ತಂತ್ರಜ್ಞಾನ, ಸಂಶೋಧನೆಗೆ ಸಹಕಾರ: ಜಿ20 ಶೃಂಗಸಭೆಯಲ್ಲಿ ಭಾರತ, ಆಸ್ಟ್ರೇಲಿಯಾ, ಕೆನಡಾ ಘೋಷಣೆ
ಕಳೆದ ಕೆಲವು ವರ್ಷಗಳಿಂದ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತೆ ಪುನರುಜ್ಜೀವನಗೊಳ್ಳುವ ದಾರಿಗಳು ತೆರೆದುಕೊಳ್ಳುತ್ತಿದೆ. ಇದೀಗ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾದೊಂದಿಗೆ ಸೇರಿ ತಂತ್ರಜ್ಞಾನ, ಸಂಶೋಧನೆಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ.
ಆಂಟನಿ ಅಲ್ಬನೀಸ್, ಮಾರ್ಕ್ ಕಾರ್ನಿ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ಜೋಹಾನ್ಸ್‌ಬರ್ಗ್: ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ (PM Antony Albanese), ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ (PM Mark Carney) ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದಕ್ಷಿಣ ಆಫ್ರಿಕಾದ ( South Africa) ಜೋಹಾನ್ಸ್‌ಬರ್ಗ್‌ನಲ್ಲಿ (Johannesburg in) ನಡೆದ ಜಿ20 ಶೃಂಗಸಭೆಯಲ್ಲಿ (G20 Summit) ತಂತ್ರಜ್ಞಾನ, ಸಂಶೋಧನೆ (technology and innovation) ಕ್ಷೇತ್ರದ ಬೆಳವಣಿಗೆಯಲ್ಲಿ ಪರಸ್ಪರ ಸಹಕಾರ ನೀಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ. ಕೆನಡಾದ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಸುಧಾರಣೆಯಾಗುತ್ತಿದೆ ಎಂಬುದಕ್ಕೆ ಇದು ಒಂದು ಪ್ರಮುಖ ಸಾಕ್ಷಿಯಾಗಿದೆ.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಶನಿವಾರ ಪಾಲ್ಗೊಂಡಿರುವ ಪ್ರಧಾನ ಮಂತ್ರಿಗಳಾದ ಆಂಟನಿ ಅಲ್ಬನೀಸ್, ಮಾರ್ಕ್ ಕಾರ್ನಿ ಮತ್ತು ನರೇಂದ್ರ ಮೋದಿ ಅವರು ಭಾರತ, ಆಸ್ಟ್ರೇಲಿಯಾ ಮತ್ತು ಕೆನಡಾ ನಡುವೆ ತ್ರಿಪಕ್ಷೀಯ ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪಾಲುದಾರಿಕೆ ಮಾಡುವುದಾಗಿ ಘೋಷಿಸಿಕೊಂಡಿವೆ. ಇದು ತಂತ್ರಜ್ಞಾನ, ಶುದ್ಧ ಇಂಧನ ಮತ್ತು ನಿರಂತರ ಸಮನಾದ ಪೂರೈಕೆಗೆ ಅಗತ್ಯವಾದ ವ್ಯವಸ್ಥೆಯನ್ನು ನಿರ್ಮಿಸುವುದು ಸೇರಿದೆ. ಇದು ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲಿದೆ.
ಇದನ್ನೂ ಓದಿ: G20 Summit: ಮತ್ತೊಮ್ಮೆ ಮೆಲೋಡಿ ಮೋಡಿ; ಜಿ20 ಶೃಂಗಸಭೆಯಲ್ಲಿ ಗಮನ ಸೆಳೆದ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತದ ನಡುವಿನ ಪಾಲುದಾರಿಕೆಯನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ. ಇದು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಮೂರು ಖಂಡಗಳ ನಡುವಿನ ಸಹಯೋಗವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಪಾಲುದಾರಿಕೆಯು ಮೂರು ದೇಶಗಳ ನಡುವಿನ ನೈಸರ್ಗಿಕ ಬಲಗಳನ್ನು ಆಧರಿಸಿದೆ. ಹಸಿರು ಇಂಧನದಲ್ಲಿ ಹೊಸ ಸಂಶೋಧನೆ ಮತ್ತು ಉಪಸ್ಥಿತವಾಗಿರುವ ಖನಿಜಗಳ ಪೂರೈಕೆ ಸರಪಳಿಯನ್ನು ಸಮಾನವಾಗಿ ಇರಿಸಿಕೊಳ್ಳುವುದಕ್ಕೆ ಒತ್ತು ನೀಡಲಾಗುತ್ತದೆ. ಇದು ಸುರಕ್ಷಿತ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
A new trilateral technology and innovation partnership!
— Narendra Modi (@narendramodi) November 22, 2025
Had an excellent meeting with Mr. Anthony Albanese, PM of Australia and Mr. Mark Carney, PM of Canada on the sidelines of the G20 Summit in Johannesburg. We are delighted to announce an Australia-Canada-India Technology and… pic.twitter.com/Qa5lSvlIb2
ಈ ಪಾಲುದಾರಿಕೆ ಕ್ರಮವನ್ನು ಬಲಪಡಿಸಲು 2026ರ ಮೊದಲ ತ್ರೈಮಾಸಿಕದಲ್ಲಿ ಸಭೆ ನಡೆಸಲು ಮೂರು ದೇಶಗಳ ಅಧಿಕಾರಿಗಳು ಸಭೆ ಸೇರಲಿದ್ದಾರೆ. ಇದು ನಾಗರಿಕರ ಜೀವನವನ್ನು ಸುಧಾರಿಸಲು ಎಐಯ ಅಭಿವೃದ್ಧಿ ಮತ್ತು ಸಾಮೂಹಿಕ ಅಳವಡಿಕೆಗೆ ಒತ್ತು ನೀಡಲಿದೆ ಎಂದು ಕೆನಡಾದ ಪ್ರಧಾನಿ ಕಾರ್ನಿ ಅವರು ತಿಳಿಸಿದ್ದಾರೆ.
ಮಾರ್ಕ್ ಕಾರ್ನಿ ಅವರು ಈ ವರ್ಷದ ಆರಂಭದಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಸುಧಾರಣೆಯಾಗುವ ಹಾದಿಯಲ್ಲಿದೆ. ಕಳೆದ ಜೂನ್‌ನಲ್ಲಿ ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಕೊನೆಯಲ್ಲಿ ಅವರು ಈ ಕುರಿತು ಪ್ರಸ್ತಾವನೆಯನ್ನು ಮಾಡಿದ್ದರು. ಆ ಬಳಿಕ ಇದೀಗ ಪಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ನವೆಂಬರ್ ತಿಂಗಳ ಆರಂಭದಲ್ಲಿ ನಯಾಗರಾ ಪ್ರದೇಶದಲ್ಲಿ ನಡೆದ ಜಿ7 ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರು ಚರ್ಚೆ ನಡೆಸಿದ್ದು, ಭಾರತವು ಕೆನಡಾದ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಕರೆದಿದ್ದರು.
ಭಯೋತ್ಪಾದನೆಯ ವಿರುದ್ಧ ಜಾಗತಿಕ ಹೋರಾಟವನ್ನು ಬಲಪಡಿಸಲು ಭಾರತ ಮತ್ತು ಆಸ್ಟ್ರೇಲಿಯಾ ಬದ್ಧವಾಗಿದ್ದು, ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚು ಬಲಪಡಿಸುವ ಕುರಿತು ಪ್ರಧಾನಿ ಮೋದಿ ಅವರು ಶುಕ್ರವಾರ ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್ ಅವರೊಂದಿಗೆ ಚರ್ಚೆ ನಡೆಸಿದ್ದರು.
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಶನಿವಾರ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಈ ವರ್ಷ ಭಾರತ ಮತ್ತು ಯುಕೆ ಪಾಲುದಾರಿಕೆಯಲ್ಲಿ ಹೊಸ ಶಕ್ತಿ ತುಂಬಿದೆ. ಇದು ಮುಂದೆ ಅನೇಕ ಕ್ಷೇತ್ರಗಳಲ್ಲಿ ಕಾಣಸಿಗುವುದು ಎಂದು ಹೇಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರನ್ನು ಕೂಡ ಮೋದಿ ಈ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಭಾರತ ಮತ್ತು ಫ್ರಾನ್ಸ್ ಸಂಬಂಧಗಳು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.