಹೆಚ್ಚಾದಾಗ, ಬರೀ ಓದಿನಿಂದ ಷ್ಟೇ ಬದುಕು ಸಾಗಿಸಲು ಸಾಧ್ಯವಿಲ್ಲ ಎಂಬ ಕಟು ಸತ್ಯ ಸುರಾಜ್ ಗೆ ಅರ್ಥವಾಯಿತು. ಕಾಲೇಜು ಫೀಸ್ ಕಟ್ಟಲು ಹಾಗೂ ಬೆಂಗಳೂರಿನಲ್ಲಿ ಬದುಕಲು ಕೈಲೊಂದಿಷ್ಟು ಹಣ ಬೇಕೇ ಬೇಕಿತ್ತು. ಇದೇ ಕಾರಣಕ್ಕಾಗಿ, 2019 ರಲ್ಲಿ ಪದವಿ ಓದುತ್ತಿದ್ದಾಗಲೇ ಸುರಾಜ್ ಜೊಮ್ಯಾಟೊ ಸಂಸ್ಥೆಗೆ ಡೆಲಿವರಿ ಪಾರ್ಟ್ ನರ್ ಆಗಿ ಸೇರಿಕೊಂಡರು.
ಇದನ್ನೂ ಓದಿ: Naveen Sagar Column: 94ರ ಈ ಯುವ ನಿರ್ದೇಶಕನ ಹೆಸರು ಸಿಂಗೀತಂ !
ಕೇವಲ ಕಾಲೇಜು ಫೀಸ್ ಕಟ್ಟಲು ಆರಂಭಿಸಿದ ಕೆಲಸ, ನೋಡನೋಡುತ್ತಿದ್ದಂತೆ ಸುರಾಜ್ ಬದುಕಿನ ದಿಕ್ಕನ್ನೇ ಬದಲಿಸಿತು. ಜೀವನದ ಅತ್ಯಂತ ಪ್ರಮುಖ ಘಟ್ಟದಲ್ಲಿ ಈ ಕೆಲಸ ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಟ್ಟಿತು. ತಿಂಗಳಿಗೆ 40,000 ದಿಂದ 50,000 ರೂಪಾಯಿಗಳವರೆಗೆ ಸಂಪಾದನೆ ಮಾಡುತ್ತಾ, ತಮ್ಮ ಓದಿಗೆ ಬೇಕಾದ ಸಮಯವನ್ನು ಹೊಂದಿಸಿಕೊಳ್ಳುತ್ತಿದ್ದರು. ಬೇರೆ ಕಟ್ಟುನಿಟ್ಟಾದ ಕೆಲಸಗಳಿಗೆ ಹೋಲಿಸಿದರೆ, ಇಲ್ಲಿ ಸಿಗುತ್ತಿದ್ದ ಸಮಯದ ಹೊಂದಾಣಿಕೆ ಸುರಾಜ್ ಅವರಿಗೆ ಇಡೀ ದಿನದ ವೇಳಾಪಟ್ಟಿಯನ್ನು ತಾವೇ ರೂಪಿಸಿಕೊಳ್ಳಲು ಸ್ವಾತಂತ್ರ್ಯ ನೀಡಿತು. ಅಷ್ಟೇ ಅಲ್ಲ, ಡೆಲಿವರಿಗಳ ನಡುವೆ ಸಿಗುತ್ತಿದ್ದ ಬಿಡುವಿನ ವೇಳೆಯಲ್ಲಿ ಅವರು ತಗೆದುಕೊಂಡ ಒಂದು ನಿರ್ಧಾರ, ಅವರ ಬದುಕಿನ ಹಾದಿಯನ್ನೇ ನಿಶ್ಯಬ್ದವಾಗಿ ಬದಲಿಸಿಬಿಟ್ಟಿತು.
ಕೈಲೊಂದು ಸ್ಮಾರ್ಟ್ ಫೋನ್, ಒಂದು ಲ್ಯಾಪ್ ಟಾಪ್ ಮತ್ತು ಸಾಧಿಸಲೇಬೇಕೆಂಬ ಅಚಲ ಛಲ -ಇಷ್ಟನ್ನೇ ಬಂಡವಾಳವಾಗಿಸಿಕೊಂಡು ಸುರಾಜ್ ಕೋಡಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿ ಜೆನ್ಸ್ (ಎಐ) ಅನ್ನು ಸ್ವತಃ ಕಲಿಯಲು ಪ್ರಾರಂಭಿಸಿದರು. ಅವರಿಗೆ ಯಾವುದೇ ಕ್ಲಾಸ್ ರೂಮ್ ಇರಲಿಲ್ಲ, ಮಾರ್ಗದರ್ಶನ ನೀಡಲು ಗುರುಗಳಿರಲಿಲ್ಲ, ಯಾವುದೇ ಔಪಚಾರಿಕ ತರಬೇತಿಯೂ ಇರಲಿಲ್ಲ. ಆನ್ ಲೈನ್ ಟ್ಯುಟೋರಿಯಲ್ ಗಳು, ಓಪನ್ ಸೋರ್ಸ್ ಫೋರಮ್ ಗಳು ಮತ್ತು ತಪ್ಪುಗಳಿಂದ ಕಲಿಯುವ ನಿರಂತರ ಪ್ರಯತ್ನಗಳೇ ಅವರಿಗೆ ಶಿಕ್ಷಕರಾದವು. ಇಡೀ ನಗರವೇ ಮಲಗಿದ್ದಾಗ ಅವರು ಓದುತ್ತಿದ್ದರು; ಉಳಿದವರು ಶಿಫ್ಟ್ ಗಳ ನಡುವೆ ವಿಶ್ರಾಂತಿ ಪಡೆಯುತ್ತಿದ್ದಾಗ, ಇವರು ಕೋಡಿಂಗ್ ಅಭ್ಯಾಸ ಮಾಡುತ್ತಿದ್ದರು.
"ನಾನು ಸಂಪೂರ್ಣ ಸಮರ್ಪಣಾ ಭಾವದಿಂದ ಕಲಿಕೆಯನ್ನು ಮುಂದುವರಿಸಿದರೆ, ಸ್ವಂತವಾಗಿ ಏನನ್ನಾದರೂ ಆರಂಭಿಸಿ ನನ್ನ ಬದುಕನ್ನು ನಾನೇ ಬದಲಾಯಿಸಿಕೊಳ್ಳಬಲ್ಲೆ ಎಂಬ ಬಲವಾದ ನಂಬಿಕೆ ನನಗಿತ್ತು" ಎನ್ನುತ್ತಾರೆ ಸುರಾಜ್.
ಅವರಲ್ಲಿದ್ದ ಆ ಒಂದು ಅಚಲವಾದ ನಂಬಿಕೆಯೇ ಇಂದು ಅವರನ್ನು ಈ ಯಶಸ್ಸಿನ ಶಿಖರಕ್ಕೆ ಕರೆದೊಯ್ದಿದೆ.
ಇಂದು ಸುರಾಜ್ ಬಿಸ್ವಾಸ್ ಅವರು ಅಸೆಸ್ಲಿ ಎಂಬ ಸ್ಟಾರ್ಟ್ ಅಪ್ ಕಂಪನಿಯ ಸಂಸ್ಥಾಪಕರು. ಇದು ನೈಜ-ಸಮಯದ ಮಾರ್ಗದರ್ಶನ ನೀಡುವ, ನಿರ್ಧಾರ ಕೈಗೊಳ್ಳುವಿಕೆಯನ್ನು ಉತ್ತಮಪಡಿಸುವ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ವೈಯಕ್ತಿಕೀಕರಿಸಿದ ಟೂಲ್ ಗಳನ್ನು ಅಭಿವೃದ್ಧಿಪಡಿಸುವ ಒಂದು ಪ್ರಮುಖ ಎಐ ಸ್ಟಾರ್ಟ್ ಅಪ್ ಆಗಿದೆ. ಒಂದು ಮಹತ್ತರ ಮೈಲಿಗಲ್ಲಾಗಿರುವ, ಲಕ್ಷಾಂತರ ಜಾಗತಿಕ ಕಂಪನಿಗಳಿರುವ ಎಫ್6ಎಸ್ ವೇದಿಕೆಯಲ್ಲಿ ಅಸೆಸ್ಲಿ ಅಗ್ರ ಎರಡು ಎಐ ಸ್ಟಾರ್ಟ್ ಅಪ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿ.
ಸುರಾಜ್ ಅವರಿಗೆ ಈ ಸಾಧನೆ ಕೇವಲ ವೃತ್ತಿಪರ ಯಶಸ್ಸಷ್ಟೇ ಅಲ್ಲ, ಇದು ಅವರ ವೈಯಕ್ತಿಕ ಬದುಕಿನ ಗೆಲುವಾಗಿದೆ. ಕಷ್ಟಕಾಲದಲ್ಲಿ ಸಿಗುವ ಗಳಿಕೆಯ ಅವಕಾಶಗಳು, ಸಮಯದ ಹೊಂದಾಣಿಕೆ ಮತ್ತು ಡಿಜಿಟಲ್ ಕಲಿಕೆಯ ಹಾದಿ ಒಂದಾದಾಗ, ಒಬ್ಬ ವ್ಯಕ್ತಿ ಹೇಗೆ ಸಂಪೂರ್ಣ ಹೊಸ ಭವಿಷ್ಯ ವನ್ನೇ ಸೃಷ್ಟಿಸಿಕೊಳ್ಳಬಹುದು ಎಂಬುದಕ್ಕೆ ಇವರೇ ಅತ್ಯುತ್ತಮ ಉದಾಹರಣೆ.
ಪ್ರತಿಭೆಗೆ ಕೊರತೆಯಿಲ್ಲದ ಆದರೆ ಅವಕಾಶಗಳಿಗಾಗಿ ಕಾಯುವ ಯುವಕರೇ ಹೆಚ್ಚಿರುವ ನಮ್ಮ ದೇಶದಲ್ಲಿ, ಸುರಾಜ್ ಬಿಸ್ವಾಸ್ ಅವರ ಈ ಪಯಣ ನಮಗೊಂದು ಅದ್ಭುತ ಪಾಠ. ಬದುಕಿನಲ್ಲಿ ಮುನ್ನಡೆಯಲು ನಮಗೆ ಬೇಕಿರುವುದು ಒಂದು ಉತ್ತಮ ಸಣ್ಣ ಅವಕಾಶ, ಕಲಿಯುವ ಸ್ವಾತಂತ್ರ್ಯ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ದೊಡ್ಡದಾಗಿ ಕನಸು ಕಾಣುವ ಧೈರ್ಯ ಮಾತ್ರ ಎಂಬುದನ್ನು ಅವರ ಜೀವನ ಸಾಬೀತುಪಡಿಸಿದೆ.