ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರಾಖಂಡದ ಬಳಿಕ ಗುಜರಾತ್‌ನಲ್ಲಿಯೂ ಜಾರಿ ಬಂತು ಏಕರೂಪ ನಾಗರಿಕ ಸಂಹಿತೆ; ಮಸೂದೆ ಅಂಗೀಕರಿಸಿದ ವಿಧಾನ ಸಭೆ

ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಲು ಗುಜರಾತ್ ವಿಧಾನ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಲಾಯಿತು. ದೇಶದಲ್ಲಿ ಈ ಮಸೂದೆ ಅಂಗೀಕರಿಸಿದ ಎರಡನೇ ರಾಜ್ಯವಾಗಿ ಈಗ ಗುಜರಾತ್ ಗುರುತಿಸಿಕೊಂಡಿದೆ. 2024ರಲ್ಲಿ ಉತ್ತರಾಖಂಡದ ಈ ಮಸೂದೆಯನ್ನು ಮೊದಲು ಅಂಗೀಕಾರ ಮಾಡಿತ್ತು.

ಗುಜರಾತ್ ವಿಧಾನಸಭೆಯಲ್ಲಿ ಯುಸಿಸಿ ಮಸೂದೆ ಅಂಗೀಕಾರ

ಸಂಗ್ರಹ ಚಿತ್ರ -

ಗುಜರಾತ್: ಉತ್ತರಾಖಂಡದ (Uttarakhand) ಬಳಿಕ ಗುಜರಾತ್ (Gujarat) ಈಗ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು (Uniform Civil Code Bill) ಅಂಗೀಕಾರ ಮಾಡಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಲು ಗುಜರಾತ್ ವಿಧಾನ ಸಭೆಯಲ್ಲಿ (Gujarat Assembly) ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕರಿಸಲಾಗಿದೆ. ಇದಕ್ಕೂ ಮೊದಲು 2024ರ ಫೆಬ್ರವರಿ ತಿಂಗಳಲ್ಲಿ ಉತ್ತರಾಖಂಡ (Uttarakhand) ಈ ಮಸೂದೆಯನ್ನು ಮೊದಲು ಅಂಗೀಕಾರ ಮಾಡಿತ್ತು. ಈ ಮೂಲಕ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕರಿಸಿದ ಎರಡನೇ ರಾಜ್ಯವಾಗಿ ಗುಜರಾತ್ ಗುರುತಿಸಿಕೊಂಡಿದೆ.

ಜಾತಿ, ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಲು ಸಾಮಾನ್ಯ ಕಾನೂನು ಚೌಕಟ್ಟನ್ನು ಪ್ರಸ್ತಾಪಿಸುವ ಮಸೂದೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಅನುಮೋದಿಸದ ಕಾರಣ ಬಹುಮತದ ಧ್ವನಿ ಮತದೊಂದಿಗೆ ಗುಜರಾತ್ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಿದೆ.

Election in Kerala: 'ದೇವರ ನಾಡಿ’ನಲ್ಲೀಗ ರಂಗೇರಿರುವ ಚುನಾವಣಾ ಕಾವು

ವಿಧಾನಸಭೆಯಲ್ಲಿ ಮಂಗಳವಾರ ಏಳು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ಈ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಇದು ಸಮಾನತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಒಂದು ಹೆಗ್ಗುರುತು ಎಂದು ಹೇಳಿದರೆ ಕಾಂಗ್ರೆಸ್ ಇದನ್ನು ತೀವ್ರವಾಗಿ ವಿರೋಧಿಸಿದ್ದು, ಇದು ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಮುಸ್ಲಿಂ ವಿರೋಧಿ ಎಂದು ಅಭಿಪ್ರಾಯ ಪಟ್ಟಿದೆ.

ರಾಜ್ಯ ನೇಮಿಸಿದ ಸಮಿತಿಯು ಯುಸಿಸಿ ಅನುಷ್ಠಾನದ ಕುರಿತು ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ವಾರದ ಬಳಿಕ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ವು ಅದನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿದೆ.

ಈ ಮಸೂದೆಗೆ 'ಗುಜರಾತ್ ಏಕರೂಪ ನಾಗರಿಕ ಸಂಹಿತೆ 2026' ಎಂದು ಹೆಸರಿಸಲಾಗಿದೆ. ಇದು ಸಂಪೂರ್ಣ ರಾಜ್ಯ ಮತ್ತು ಪ್ರಾದೇಶಿಕ ಮಿತಿಯ ಹೊರಗೆ ವಾಸಿಸುವ ಗುಜರಾತ್ ನಿವಾಸಿಗಳಿಗೂ ಅನ್ವಯಿಸುತ್ತದೆ. ಸಂವಿಧಾನದ ಅಡಿಯಲ್ಲಿ ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸಲಾಗಿರುವ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸದಸ್ಯರಿಗೆ ಮತ್ತು ಕೆಲವು ಗುಂಪುಗಳ ಸದಸ್ಯರಿಗೆ ಈ ಸಂಹಿತೆ ಅನ್ವಯಿಸುವುದಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಮಸೂದೆಯಲ್ಲಿ ಉದ್ದೇಶ ಮತ್ತು ಕಾರಣಗಳನ್ನು ಉಲ್ಲೇಖಿಸಿ ಏಕರೂಪದ ಕಾನೂನು ಚೌಕಟ್ಟನ್ನು ರಚಿಸಲಾಗಿದ್ದು, ಇದರಲ್ಲಿ ಇತರ ವಿಷಯಗಳ ಜೊತೆಗೆ ಲಿವ್-ಇನ್ ಸಂಬಂಧಗಳ ನೋಂದಣಿ ಮತ್ತು ಔಪಚಾರಿಕ ಘೋಷಣೆಯ ಮೂಲಕ ಅದರ ಮುಕ್ತಾಯಕ್ಕೆ ಅವಕಾಶ ನೀಡಲಾಗಿದೆ. ಮಸೂದೆಯು ದ್ವಿಪತ್ನಿತ್ವವನ್ನು ನಿಷೇಧಿಸಿದೆ.

ಮಸೂದೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಏಕೀಕೃತ ಮತ್ತು ಅವಿಭಜಿತ ರಾಷ್ಟ್ರಕ್ಕೆ ಸಾಮಾನ್ಯ ಕಾನೂನು ಚೌಕಟ್ಟು ಅಗತ್ಯವಾಗಿದೆ. ಅದು ನಮ್ಮ ವೈದಿಕ ಜ್ಞಾನವನ್ನು ಪ್ರತಿಬಿಂಬಿಸುತ್ತದೆ. ಸತ್ಯವು ಒಂದೇ ಆಗಿದ್ದು, ಧರ್ಮಗಳು ಹಲವಿದ್ದರೂ ಕೂಡ ನ್ಯಾಯ ಒಂದೇ ಆಗಿರಬೇಕು ಎಂದು ತಿಳಿಸಿದರು.

ಮಸೂದೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ಶಾಸಕ ಶೈಲೇಶ್ ಪರ್ಮಾರ್, 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಹೀಗಾಗಿ ವಿಧಾನಸಭೆಯ ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಭಾರತದ ಈ ನಗರ ವಿಶ್ವದಲ್ಲೇ ಅತ್ಯಂತ ಕಲುಷಿತ ಪ್ರದೇಶ! IQAir ಬಿಡುಗಡೆ ಮಾಡಿದ ವರದಿಯಲ್ಲಿ ಯಾವ್ಯಾವ ದೇಶಗಳಿವೆ?

ಮತ್ತೊಬ್ಬ ಹಿರಿಯ ಕಾಂಗ್ರೆಸ್ ಶಾಸಕ ಅಮಿತ್ ಚಾವ್ಡಾ ಮಾತನಾಡಿ, ಸಂವಿಧಾನದ 14 ನೇ ವಿಧಿಯು ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನುಗಳ ಸಮಾನ ರಕ್ಷಣೆಯನ್ನು ಎಲ್ಲಾ ವ್ಯಕ್ತಿಗಳಿಗೆ ಖಾತರಿಪಡಿಸುತ್ತದೆ. ಈ ಮಸೂದೆಯು ಈ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.