B S Shivanna Column: ಸಿದ್ದರಾಮಯ್ಯ ರಾಜಕೀಯ ಚಿಂತನೆಯ ಹೃದಯಭಾಗವೇ ಸಾಮಾಜಿಕ ನ್ಯಾಯ
ದೇವರಾಜ ಅರಸು ಅವರು ತಮ್ಮ ಕಾಲದಲ್ಲಿ ಹೊಸ ರಾಜಕೀಯ ಭಾಷೆಯನ್ನು ಕಟ್ಟಿ ಕೊಟ್ಟರು. ಸಿದ್ದರಾಮಯ್ಯ ಅವರು ಅದೇ ಭಾಷೆಯನ್ನು ಇಂದಿನ ಸವಾಲಿನ ಕಾಲಘಟ್ಟದಲ್ಲಿ ಜೀವಂತವಾಗಿಟ್ಟಿದ್ದಾರೆ. ಬಹುಧ್ರುವೀಯ ರಾಜಕಾರಣ, ತೀವ್ರ ಮಾಧ್ಯಮ ಗಮನ ಮತ್ತು ವೇಗದ ಸಾರ್ವಜನಿಕ ಅಭಿಪ್ರಾಯದ ನಡುವೆ ಸಹ ಮೌಲ್ಯಗಳನ್ನು ಹಿಡಿದು ಕೊಂಡು ನಡೆಯುವುದು ಸುಲಭದ ಕೆಲಸವಲ್ಲ
-
ಸಿದ್ದಹಸ್ತ
ಬಿ.ಎಸ್.ಶಿವಣ್ಣ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೆಲವೇ ನಾಯಕರು ತಮ್ಮ ಆಡಳಿತಾವಧಿ ಗಿಂತಲೂ ಹೆಚ್ಚಿನ ಅರ್ಥವನ್ನು ಸಮಾಜಕ್ಕೆ ನೀಡಿದ್ದಾರೆ. ದೇವರಾಜ ಅರಸು ಅವರು ಆ ಪಂಕ್ತಿಯಲ್ಲಿನ ಶಾಶ್ವತ ಹೆಸರು. ಅವರ ಆಡಳಿತವು ಕೇವಲ ಅಧಿಕಾರದ ನಿರ್ವಹಣೆಯಲ್ಲ, ಅದು ಸಾಮಾಜಿಕ ನ್ಯಾಯದ ಮಹಾ ಚಳವಳಿಯಾಗಿತ್ತು.
ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರನ್ನು ರಾಜಕೀಯದ ಕೇಂದ್ರವಾಹಿನಿಗೆ ತರುವ ಮೂಲಕ ಅವರು ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಿಸಿದರು. ಇದೀಗ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅರಸು ಅವರ ದಾಖಲೆಯನ್ನು ಮುರಿಯುವ ಹಂತಕ್ಕೆ ತಲುಪುತ್ತಿರುವ ಈ ಐತಿಹಾಸಿಕ ಕ್ಷಣದಲ್ಲಿ, ಕರ್ನಾಟಕದ ರಾಜಕೀಯ ಮತ್ತೊಮ್ಮೆ ಮೌಲ್ಯಾ ಧಾರಿತ ನಾಯಕತ್ವದ ಮಹತ್ವವನ್ನು ಸ್ಮರಿಸಿಕೊಳ್ಳುತ್ತಿದೆ.
ಸಿದ್ದರಾಮಯ್ಯ ಅವರ ರಾಜಕೀಯ ಬದುಕನ್ನು ಅವಲೋಕಿಸಿದರೆ, ಅವರು ಅಧಿಕಾರಕ್ಕಾಗಿ ರಾಜಕೀಯ ಮಾಡಿರುವ ನಾಯಕನಲ್ಲ; ಮೌಲ್ಯಗಳಿಗಾಗಿ ರಾಜಕೀಯವನ್ನು ಅರ್ಥ ಮಾಡಿ ಕೊಂಡ ನಾಯಕ. ಅವರ ರಾಜಕೀಯ ಚಿಂತನೆಯ ಹೃದಯಭಾಗದಲ್ಲಿರುವುದು ಸಾಮಾಜಿಕ ನ್ಯಾಯ, ‘ಅಹಿಂದ’ ಎಂಬ ಪರಿಕಲ್ಪನೆಯನ್ನು ಅವರು ಕೇವಲ ಚುನಾವಣಾ ಘೋಷಣೆಯಾಗಿ ಅಲ್ಲ, ಒಂದು ಸಾಮಾಜಿಕ-ರಾಜಕೀಯ ತತ್ವವಾಗಿ ರೂಪಿಸಿದರು.
ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಒಕ್ಕೂಟದ ಮೂಲಕ ಸಮಾನ ಅವಕಾಶಗಳ ಸಮಾಜ ನಿರ್ಮಾಣ ಮಾಡುವ ಕನಸು, ದೇವರಾಜ ಅರಸು ಅವರ ಸಾಮಾ ಜಿಕ ಕ್ರಾಂತಿಯ ಮುಂದುವರಿಕೆಯಂತೆ ಕಾಣುತ್ತದೆ.
ಇದನ್ನೂ ಓದಿ: Siddaramaiah Record: ಸಿದ್ದುಗೆ ಬಲ ತಂದ ಬೆಣ್ಣೆನಗರಿ
ದೇವರಾಜ ಅರಸು ಅವರು ತಮ್ಮ ಕಾಲದಲ್ಲಿ ಸಮಾಜದ ದಮನಿತ ವರ್ಗಗಳಿಗೆ ಗೌರವ, ಹಕ್ಕು ಮತ್ತು ಆತ್ಮವಿಶ್ವಾಸ ನೀಡಿದಂತೆ, ಸಿದ್ದರಾಮಯ್ಯ ಅವರು ಇಂದಿನ ಕಾಲಘಟ್ಟದಲ್ಲಿ ಅದೇ ವರ್ಗಗಳ ಬದುಕಿಗೆ ಭದ್ರತೆಯನ್ನು ಒದಗಿಸುವ ಆಡಳಿತ ಮಾದರಿಯನ್ನು ಕಟ್ಟಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಮುಂತಾದ ಯೋಜನೆಗಳು ಕೇವಲ ಸರ್ಕಾರಿ ಯೋಜನೆಗಳಲ್ಲ; ಅವು ರಾಜ್ಯವು ತನ್ನ ನಾಗರಿಕರ ಬಗ್ಗೆ ಹೊಂದಿರುವ ನೈತಿಕ ಹೊಣೆಗಾರಿಕೆಯ ಪ್ರತಿಬಿಂಬ. ಹಸಿವು, ಅಪೌಷ್ಟಿಕತೆ, ಶಿಕ್ಷಣದಿಂದ ವಂಚನೆ - ಇವು ಗಳನ್ನು ಸಾಮಾಜಿಕ ಅನ್ಯಾಯಗಳೆಂದು ಗುರುತಿಸಿ, ಅವುಗಳ ವಿರುದ್ಧ ರಾಜ್ಯವೇ ನಿಂತು ಹೋರಾಡಬೇಕು ಎಂಬ ದೃಷ್ಟಿಕೋನವೇ ಮೌಲ್ಯಾಧಾರಿತ ರಾಜಕಾರಣ.
ಸಿದ್ದರಾಮಯ್ಯ ಅವರ ಆಡಳಿತದ ಮತ್ತೊಂದು ಪ್ರಮುಖ ಲಕ್ಷಣ ಅವರ ಧರ್ಮನಿರಪೇಕ್ಷ ನಿಲುವು. ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಸಮಾನತೆ, ಸಹಬಾಳ್ವೆ ಮತ್ತು ಧರ್ಮನಿರಪೇಕ್ಷತೆಯ ಮೌಲ್ಯಗಳನ್ನು ಅವರು ರಾಜಕೀಯದ ಕೇಂದ್ರಬಿಂದುಗಾಗಿಟ್ಟಿದ್ದಾರೆ.
ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುವ ರಾಜಕಾರಣಕ್ಕೆ ವಿರುದ್ಧವಾಗಿ, ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣದ ಪರವಾಗಿ ಅವರು ನಿಂತಿ ದ್ದಾರೆ. ಇದು ಅವರನ್ನು ಸಮಕಾಲೀನ ರಾಜಕಾರಣದಲ್ಲಿ ವಿಭಿನ್ನವಾಗಿಸುವ ಅಂಶ.
ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುವ ಮತ್ತೊಂದು ಪ್ರಮುಖ ಸೇತುವೆ ಎಂದರೆ ಆಡಳಿತವನ್ನು ಜನಸಾಮಾನ್ಯರ ಬದುಕಿನೊಂದಿಗೆ ನೇರವಾಗಿ ಜೋಡಿಸುವ ದೃಷ್ಟಿ, ಅರಸು ಅವರು ಭೂಸುದಾರಣೆ ಮತ್ತು ಮೀಸಲಾತಿ ಮೂಲಕ ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ರಚನೆಯನ್ನು ಬದಲಿಸಿದರೆ, ಸಿದ್ದರಾಮಯ್ಯ ಅವರು ಕಲ್ಯಾಣರಾಜ್ಯ ಪರಿಕಲ್ಪನೆಯನ್ನು ಬಲಪಡಿಸುವ ಮೂಲಕ ಜನಸಾಮಾನ್ಯರ ದೈನಂದಿನ ಬದುಕಿಗೆ ಸರ್ಕಾರವನ್ನು ಹತ್ತಿರ ತಂದರು.
ಬಡವನ ಮನೆಗೆ ಸರ್ಕಾರ ತಲುಪಬೇಕು ಎಂಬ ಆಲೋಚನೆಯೇ ಇವರಿಬ್ಬರ ರಾಜ ಕಾರಣದ ಮೂಲಸಾರ. ಸಿದ್ದರಾಮಯ್ಯ ಅವರ ಆಡಳಿತಾವಧಿ ದೀರ್ಘವಾಗುತ್ತಿರುವುದು ಕೇವಲ ರಾಜಕೀಯ ಸಾಧನೆ ಅಲ್ಲ; ಅದು ಜನಸಾಮಾನ್ಯರ ನಂಬಿಕೆಯ ಪ್ರತಿಫಲ, ಮೌಲ್ಯಾಧಾರಿತ ರಾಜಕಾರಣ ಎಂದರೆ ತಕ್ಷಣದ ಲಾಭಕ್ಕಿಂತ ದೀರ್ಘಕಾಲೀನ ಸಾಮಾಜಿಕ ಹಿತವನ್ನು ಗಮನಿಸುವುದು.
ಈ ಅರ್ಥದಲ್ಲಿ, ಸಿದ್ದರಾಮಯ್ಯ ಅವರು ಜನಪರ ನೀತಿಗಳ ಮೂಲಕ ಸಮಾಜದ ಅಸಮಾನತೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಅವರು ಕೇವಲ ಮುಖ್ಯಮಂತ್ರಿ ಅಲ್ಲ, ಸಾಮಾಜಿಕ ನ್ಯಾಯದ ಧ್ವಜವಾಹಕರಾಗಿದ್ದಾರೆ.
ದೇವರಾಜ ಅರಸು ಅವರು ತಮ್ಮ ಕಾಲದಲ್ಲಿ ಹೊಸ ರಾಜಕೀಯ ಭಾಷೆಯನ್ನು ಕಟ್ಟಿ ಕೊಟ್ಟರು. ಸಿದ್ದರಾಮಯ್ಯ ಅವರು ಅದೇ ಭಾಷೆಯನ್ನು ಇಂದಿನ ಸವಾಲಿನ ಕಾಲಘಟ್ಟ ದಲ್ಲಿ ಜೀವಂತವಾಗಿಟ್ಟಿದ್ದಾರೆ. ಬಹುಧ್ರುವೀಯ ರಾಜಕಾರಣ, ತೀವ್ರ ಮಾಧ್ಯಮ ಗಮನ ಮತ್ತು ವೇಗದ ಸಾರ್ವಜನಿಕ ಅಭಿಪ್ರಾಯದ ನಡುವೆ ಸಹ ಮೌಲ್ಯಗಳನ್ನು ಹಿಡಿದು ಕೊಂಡು ನಡೆಯುವುದು ಸುಲಭದ ಕೆಲಸವಲ್ಲ. ಆದರೆ ಸಿದ್ದರಾಮಯ್ಯ ಅವರು ಆ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ.
ಇಂದು ಅವರು ದೇವರಾಜ ಅರಸು ಅವರ ಅಡಳಿತದ ದಾಖಲೆಯನ್ನು ಮುರಿಯುತ್ತಿರು ವುದು ಒಂದು ಸಂಖ್ಯಾತ್ಮಕ ಸಾಧನೆಯಷ್ಟೇ ಅಲ್ಲ; ಅದು ಒಂದು ತತ್ವದ ಗೆಲುವು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಗೌರವ ಎಂಬ ಮೌಲ್ಯಗಳು ರಾಜಕೀಯ ದಲ್ಲಿ ಇನ್ನೂ ಪ್ರಸ್ತುತವಾಗಿವೆ ಎಂಬುದಕ್ಕೆ ಇದು ಸಾಕ್ಷಿ.
ಅರಸು ಅವರು ಬಿತ್ತಿದ ಬೀಜ ಇಂದಿಗೂ ಫಲ ಕೊಡುತ್ತಿದೆ ಎಂಬುದನ್ನು ಸಿದ್ದರಾಮಯ್ಯ ಅವರ ರಾಜಕೀಯ ಜೀವನ ತೋರಿಸುತ್ತದೆ. ಅಂತಿಮವಾಗಿ, ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರ ರಾಜಕೀಯ ಪರಂಪರೆಯ ಮುಂದುವರಿದ ಅಧ್ಯಾಯವೆಂದು ಹೇಳಬಹುದು. ಅವರು ಆ ಪರಂಪರೆಯನ್ನು ನಕಲಿಸಿಲ್ಲ; ಕಾಲಕ್ಕೆ ತಕ್ಕಂತೆ ರೂಪಾಂತರ ಗೊಳಿಸಿದ್ದಾರೆ.
ಮೌಲ್ಯಗಳನ್ನು ಕೇಂದ್ರದಲ್ಲಿಟ್ಟುಕೊಂಡ ರಾಜಕಾರಣ ಇನ್ನೂ ಸಾಧ್ಯ, ಇನ್ನೂ ಅಗತ್ಯ ಎಂಬ ಸಂದೇಶವನ್ನು ಅವರು ಕರ್ನಾಟಕದ ರಾಜಕೀಯಕ್ಕೆ ನೀಡಿದ್ದಾರೆ. ಇದೇ ಅವರ ಅತಿದೊಡ್ಡ ಸಾಧನೆ ಮತ್ತು ಇದೇ ಕಾರಣಕ್ಕೆ ಅವರು ಮೌಲ್ಯಾಧಾರಿತ ರಾಜಕಾರಣದ ಜೀವಂತ ಪ್ರತಿನಿಧಿಯಾಗಿ ಇತಿಹಾಸದಲ್ಲಿ ಸ್ಥಾನಪಡೆಯುತ್ತಾರೆ. ಇದೆಲ್ಲದರ ಮಧ್ಯೆಯೂ ಸಿದ್ದರಾಮಯ್ಯ ಹಾಗೂ ಅರಸು ತುಲನೆ ಸರಿಯೇ ? ಅರಸು ಅವರಂಥಹ ಶಾಶ್ವತ ಯೋಜನೆ ಹಾಗೂ ರಾಜಕೀಯ ನಿಲುವುಗಳನ್ನು ಸಿದ್ದರಾಮಯ್ಯ ಪ್ರದರ್ಶಿಸಿದ್ದಾರೆಯೇ? ಎಂಬ ಪ್ರಶ್ನೆಗಳನ್ನೂ ಕೆಲವರು ಎತ್ತಿದ್ದಾರೆ.
ದೇವರಾಜ ಅರಸು ಅವರು ಉಳುವವನೇ ಹೊಲದೊಡೆಯ ಎಂಬ ನೀತಿಯನ್ನು ಜಾರಿಗೆ ತಂದರು. ಅದು ಬಡವರ ಪಾಲಿಗೆ ಶಾಶ್ವತ ಯೋಜನೆಯಾಯ್ತು. ಆದರೆ ಸಿದ್ದರಾಮಯ್ಯ ಆಡಳಿತದಲ್ಲಿ ಇಂಥ ಕಾರ್ಯಕ್ರಮಗಳು ಅನುಷ್ಠಾನ ಗೊಂಡಿವೆಯೇ? ಎಂಬ ದೊಡ್ಡ ಪ್ರಶ್ನೆ ಮುಂದಿದೆ.
ಆದರೆ ಅನ್ನಭಾಗ್ಯದಂಥ ಕಲ್ಯಾಣ ಯೋಜನೆಗಳು ಹಾಗೂ ಪಂಚ ಗ್ಯಾರಂಟಿಗಳು ಕೂಡಾ ಶಾಶ್ವತವಾದ ಯೋಜನೆಗಳಾಗಿವೆ. ಸಿದ್ದರಾಮಯ್ಯ ನವರು ಮೊದಲ ಅವಧಿಯ ಜಾರಿಗೆ ತಂದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾಯ್ದೆಯನ್ನು ಶಾಶ್ವತ ನಿರ್ಧಾರಗಳಲ್ಲ ಎಂದು ಬದಿಗೆ ಸರಿಸಲು ಸಾಧ್ಯವೇ? ಈ ಯೋಜನೆಯಿಂದಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯಲ್ಲಿ ಪಾಲು ಪಡೆಯಲು ಸಾಧ್ಯ ವಾಗಿದೆ. ಈ ಕಾರಣಕ್ಕಾಗಿ ಶೋಷಿತ ಸಮುದಾಯ ಶಾಶ್ವತವಾಗಿ ಸಿದ್ದರಾಮಯ್ಯ ಅವರನ್ನು ಸ್ಮರಿಸಿಕೊಳ್ಳಲೇಬೇಕು.
ಅರಸು ಹಾಗೂ ರಾಮಕೃಷ್ಣ ಹೆಗಡೆಯವರ ರೀತಿ ಸಿದ್ದರಾಮಯ್ಯ ಮೌಲ್ಯಾಧಾರಿತ ಪರಂಪರೆಯನ್ನು ಮುಂದುವರಿಸಲು ಹೊಸ ನಾಯಕತ್ವವನ್ನು ಸೃಷ್ಟಿಸಲಿಲ್ಲ ಎಂಬುದು ಇನ್ನೊಂದು ವಾದ. ಈ ಮಾತು ತಕ್ಕಮಟ್ಟಿಗೆ ನಿಜ ಎನಿಸಿದರೂ ರಾಜಕಾರಣದ ಕಾಲ ಘಟ್ಟವೂ ಕೂಡಾ ಮಹತ್ವ ಪಡೆದುಕೊಳ್ಳುತ್ತದೆ.
ಹೊಸ ಸಾಧ್ಯತೆಗಳನ್ನು ಸೃಷ್ಟಿಸುವ ಸಮಯದಲ್ಲಿ ಇಂಥ ಪ್ರಯೋಗಗಳು ಯಶಸ್ವಿ ಯಾಗುತ್ತವೆ. ಸಿದ್ದರಾಮಯ್ಯ ಈ ಹಾದಿಯಲ್ಲಿ ಮುನ್ನಡೆಯಬಹುದಿತ್ತು ಎನ್ನುವುದು ನಿಜವಾದರೂ ಅವರು ಆ ದಿಶೆಯಲ್ಲಿ ಹೆಜ್ಜೆ ಇಟ್ಟೇ ಇಲ್ಲ ಎಂದು ಸಾರಾಸಗಟಾಗಿ ಉಪೇಕ್ಷಿಸುವಂತೆಯೂ ಇಲ್ಲ.
ಸಿದ್ದರಾಮಯ್ಯನವರು ದೂರದೃಷ್ಟಿಯಿಂದ ಜಿಲ್ಲಾ ಪಂಚಾಯತ್, ನಗರ ಪಂಚಾಯತ್, ಪುರಸಭೆ, ನಗರಸಭೆಗಳಲ್ಲಿ ಅಹಿಂದ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಕೊಟ್ಟ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸರಕಾರಿ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿ ನೀಡಿದ ಅವರ ಕ್ರಮಗಳು ಐತಿಹಾಸಿಕವಾಗಿದೆ.