ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಸ್ತೆ ಬದಿ ಕಸ ಎಸೆದ ವಿಡಿಯೊ ವೈರಲ್‌; ಟ್ರೋಲ್‌ಗೆ ಅಂಜಿ 23 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Viral Littering Video: ರಸ್ತೆ ಕಸ ಎಸೆದಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಟ್ರೋಲ್‌ಗೆ ಆಹಾರವಾದ ನೋವಿನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಗೋವಾದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು 23 ವರ್ಷದ ಸ್ಯಾಮ್ಯುಯೆಲ್ ಡಿ ಬ್ರಗಾಂಕಾ ಎಂದು ಗುರುತಿಸಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಟ್ರೋಲ್‌ಗೆ ಅಂಜಿ 23 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Jun 6, 2026 10:37 PM

ಪಣಜಿ, ಜೂ. 6: ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ ದೊಡ್ಡದಿದೆ. ಆ ಸಾಲಿಗೆ ಇದೀಗ ಗೋವಾದ 23 ವರ್ಷದ ವಿದ್ಯಾರ್ಥಿಯೂ ಸೇರಿದ್ದಾನೆ (Viral Video). ರಸ್ತೆಗೆ ಕಸ ಎಸೆದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಟ್ರೋಲ್‌ಗೆ ಗುರಿಯಾದ ವಿದ್ಯಾರ್ಥಿ ಇದರಿಂದ ಮನನೊಂದು ಸಾವಿಗೆ ಶರಣಾಗಿದ್ದಾನೆ. ಈ ಯುವಕನ ಕಥೆ ಕೇಳಿ ಹಲವರ ಕಣ್ಣಂಚು ಒದ್ದೆಯಾಗಿದೆ. ಜತೆಗೆ ಅತಿಯಾದ ಸೋಷಿಯಲ್‌ ಮೀಡಿಯಾ ಬಳಕೆಯಿಂದಾಗುವ ದುರಂತದ ಇನ್ನೊಂದು ಮುಖದ ಬಗ್ಗೆಯೂ ಇದು ಬೆಳಕು ಚೆಲ್ಲಿದೆ.

ಸ್ಯಾಮ್ಯುಯೆಲ್ ಡಿ ಬ್ರಗಾಂಕಾ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಾಯಿ ಮತ್ತು ಇಬ್ಬರು ಸಹೋದರಿಯರ ಏಕೈಕ ಆಸರೆಯಾಗಿದ್ದ ಈತ ಜೀವ ಕಳೆದುಕೊಂಡಿರುವುದರಿಂದ ಕುಟುಂಬ ಈಗ ಕಂಗಾಲಾಗಿದೆ. ಗೋವಾದ ಮಾಪುಸಾದಲ್ಲಿ ಈ ಘಟನೆ ನಡೆದಿದೆ. ಸ್ಯಾಮ್ಯುಯೆಲ್ ಇತ್ತೀಚೆಗಷ್ಟೆ 2ನೇ ವರ್ಷದ ಪದವಿ ಮುಗಿಸಿದ್ದ.

ವೈರಲ್‌ ವಿಡಿಯೊ:



ಘಟನೆ ವಿವರ

ಮಾಪುಸಾದಲ್ಲಿ ತಾಯಿ ಮತ್ತು ಸಹೋದರಿಯರೊಂದಿಗೆ ವಾಸಿಸುತ್ತಿದ್ದ ಸ್ಯಾಮ್ಯುಯೆಲ್ ಇತ್ತೀಚೆಗೆ ರಸ್ತೆ ಬದಿ ಕಸ ಎಸೆದಿದ್ದ. ಈ ಘಟನೆಯನ್ನು ಯಾರೋ ಚಿತ್ರೀಕರಸಿ ವಿಡಿಯೊ ಸೋಷಿಯಲ್‌ಯಲ್ಲಿ ಹರಿಯಬಿಟ್ಟಿದ್ದರು. ಇದು ಭಾರಿ ವೈರಲ್‌ ಆಗಿತ್ತು. ಬಳಿಕ ಪೊಲೀಸರು ಆತನ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

ಪ್ರಶ್ನೆಪತ್ರಿಕೆ ಸೋರಿಕೆಯಿಂದ ಖಿನ್ನತೆ: ಮಧ್ಯಪ್ರದೇಶದಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ

ಉತ್ತರ ಗೋವಾದ ರಸ್ತೆ ಬದಿ ಸ್ಯಾಮ್ಯುಯೆಲ್ ಕಸ ಎಸೆದಿರುವ ವಿಡಿಯೊವನ್ನು ಹಲವರು ಟ್ರೋಲ್‌ ಮಾಡಿದ್ದಲ್ಲದೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆತನಿಗೆ ನೋಟಿಸ್‌ ಕೂಡ ಜಾರಿ ಮಾಡಿದ್ದರು. ಇದು ಆತನನ್ನು ಮತ್ತಷ್ಟು ಕಳವಳಕ್ಕೀಡು ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ಆತ ತನಿಖೆಗೆ ಸಹಕಾರವನ್ನೂ ನೀಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳು ಹೇಳಿದ್ದೇನು?

ಘಟನೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ, ʼʼಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆಗಿ ಟ್ರೋಲ್‌ಗೆ ತುತ್ತಾದ ಬಳಿಕ ಸ್ಯಾಮ್ಯುಯೆಲ್ ತೀವ್ರವಾಗಿ ನೊಂದಿದ್ದ. ಹೀಗಾಗಿ ಮನೆಯಲ್ಲಿದ್ದ ಲೈಸನ್ಸ್‌ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಘಟನೆ ನಡೆದ ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಾಗ್ಯೂ ವೈರಲ್‌ ವಿಡಿಯೊಗೂ ಆತನ ಸಾವಿಗೂ ನೇರ ಸಂಬಂಧವಿದೆಯೇ ಎನ್ನುವುದನು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಗಳ ಸುರಕ್ಷತೆಗಾಗಿ ಪತ್ರ ಬರೆದ ಅಪ್ಪ; ಆ ಸಂದೇಶದಲ್ಲಿ ಏನಿದೆ?

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸ್ಯಾಮ್ಯುಯೆಲ್ ಮನೆಯವರು ಘಟನೆ ಬಗ್ಗೆ ಮಾತನಾಡಿ ವಿಡಿಯೊ ವೈರಲ್‌ ಅದ ಬಳಿಕ ಆತ ಬಹಳಷ್ಟು ನೊಂದಿದ್ದ ಎಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅನೇಕರು ಬಾಯಿಗೆ ಬಂದಂತೆ ಕಮೆಂಟ್‌ ಹಾಕುತ್ತಿರುವುದರಿಂದ ಆಘಾತಕ್ಕೊಳಗಾಗಿದ್ದ. ಕೆಲವು ದಿನಗಳಿಂದ ಖನ್ನತೆಗೆ ಜಾರಿದ್ದ. ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.