Jagannath Rath Yatra: ಭುವನೇಶ್ವರದ ಕಳಿಂಗ ಶ್ರೀವಾಣಿ ಕ್ಷೇತ್ರದಲ್ಲಿ ಅದ್ಧೂರಿಯಾಗಿ ನೆರವೇರಿದ ಜಗನ್ನಾಥ ರಥಯಾತ್ರೆ; ಸಾವಿರಾರು ಭಕ್ತರು ಭಾಗಿ
ಒಡಿಶಾದ ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಂಸ್ಥೆ ಕ್ಯಾಂಪಸ್‌ನಲ್ಲಿ ಪುರಿ ಜಗನ್ನಾಥ ದೇವಾಲಯದಂತೆಯೇ ಮಂದಿರವಿದೆ. ಅಲ್ಲಿನ ಮಾದರಿಯಂತೆ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ, ಜಗನ್ನಾಥ ರಥಯಾತ್ರೆ ನಡೆಸಲಾಗುತ್ತದೆ. ರಥಯಾತ್ರೆಯಲ್ಲಿ ವಿವಿಧೆಡೆಯಿಂಧ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಭುವನೇಶ್ವರದ ಕಳಿಂಗ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜಗನ್ನಾಥ ರಥಯಾತ್ರೆ ನಡೆಯಿತು. -
ಭುವನೇಶ್ವರ, ಜುಲೈ 16: ನಗರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (KISS) ಆವರಣದ ಶ್ರೀವಾಣಿ ಕ್ಷೇತ್ರದಲ್ಲಿ ಜಗನ್ನಾಥ ರಥಯಾತ್ರೆಯು (Jagannath Rath Yatra) ಗುರುವಾರ ಅಪಾರ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ನೆರವೇರಿತು. ಸಂಸ್ಥೆಯ ಬುಡಕಟ್ಟು ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಸಾವಿರಾರು ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ರಥಯಾತ್ರೆಯಲ್ಲಿ ಭಾಗಿಯಾಗಿ ಜಗನ್ನಾಥ, ಅಣ್ಣ ಬಲರಾಮ ಹಾಗೂ ಸಹೋದರಿ ಸುಭದ್ರಾ ದೇವಿಯ ಕೃಪೆಗೆ ಪಾತ್ರರಾದರು.
ಒಡಿಶಾದ ಪುಣ್ಯಕ್ಷೇತ್ರವಾಗಿರುವ ಪುರಿಯು ಶಂಕರಾಚಾರ್ಯರು ಸ್ಥಾಪಿಸಿದ ದೇಶದ ನಾಲ್ಕು ಪವಿತ್ರ ಚತುರ್ಧಾಮಗಳಲ್ಲಿ ಒಂದಾಗಿದ್ದು, ಇಲ್ಲಿ ಪ್ರತಿ ವರ್ಷ ವಿಶ್ವಪ್ರಸಿದ್ಧ ರಥಯಾತ್ರೆ ನಡೆಯುತ್ತದೆ. ಈ ರಥಯಾತ್ರೆಯು ಪ್ರಪಂಚದ ಅತ್ಯಂತ ಹಳೆಯ ಹಾಗೂ ದೊಡ್ಡ ಯಾತ್ರೆಯಾಗಿದೆ. ಆಷಾಢ ಮಾಸದಲ್ಲಿ ನಡೆಯುವ ಈ ಜಾತ್ರೆಯು ಕೋಟ್ಯಂತರ ಭಕ್ತರನ್ನು ಸೆಳೆಯುತ್ತದೆ.
ಪುರಿಯಲ್ಲಿ ನಡೆಯುವ ರೀತಿಯಲ್ಲೇ ಭುವನೇಶ್ವರದ ಕಳಿಂಗ ಶಿಕ್ಷಣ ಸಂಸ್ಥೆ ಆವರಣದಲ್ಲೂ ಪ್ರತೀ ವರ್ಷ ಸಂಭ್ರಮ ಸಡಗರದಿಂದ ಭವ್ಯವಾಗಿ ಜಗನ್ನಾಥ ರಥಯಾತ್ರೆ ಆಚರಿಸಲಾಗುತ್ತದೆ.
ಕ್ಯಾಂಪಸ್‌ನಲ್ಲಿದೆ ದೇವಾಲಯ
ಕಳಿಂಗ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪುರಿ ದೇವಾಲಯದಂತೆಯೇ ಜಗನ್ನಾಥ ಮಂದಿರವಿದೆ. ಮೂಲ ಕ್ಷೇತ್ರದಲ್ಲಿರುವಂತೆ ಇಲ್ಲೂ ಅನೇಕ ಚಿಕ್ಕ ಚಿಕ್ಕ ದೇವಸ್ಥಾನಗಳಿವೆ. ಪುರಿಯಲ್ಲಿ ನಡೆಯುವಂತೆಯೇ ಕ್ಯಾಂಪಸ್‌ನಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ತಪ್ಪದೇ ಅನುಸರಿಸಲಾಗುತ್ತದೆ.
ನಿಗದಿತ ಸಮಯದಂತೆ ಬೆಳಗ್ಗೆ ಮಂಗಳ ಆರತಿ, ಮೈಲಮ, ತಡಪಲಾಗಿ, ರೋಷ ಹೋಮ, ಮತ್ತು ಸೂರ್ಯ ಪೂಜೆಯಂತಹ ಧಾರ್ಮಿಕ ವಿಧಿ ವಿಧಾನಗಳು ಹಾಗೂ ರಥಗಳ ಸ್ಥಾಪನೆ ನೆರವೇರಿದವು. ಮಧ್ಯಾಹ್ನ ರಥಯಾತ್ರೆಗೂ ಮೊದಲು ಜಗನ್ನಾಥನ ಪ್ರಥಮ ಸೇವಕರಿಂದ 'ಛೇರಾ ಪಹನ್ರಾ' (ರಥದ ಮೇಲಿನ ಸ್ವಚ್ಛತೆ) ನಡೆಯಿತು. ಈ ಕಾರ್ಯಕ್ಕೆ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಂಸ್ಥಾಪಕರು ಮತ್ತು ಮಾಜಿ ಸಂಸದರಾದ ಡಾ. ಅಚ್ಯುತ ಸಮಂತ ಅವರು ಚಾಲನೆ ನೀಡಿದರು.
ರಥವೆಳೆದ ಸಾವಿರಾರು ಜನರು
ಸಂಜೆಯ ಹೊತ್ತಿಗೆ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ಮೂರು ಸುಂದರ ರಥಗಳನ್ನು ಸಾವಿರಾರು ಭಕ್ತರು ಎಳೆದು ಪುನೀತರಾದರು. ಮೂರು ರಥಗಳ ನಿರ್ಮಾಣಕ್ಕಾಗಿ ಶ್ರೀವಾಣಿ ಕ್ಷೇತ್ರ ದೇವಾಲಯ ಟ್ರಸ್ಟ್ 'ಬಿಂದಾನಿ' (ಮರಗೆಲಸಗಾರರು), 'ಮಹಾರಾಣಾ' (ಶಿಲ್ಪಿಗಳು) ಮತ್ತು 'ಚಿತ್ರಕಾರ'ರನ್ನು (ವರ್ಣಚಿತ್ರಕಾರರು) ನಿಯೋಜಿಸುತ್ತದೆ. ಕಳಿಂಗ ಸಂಸ್ಥೆಯ ರಥಯಾತ್ರೆಯ ವಿಶೇಷವೆಂದರೆ ದೇವಿ ಸುಭದ್ರೆಯ ರಥವನ್ನು ಮಹಿಳೆಯರೇ ಎಳೆಯುವುದು.
ಸಾಮಾನ್ಯವಾಗಿ ರಥೋತ್ಸವದಲ್ಲಿ ಉತ್ಸವಮೂರ್ತಿ ಇಡಲಾಗುತ್ತದೆ. ಆದರೆ ಕಳಿಂಗ ಸಂಸ್ಥೆ ಆವರಣದ ರಥೋತ್ಸವದಲ್ಲಿ ದೇವರ ಮುಖ್ಯ ಮೂರ್ತಿಯನ್ನೇ ಇರಿಸಲಾಗುತ್ತದೆ. ದೇವರೇ ಹೊರಗೆ ಬಂದ ನಂತರ ದೇವಸ್ಥಾನ ಮುಚ್ಚಲಾಗುತ್ತದೆ. ರಥ ಸಾಗುವ ಮಾರ್ಗದುದ್ದಕ್ಕೂ "ಜೈ ಜಗನ್ನಾಥ" ಘೋಷಣೆಗಳ ನಡುವೆ ಸಾಂಪ್ರದಾಯಿಕ ವಾದ್ಯ ತಂಡಗಳು, ಬುಡಕಟ್ಟು ನೃತ್ಯಗಳು, ಧಾರ್ಮಿಕ ಪಠಣ, ವಿವಿಧ ಕೌಶಲಗಳ ಪ್ರದರ್ಶನ ಗಮನಸೆಳೆಯಿತು.
ಗುಂಡಿಚಾ ದೇವಾಲಯದವರೆಗೆ ಸಾಗಿದ ರಥೋತ್ಸವ
ಪುರಿ ಕ್ಷೇತ್ರದಲ್ಲಿರುವಂತೆ ಕಳಿಂಗ ಸಂಸ್ಥೆಯಲ್ಲಿಯೂ ಗುಂಡಿಚಾ ದೇವಿ ದೇವಾಲಯವಿದೆ. ಅಲ್ಲಿಗೆ ಮೂರು ರಥಗಳು ಬಂದು ಸೇರುತ್ತವೆ. ರಥದಲ್ಲಿ ಒಂದು ದಿನ ಇರುವ ದೇವರುಗಳು ಮಾರನೇ ದಿನ ಗುಂಡಿಚಾ ದೇವಿ ದೇವಾಲಯ ಪ್ರವೇಶಿಸಿ ಅಲ್ಲಿಯೇ ಏಳು ದಿನ ಇರುತ್ತಾರೆ. ಒಂಬತ್ತು ದಿನಗಳ ಈ ಉತ್ಸವದ ಅವಧಿಯಲ್ಲಿ, ಪ್ರತಿದಿನ ಸಂಜೆ ಗುಂಡಿಚಾ ದೇವಾಲಯದ ಬಳಿ 'ಭಜನಾ ಸಮಾರೋಹ' ನಡೆಯುತ್ತದೆ. ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ದೇವಾಲಯಕ್ಕೆ ಆಗಮಿಸಿ, ತ್ರಿಮೂರ್ತಿಗಳ ದರ್ಶನ ಪಡೆದು ಧನ್ಯರಾಗುತ್ತಾರೆ.