ಮಹಾರಾಷ್ಟ್ರದಲ್ಲಿ ಮಿತಿ ಮೀರಿದ ಚಿರತೆ ಹಾವಳಿಯಿಂದ ಪಾರಾಗಲು ಗ್ರಾಮಸ್ಥರು ಮಾಡಿದ್ರು ಸೂಪರ್ ಐಡಿಯಾ; ಏನದು?
Viral News: ಮಹಾರಾಷ್ಟ್ರದಲ್ಲಿ ಚಿರತೆಯ ನಿರಂತರ ದಾಳಿಯಿಂದಾಗಿ ಅಲ್ಲಿನ ಜನರು ಹೈರಾಣಾಗಿದ್ದಾರೆ. ಇದಕ್ಕಾಗಿ ಪುಣೆಯ ಶಿರೂರಿನಲ್ಲಿರುವ ಪಿಂಪರ್‌ಖೇಡ್ ಗ್ರಾಮಸ್ಥರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮೊಳೆಗಳಿಂದ ಕೂಡಿದ ಕೊರಳಪಟ್ಟಿಗಳನ್ನು ಧರಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಚಿರತೆ ದಾಳಿ ತಪ್ಪಿಸಿಕೊಳ್ಳಲು ಮಹಾರಾಷ್ಟ್ರ ಗ್ರಾಮಸ್ಥರ ಹೊಸ ಪ್ಲ್ಯಾನ್ -
ಮಹಾರಾಷ್ಟ್ರ: ಕಾಡು ಮೃಗಗಳು ದಾಳಿ ಮಾಡಿದರೆ ಎಷ್ಟು ಭಯಾನಕವಾಗಿರುತ್ತದೆ ಎಂಬುದು ನಿಮಗೆಲ್ಲ ತಿಳಿದೆ ಇದೆ. ಪ್ರತಿವರ್ಷ ದೇಶದಲ್ಲಿ ಸಾಕಷ್ಟು ಎಷ್ಟೋ ಜನರು ಸಿಂಹ, ಹುಲಿ ಚಿರತೆಯ ದಾಳಿಗೆ ಪ್ರಾಣ ಕಳೆದು ಕೊಂಡ ವರು ಇದ್ದಾರೆ. ಅರಣ್ಯ ಸಮೀಪದ ಪ್ರದೇಶದಲ್ಲಿಯೇ ಮನೆ, ಹೊಲ ಇದ್ದವರಿಗೆ ನಿತ್ಯ ಹುಲಿ, ಚಿರತೆ ಸೇರಿ ಕಾಡು ಪ್ರಾಣಿಗಳ ಭಯ ಹೆಚ್ಚಾಗಿಯೇ ಇರುತ್ತದೆ. ಕಾಡು ಪ್ರಾಣಿಗಳು ಜನರಿಗೆ ತೊಂದರೆ ನೀಡದಿರಲು ಅರಣ್ಯ ಇಲಾಖೆ ವಿವಿಧ ಕ್ರಮ ಕೈಗೊಂಡರು ಕೂಡ ಕೆಲವೊಮ್ಮೆ ಕಾಡು ಬಿಟ್ಟು ನಾಡಿಗೆ ಬಂದು ಮನುಷ್ಯರನ್ನು ತಿಂದು ಬಿಡುತ್ತವೆ. ಇದೀಗ ಮಹಾರಾಷ್ಟ್ರದಲ್ಲಿ ಚಿರತೆ ನಿರಂತರ ದಾಳಿಯಿಂದಾಗಿ ಅಲ್ಲಿನ ಜನರು ಹೈರಾಣಾಗಿದ್ದಾರೆ. ಇದಕ್ಕಾಗಿ ಭಯಾನಕ ಚಿರತೆಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹೊಸ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯ ಶಿರೂರಿನಲ್ಲಿರುವ ಪಿಂಪರ್‌ಖೇಡ್ ಗ್ರಾಮಸ್ಥರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮೊಳೆಗಳಿಂದ ಕೂಡಿದ ಕೊರಳಪಟ್ಟಿಗಳನ್ನು ಧರಿಸುತ್ತಿದ್ದಾರೆ. ಚಿರತೆ ಸಾಮಾನ್ಯವಾಗಿ ಕೊರಳ ಮೇಲೆ ದಾಳಿ ಮಾಡುತ್ತದೆ. ಇದನ್ನು ತಡೆಯುವ ಸಲುವಾಗಿ ಈ ಐಡಿಯಾ ಮಾಡಲಾಗಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಪುಣೆಯ ಪಿಂಪರ್‌ಖೇಡ್ ಗ್ರಾಮದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಚಿರತೆ ದಾಳಿ ಮಾಡುವ ಪ್ರಮಾಣ ಹೆಚ್ಚಾಗಿದೆ. ಹಾಡ ಹಗಲಲ್ಲೂ ಹೊಲ, ಗದ್ದೆ, ಮನೆಗಳಿಗೆ ನುಗ್ಗುವ ಚಿರತೆಗಳು ಸಾಕುಪ್ರಾಣಿಯ ಜತೆಗೆ ಜನರನ್ನು ಕೊಲ್ಲುತ್ತಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಹೊಲಗಳಲ್ಲಿ ಕೆಲಸ ಮಾಡುವಾಗ ತಮ್ಮ ಪ್ರಾಣ ರಕ್ಷಣೆಗಾಗಿ 'ಮೊನಚಾದ ಕಬ್ಬಿಣದ ಮೊಳೆಗಳುಳ್ಳ ಕಾಲರ್'ಗಳನ್ನು ಧರಿಸಲು ಮುಂದಾಗಿದ್ದಾರೆ. ಚಿರತೆ ದಾಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ಕಡೆ ಗ್ರಾಮಸ್ಥರು ಕಬ್ಬಿಣದ ಗ್ರಿಲ್ ಬೇಲಿಯನ್ನು ಸಹ ಅಳವಡಿಸಿದ್ದಾರೆ. ಗ್ರಾಮಸ್ಥರ ಈ ಹೊಸ ರಕ್ಷಣಾ ಕ್ರಮಗಳು ಸೋಶಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಿದೆ.
ಮೊಳೆಗಳಿಂದ ಕೂಡಿದ ಕೊರಳಪಟ್ಟಿ:
#WATCH | Pune, Maharashtra | Residents of the leopard-hit Pimparkhed village wear spiked collars, while working in the fields, to save themselves from the fatal leopard attacks. (21.11) pic.twitter.com/mXlfaQPzLS
— ANI (@ANI) November 21, 2025
ಪಿಂಪರ್‌ಖೇಡ್ ಗ್ರಾಮದಲ್ಲಿ ಬಹುತೇಕರು ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಚಿರತೆಗಳ ದಾಳಿ ತೀವ್ರವಾಗಿ ಹೆಚ್ಚಾಗಿದೆ. ಗ್ರಾಮಸ್ಥರ ನಿತ್ಯ ಕೆಲಸಕ್ಕೆ ತೆರಳಲಿ, ದನಗಳಿಗೆ ಮೇವು ತರಲು, ಹೊಲ -ಗದ್ದೆಗಳ ಕೆಲಸಕ್ಕೆ ಹೋಗಲು ಪ್ರಾಣವನ್ನು ಒತ್ತೆ ಇಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಗ್ರಾಮಸ್ಥರು ತಮ್ಮದೆ ಆದ ರಕ್ಷಣಾ ವಿಧಾನಗಳನ್ನು ರೂಪಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಗ್ರಾಮಸ್ಥ ವಿಟ್ಠಲ್ ರಂಗನಾಥ್ ಜಾಧವ್ ಈ ಬಗ್ಗೆ ಮಾತನಾಡಿ, ʼʼಪ್ರತಿದಿನವು ಇಲ್ಲಿ ಚಿರತೆ ಕಂಡು ಬರುತ್ತದೆ. ನನ್ನ ತಾಯಿ ಒಂದು ತಿಂಗಳ ಹಿಂದೆ ಚಿರತೆಗೆ ಬಲಿಯಾಗಿದ್ದರು. ಇತ್ತೀಚೆಗಷ್ಟೇ ಹುಡುಗಿಯೊಬ್ಬಳು ಕೂಡ ಸಾವನ್ನಪ್ಪಿದ್ದಾಳೆ. ಚಿರತೆಗಳು ಯಾವಾಗ ಬೇಕಾದರೂ ದಾಳಿ ಮಾಡುವ ಸಾಧ್ಯತೆ ಇದೆ. ಚಿರತೆ ದಾಳಿಗೆ ಹೆದರಿ ನಾವು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮನ್ನು ನಾವು ರಕ್ಷಿಸುವ ಸಲುವಾಗಿ ಮೊಳೆಗಳಿಂದ ಆವೃತ್ತವಾದ ಕೊರಳ ಪಟ್ಟಿಯನ್ನು ಕುತ್ತಿಗೆಗೆ ಧರಿಸುತ್ತಿದ್ದೇವೆʼʼ ಎಂದು ಹೇಳಿದ್ದಾರೆ.
ಆಟೋ ರಿಕ್ಷಾವನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ; ರಸ್ತೆ ಮಧ್ಯೆಯೇ ರೊಮ್ಯಾನ್ಸ್
ʼʼಬೆಳಗ್ಗೆ 6 ಗಂಟೆಗೆ ತಮ್ಮ ದನಗಳಿಗೆ ಮೇವು ಹಾಕಲು ಹೊರಗೆ ಹೋದಾಗ ಚಿರತೆಯೊಂದು ನನ್ನ ತಾಯಿ ಮೇಲೆ ದಾಳಿ ಮಾಡಿ ಸುಮಾರು ಒಂದು ಕಿಲೋ ಮೀಟರ್ ದೂರಕ್ಕೆ ಕಬ್ಬಿನ ತೋಟಗಳಿಗೆ ಎಳೆದೊಯ್ದಿತು. ಈ ಘಟನೆ ಇಡೀ ಗ್ರಾಮವನ್ನು ಭಯಭೀತಗೊಳಿಸಿದೆ. ಗ್ರಾಮಸ್ಥರು ಈಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕುತ್ತಿಗೆಗೆ ಮೊಳೆಗಳಿಂದ ಕೂಡಿದ ಕೊರಳ ಪಟ್ಟಿಗಳನ್ನು ಧರಿಸಿಕೊಂಡು ಹೊರಗೆ ಬರುತ್ತಾರೆ. ಇದು ಚಿರತೆಗಳ ದಾಳಿಯನ್ನು ತಡೆಯುತ್ತದೆ ಎಂಬುದು ನಮ್ಮ ನಂಬಿಕೆ. ಅದರ ಜತೆಗೆ ಇಲ್ಲಿನ ಅನೇಕ ಗ್ರಾಮಸ್ಥರು ತಮ್ಮ ಮನೆಗಳಿಗೆ ತಡೆಗೋಡೆಗಳನ್ನುನಿರ್ಮಿಸುತ್ತಿದ್ದಾರೆ. ತಮ್ಮ ಮನೆಗಳ ಸುತ್ತಲೂ ಕಬ್ಬಿಣದ ಗ್ರಿಲ್‌ಗಳು ಮತ್ತು ವಿದ್ಯುತ್ ಬೇಲಿಗಳನ್ನು ಕೂಡ ಅಳವಡಿಸಿದ್ದಾರೆ. ಹಾಗಿದ್ದರೂ ಜನರಿಗೆ ಚಿರತೆಯ ಭಯ ಇದ್ದೇ ಇರುತ್ತದೆ. ಅದಕ್ಕಾಗಿ ಸರಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಅವರು ತಿಳಿಸಿದ್ದಾರೆ.
ಪುಣೆ ಜಿಲ್ಲೆಯ ಪಿಂಪರ್‌ಖೇಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 20 ದಿನಗಳಲ್ಲಿ ಚಿರತೆ ದಾಳಿಯಿಂದ ಮೂರು ಸಾವುಗಳಾಗಿವೆ. ಹೀಗಾಗಿ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಮತ್ತು ರಕ್ಷಣಾ ತಂಡದ ಜಂಟಿ ಕಾರ್ಯಾಚರಣೆಯ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.