ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲೇ ಕೈ ಪಡೆಗೆ ಮುಖಭಂಗ; ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 251 ಸ್ಥಾನಗಳ ಪೈಕಿ 190ರಲ್ಲಿ ಬಿಜೆಪಿಗೆ ಭರ್ಜರಿ ಜಯ
Himachal Pradesh Zila Parishad Elections: ಹಿಮಾಚಲ ಪ್ರದೇಶದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 251 ಸ್ಥಾನಗಳ ಪೈಕಿ ಬಿಜೆಪಿಯು 190ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ತವರು ಜಿಲ್ಲೆ ಹಮೀರ್‌ಪುರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು, ಪಕ್ಷಕ್ಕೆ ಆಘಾತ ಮೂಡಿಸಿದೆ ಎಂದು ಬಿಜೆಪಿ ಹೇಳಿದೆ.
ಸಾಂದರ್ಭಿಕ ಚಿತ್ರ -
ಶಿಮ್ಲಾ, ಜೂ. 2: ವಿಧಾನಸಭೆ ಚುನಾವಣೆಗಳು ಮಾತ್ರವಲ್ಲದೆ ಜಿಲ್ಲಾ ಪರಿಷತ್ ಚುನಾವಣೆಯಲ್ಲೂ (Zila Parishad Elections) ಬಿಜೆಪಿ ಕಮಾಲ್ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವಿರುವ ಹಿಮಾಚಲ ಪ್ರದೇಶದ (Himachal Pradesh) ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 251 ಸ್ಥಾನಗಳ ಪೈಕಿ ಬಿಜೆಪಿಯು 190ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಈಗಾಗಲೇ ರಾಜ್ಯದ ನಾಲ್ಕು ಪುರಸಭೆ ನಿಗಮಗಳ ಪೈಕಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಭರ್ಜರಿ ಜಯ ಸಿಕ್ಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಮಲ ಕಮಾಲ್ ಮಾಡುತ್ತಿರುವ ಸೂಚನೆ ಸಿಕ್ಕಿದೆ.
ಮುಖ್ಯಮಂತ್ರಿ ಸುಖುಗೆ ತವರು ಜಿಲ್ಲೆಯಲ್ಲೇ ಆಘಾತ
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ತವರು ಜಿಲ್ಲೆ ಹಮೀರ್‌ಪುರದಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು, ಪಕ್ಷಕ್ಕೆ ಆಘಾತ ಮೂಡಿಸಿದೆ ಎಂದು ಬಿಜೆಪಿ ಹೇಳಿದೆ. ಈಗಾಗಲೇ ನಡೆದಿರುವ ಮಂಡಿ, ಸೋಲನ್ ಮತ್ತು ಧರ್ಮಶಾಲಾ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್ ಕೇವಲ ಪಾಲಂಪುರ ಮಹಾನಗರ ಪಾಲಿಕೆಯನ್ನು ಮಾತ್ರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.
ಇತ್ತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಲವು ಜಿಲ್ಲೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ ಎಂದು ಪಕ್ಷ ಹೇಳಿದೆ. ಇದನ್ನು ವಿರೋಧಿಸಿದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ವಿನಯ್ ಕುಮಾರ್, ʼʼನಮ್ಮ ಬೆಂಬಲಿತ ಅಭ್ಯರ್ಥಿಗಳು ಪಂಚಾಯತ್ ಮಟ್ಟದಲ್ಲಿ ಐತಿಹಾಸಿಕ ಯಶಸ್ಸು ಸಾಧಿಸಿದ್ದಾರೆ. ಬಿಜೆಪಿ ಸುಳ್ಳು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುತ್ತಿದೆʼʼ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ದಿನಾಂಕ ಘೋಷಣೆ; ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್
ಹಿಮಾಚಲ ಪ್ರದೇಶದಲ್ಲಿ ಮೇ 17ರಂದು ನಗರಸಭೆ ಮತ್ತು ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು. ಮೇ 26, 28 ಮತ್ತು 30ರಂದು ಮೂರು ಹಂತಗಳಲ್ಲಿ ಗ್ರಾಮ ಪಂಚಾಯತ್ ಪ್ರಧಾನ್, ಉಪಪ್ರಧಾನ್, ಪಂಚಾಯತ್ ಸಮಿತಿ ಹಾಗೂ ಜಿಲ್ಲಾ ಪರಿಷತ್ ಸದಸ್ಯರ ಸ್ಥಾನಗಳಿಗೆ ಮತದಾನ ಆಯೋಜಿಸಲಾಗಿತ್ತು.
ಕರ್ನಾಟಕದ 4 ಸೇರಿ 24 ರಾಜ್ಯಸಭೆ ಸ್ಥಾನಗಳಿಗೆ ಜೂ. 18ರಂದು ಚುನಾವಣೆ
ಚುನಾವಣಾ ಆಯೋಗ 24 ರಾಜ್ಯಸಭಾ ಸ್ಥಾನಗಳ ಚುನಾವಣೆ ದಿನಾಂಕವನ್ನು ಘೋಷಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಆಯೋಗ, 10 ರಾಜ್ಯಗಳಲ್ಲಿ ತೆರವಾಗಲಿರುವ 24 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಜೂನ್ 21ರಿಂದ ಜುಲೈ 19ರವರೆಗೆ ವಿವಿಧ ರಾಜ್ಯಗಳ ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. ಆಂಧ್ರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದ ತಲಾ 4 ಸ್ಥಾನ, ಮಧ್ಯಪ್ರದೇಶ ರಾಜಸ್ಥಾನದ ತಲಾ ಮೂರು ಸ್ಥಾನ ಮತ್ತು ಜಾರ್ಖಂಡ್ನ ಎರಡು ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ತಲಾ ಒಂದು ಸ್ಥಾನಗಳು ತೆರವಾಗಲಿವೆ.