ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮರುಮತದಾನ: ದುಪ್ಪಟ್ಟು ಭದ್ರತೆ, ಸ್ಪರ್ಧೆಯಿಂದ ಹಿಂದೆ ಸರಿದ ಟಿಎಂಸಿ ಅಭ್ಯರ್ಥಿ

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗಂಭೀರ ಅಕ್ರಮಗಳು ಪತ್ತೆಯಾಗಿದ್ದರಿಂದ 60 ಬೂತ್‌ಗಳಲ್ಲಿ ಮರುಮತದಾನ ನಡೆಯುತ್ತಿದೆ. ಈ ಬಾರಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಭದ್ರತೆ ಒದಗಿಸಿದ್ದು, ಪ್ರತಿ ಬೂತ್‌ಗೆ ಹೆಚ್ಚುವರಿ ಕೇಂದ್ರ ಪಡೆ, ವೆಬ್‌ಕ್ಯಾಮ್ ಹಾಗೂ ಡ್ರೋನ್ ನಿಗಾವನ್ನು ವ್ಯವಸ್ಥೆ ಮಾಡಲಾಗಿದೆ. ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳ: 60 ಬೂತ್‌ಗಳಲ್ಲಿ ಮತ್ತೆ ಮತದಾನ

ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಮರು ಮತದಾನ -

Profile
Sushmitha Jain May 21, 2026 1:27 PM

ಕೋಲ್ಕತ್ತಾ: ಕಳೆದ ಏಪ್ರಿಲ್ 29 ರಂದು ಮತದಾನ ನಡೆದಿದ್ದ ಪಶ್ಚಿಮ ಬಂಗಾಳ (West Bengal)ದ ಫಾಲ್ಟಾ (Falta) ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ವಿವಿಧ ಅಕ್ರಮಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದ್ದು, ಇಂದು (ಮೇ 21) ಅಲ್ಲಿ ಕಟ್ಟುನಿಟ್ಟಿನ ಮರುಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರವನ್ನು ಬಿಗಿ ಭದ್ರತೆಯ ವಲಯವನ್ನಾಗಿ ಮಾರ್ಪಡಿಸಲಾಗಿದೆ.

ಚುನಾವಣಾ ಆಯೋಗವು ಈ ಬಾರಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಹಿಂದೆ ನಡೆದ ಮತದಾನದ ವೇಳೆ ಪ್ರತಿ ಬೂತ್‌ನಲ್ಲಿ ಕೇವಲ ನಾಲ್ಕು ಮಂದಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಇಂದು ನಡೆಯುತ್ತಿರುವ ಮರುಮತದಾನದಲ್ಲಿ ಪ್ರತಿ ಬೂತ್‌ಗೆ ಎಂಟು ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 285 ಮತಗಟ್ಟೆಗಳ ರಕ್ಷಣೆಗಾಗಿ ಸುಮಾರು 35 ಕಂಪನಿ ಕೇಂದ್ರ ಪಡೆಗಳು ಹಾಗೂ ಪರಿಸ್ಥಿತಿಯನ್ನು ತ್ವರಿತವಾಗಿ ನಿಭಾಯಿಸಲು 30 ಕ್ವಿಕ್ ರೆಸ್ಪಾನ್ಸ್ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ. ಪ್ರತಿ ಮತಗಟ್ಟೆಯ ಒಳಗೆ ಮತ್ತು ಹೊರಗೆ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಡ್ರೋನ್ ಕಣ್ಗಾವಲಿನ ಮೂಲಕ ಇಡೀ ಪ್ರಕ್ರಿಯೆಯ ನೇರ ಪ್ರಸಾರವನ್ನು ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಇದರ ನಡುವೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಅನಿರೀಕ್ಷಿತವಾಗಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಹೇಳಿರುವುದೇ ತಾವು ಹಿಂದೆ ಸರಿಯಲು ಕಾರಣ ಎಂದು ಖಾನ್ ತಿಳಿಸಿದ್ದಾರೆ. ಆದರೆ ಇದನ್ನು ಲೇವಡಿ ಮಾಡಿರುವ ಸಿಎಂ ಸುವೇಂದು ಅಧಿಕಾರಿ, "ಅವರಿಗೆ ಪೋಲಿಂಗ್ ಏಜೆಂಟ್ ಕೂಡ ಸಿಗದ ಕಾರಣ ಹೆದರಿ ಓಡಿಹೋಗಿದ್ದಾರೆ" ಎಂದು ಕಿಡಿಕಾರಿದ್ದಾರೆ. ಕ್ಷೇತ್ರಕ್ಕೆ ಉದ್ಯೋಗ ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆ ನೀಡಿದ್ದಾರೆ.

ʼʼಹಸುಗಳ ಬರ್ತ್‌ ಸರ್ಟಿಫಿಕೆಟ್‌ ತೋರಿಸಿʼʼ: ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿಯಿಂದ ಹೊಸ ಬೇಡಿಕೆ; ಟಿಎಂಸಿ ಹೇಳಿದ್ದೇನು?

ಬಿಜೆಪಿ ಅಭ್ಯರ್ಥಿ ದೇವಾಂಶು ಪಾಂಡಾ ಅವರು, ಕಳೆದ ಬಾರಿ ಹಲವು ಬೂತ್‌ಗಳಲ್ಲಿ ಬಿಜೆಪಿ ಚಿಹ್ನೆಯ ಮೇಲೆ ಸೆಲೋಟೇಪ್ ಅಂಟಿಸಿ ಅಕ್ರಮ ಎಸಗಲಾಗಿತ್ತು ಎಂದು ಆರೋಪಿಸಿದ್ದು, ಈ ಬಾರಿ ಬಿಜೆಪಿ 1 ಲಕ್ಷಕ್ಕೂ ಅಧಿಕ ಮತಗಳ ಬೃಹತ್ ಅಂತರದಿಂದ ಗೆಲ್ಲಲಿದೆ ಎಂದು ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮರುಮತದಾನಕ್ಕೆ ಕಾರಣ

ವಿಶೇಷ ವೀಕ್ಷಕ ಸುಜೀತ್ ಮಿಶ್ರಾ ನೀಡಿದ ವರದಿಯ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಲವು ಬೂತ್‌ಗಳಲ್ಲಿ ಗಂಟೆಗಟ್ಟಲೆ ಫುಟೇಜ್ ನಾಪತ್ತೆಯಾಗಿರುವುದು ಮತ್ತು ಒಂದೇ ವ್ಯಕ್ತಿ ಹಲವು ಬಾರಿ ಮತ ಚಲಾಯಿಸಿರುವುದು ಪತ್ತೆಯಾಗಿತ್ತು. ಈ ಗಂಭೀರ ಆಕ್ರಮಗಳ ಹಿನ್ನೆಲೆಯಲ್ಲಿ ಒಟ್ಟು ೬೦ ಬೂತ್‌ಗಳಲ್ಲಿ ಚುನಾವಣೆ ಸಂಪೂರ್ಣ ಕಲುಷಿತಗೊಂಡಿದ್ದರಿಂದ ಆಯೋಗವು ಮರುಮತದಾನಕ್ಕೆ ಆದೇಶಿಸಿದೆ. ಜನಾಂಗೀಯ ಹಕ್ಕುಗಳನ್ನು ರಕ್ಷಿಸಲು ಮತ್ತು ಮುಕ್ತ ಮತದಾನಕ್ಕೆ ಮುನ್ನಡೆ ನೀಡಲು ಈ ಕ್ರಮ ಅನಿವಾರ್ಯವಾಗಿತ್ತು.