ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ; ಏನಿದರ ಲಾಭ?
India-EU FTA: ಭಾರತ ಮತ್ತು ಯುರೋಪಿಯನ್ ಒಕ್ಕೂಟ ಇಂದು ಐತಿಹಾಸಿಕ, ಮೆಗಾ ಮುಕ್ತ-ವ್ಯಾಪಾರ ಒಪ್ಪಂದವನ್ನು (FTA) ಘೋಷಿಸುವ ಸಾಧ್ಯತೆಯಿದೆ. ಈ ಒಪ್ಪಂದವನ್ನು ಭಾರತದ ಆರ್ಥಿಕತೆಗೆ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ FTA ಗುಣಾತ್ಮಕ ಬದಲಾವಣೆಯನ್ನು ತರುವ ನಿರೀಕ್ಷೆಯಿದೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಇಂದು ಐತಿಹಾಸಿಕ, ಮೆಗಾ ಮುಕ್ತ-ವ್ಯಾಪಾರ ಒಪ್ಪಂದವನ್ನು (FTA) ಘೋಷಿಸುವ ಸಾಧ್ಯತೆಯಿದೆ. ಈ ಒಪ್ಪಂದವನ್ನು ಭಾರತದ ಆರ್ಥಿಕತೆಗೆ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ FTA ಗುಣಾತ್ಮಕ ಬದಲಾವಣೆಯನ್ನು ತರುವ ನಿರೀಕ್ಷೆಯಿದೆ. ವ್ಯಾಪಾರ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಬದಲಾವಣೆ, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ನಿಯಮ ಆಧಾರಿತ ಜಾಗತಿಕ ಕ್ರಮವನ್ನು ಬಲಪಡಿಸುವ ವಿಚಾರವಾಗಿ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರನ್ನು ಶೃಂಗಸಭೆಯಲ್ಲಿ ಆತಿಥ್ಯ ವಹಿಸಲಿದ್ದಾರೆ. ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಅವರು ಕರ್ತವ್ಯ ಪಥದಲ್ಲಿ 77 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಒಪ್ಪಂದ ಜಾರಿಯಾದರೆ ಅದು ಭಾರತ ಮತ್ತು ಯುರೋಪ್‌ನ 200 ಕೋಟಿ ಜನರ ಜನಜೀವನ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಒಪ್ಪಂದ ಮೌಲ್ಯ ಜಗತ್ತಿನ ಒಟ್ಟು ಜಿಡಿಪಿಯ ಶೇ.25ರಷ್ಟು ಇರುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ, ಯುರೋಪಿನಿಂದ ಆಮದಾಗುವ ಕಾರುಗಳ ಮೇಲಿನ ತೆರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ.40ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. ಇದಲ್ಲದೆ, ಯುರೋಪ್‌ನ ಇನ್ನೂ ಹಲವು ವಸ್ತುಗಳು ಅಗ್ಗವಾಗಲಿವೆ.
ಯುರೋಪಿನಿಂದ ಆಮದಾಗುವ ಪೋಕ್ಸ್‌ವ್ಯಾಗನ್, ರೆನಾಲ್ಟ್, ಮರ್ಸಿಡಿಸ್ ಬೆನ್ಜ್, ಬಿಎಂಡಬ್ಲ್ಯು ಮತ್ತು ಸ್ಟೆಲ್ಲಾಂಟಿಸ್ ಕಾರುಗಳ ಮೇಲಿನ ತೆರಿಗೆ ಶೇ.40ಕ್ಕೆ ಇಳಿಯಲಿದೆ. ಸದ್ಯ ಇವುಗಳ ಮೇಲಿನ ತೆರಿಗೆ ಶೇ.70ರಿಂದ 110ರಷ್ಟಿದೆ. 16.28 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಶೇ.40ಕ್ಕೆ ಇಳಿಸಲಾಗುವುದು. ಮುಂದೆ ಈ ತೆರಿಗೆಯು ಹಂತ ಹಂತವಾಗಿ ಶೇ.10ರ ವರೆಗೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ಒಪ್ಪಂದದ ಕುರಿತು ಮಾತನಾಡಿದ, ಕೋಸ್ಟಾ, ಈ ಒಪ್ಪಂದವು ಭಾರತ ಮತ್ತು ಯುರೋಪಿಯನ್ ದೇಶಗಳಿಗೆ "ಉತ್ತಮ ಅವಕಾಶ" ಎಂದು ಒತ್ತಿ ಹೇಳಿದ್ದಾರೆ. ಈ ಒಪ್ಪಂದವು ಭದ್ರತೆ ಮತ್ತು ರಕ್ಷಣೆಗೆ ಮಾತ್ರವಲ್ಲದೆ ಆರ್ಥಿಕ ದೃಷ್ಟಿಕೋನದಿಂದಲೂ ಮುಖ್ಯವಾಗಿದೆ ಎಂದು ಹೇಳಿದರು. ಒಪ್ಪಂದವು ಸುರಕ್ಷಿತ ಸಾಗಣೆ ಪೂರೈಕೆ ಮಾರ್ಗಗಳನ್ನು ರಚಿಸಲು ಕಡಲ ಭದ್ರತಾ ಸಹಕಾರದ ಮೇಲೆ ಕೇಂದ್ರೀಕರಿಸಿದ್ದರೂ ಸಹ, ಭಾರತೀಯ ಕಂಪನಿಗಳು ಯುರೋಪಿಯನ್ ಮಾರುಕಟ್ಟೆಯನ್ನು ಪ್ರವೇಶಿಸಲು ಇದು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.