ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತರಬೇತಿ ಹಾರಾಟದ ವೇಳೆ ಕಾನ್ಪುರದಲ್ಲಿ ವಿಮಾನ ಅಪಘಾತ; ಕರ್ನಾಟಕದ ಪೈಲಟ್‌ ಅಭಿಷೇಕ್ ಪೂಜಾರಿ ಬಲಿ

Kanpur Plane Crash: ಉತ್ತರ ಪ್ರದೇಶದ ಕಾನ್ಪುರ ವಿಮಾನ ಅಪಘಾತದಲ್ಲಿ ಕರ್ನಾಟಕ ಮೂಲದ ಪೈಲಟ್ ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಮತ್ತೊಬ್ಬರು ಗುಜರಾತ್ ಮೂಲದವರು. ವಿಮಾನವು ತರಬೇತಿ ಕೇಂದ್ರದಿಂದ ಬೆಳಗ್ಗೆ 11.30ರ ಸುಮಾರಿಗೆ ಹೊರಟು 20 ನಿಮಿಷಗಳ ನಂತರ ಹಿಂತಿರುಗುವಾಗ ವಿಮಾನ ಅಪಘಾತಕ್ಕೀಡಾಯಿತು.

ಕಾನ್ಪುರ ವಿಮಾನ ಅಪಘಾತ; ಕರ್ನಾಟಕದ ಪೈಲಟ್‌ ಬಲಿ

ಕಾನ್ಪುರದಲ್ಲಿ ಪತನಕ್ಕೀಡಾದ ವಿಮಾನ -

Priyanka P
Priyanka P Aug 27, 2026 3:02 PM

ಲಖನೌ, ಆ. 27: ಉತ್ತರ ಪ್ರದೇಶದಲ್ಲಿ ಗುರುವಾರ (ಆಗಸ್ಟ್‌ 27) ಬೆಳಗ್ಗೆ ಖಾಸಗಿ ತರಬೇತಿ ವಿಮಾನವೊಂದು ಪತನಗೊಂಡಿದ್ದು (Kanpur Plane Crash), ಪೈಲಟ್ ಮತ್ತು ಸಹ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವಿಗೀಡಾದ ಒಬ್ಬರು ಪೈಲಟ್ ಕರ್ನಾಟಕ ಮೂಲದವರಾಗಿದ್ದು (Karnataka Pilot Killed), ಮತ್ತೊಬ್ಬರು ಗುಜರಾತ್ ಮೂಲದವರು. ಕಾನ್ಪುರದ ಕತ್ರಿ ಪ್ರದೇಶದ ನತ್ತುಪೂರ್ವ ಗ್ರಾಮದ ಗಂಗಾ ಬ್ಯಾರೇಜ್ ಬಳಿ ಈ ಘಟನೆ ನಡೆದಿದೆ. ಕರ್ನಾಟಕದ ಮೃತ ತರಬೇತಿ ಪೈಲಟ್ ಅನ್ನು ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಮತ್ತೋರ್ವ ಮೃತರು ಗುಜರಾತ್ ನಿವಾಸಿ, ಬೋಧಕ ಸಚಿನ್ ಭಾಟಿಯಾ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.

ವಿಮಾನವು ತರಬೇತಿ ಕೇಂದ್ರದಿಂದ ಬೆಳಗ್ಗೆ 11.30ರ ಸುಮಾರಿಗೆ ಹೊರಟು 20 ನಿಮಿಷಗಳ ನಂತರ ಹಿಂತಿರುಗುವಾಗ ಅಪಘಾತಕ್ಕೀಡಾಯಿತು. ಅವಘಾತಕ್ಕೀಡಾದ ವಿಮಾನವನ್ನು 2023ರಲ್ಲಿ ಖರೀದಿಸಲಾಗಿತ್ತು. ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿದೆ ಎಂದು ಲಾಲ್ ಹೇಳಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದ್ದು, ಅಪಘಾತದ ಬಗ್ಗೆ ತಾಂತ್ರಿಕ ತನಿಖೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ವಿಮಾನವು ಆ ಪ್ರದೇಶದ ಹೊಲಕ್ಕೆ ಅಪ್ಪಳಿಸಿತು. ಸ್ಥಳೀಯ ನಿವಾಸಿಗಳು ಹೇಳುವಂತೆ ದೊಡ್ಡ ಶಬ್ಧ ಕೇಳಿಬಂದಿದ್ದು, ಇಡೀ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು. ವಿಮಾನದ ಅವಶೇಷಗಳು ಹೊಲದಲ್ಲಿ ಹರಡಿಕೊಂಡಿವೆ.

ಬಾರಾಮತಿಯಲ್ಲಿ ತರಬೇತಿ ವಿಮಾನ ಅಪಘಾತ: ಅಜಿತ್ ಪವಾರ್ ದುರ್ಮರಣಕ್ಕೀಡಾದ ಸ್ಥಳದಲ್ಲೇ ಮತ್ತೊಂದು ದುರಂತ

ಕಾಸ್ಗಂಜ್‌ನಲ್ಲಿ ವಿಮಾನ ಅಪಘಾತ

ಈ ವರ್ಷದ ಜೂನ್‌ನಲ್ಲಿ ರಾಜ್ಯದ ಕಾಸ್ಗಂಜ್ ಜಿಲ್ಲೆಯಲ್ಲಿ ಎರಡು ಆಸನಗಳ ತರಬೇತಿ ವಿಮಾನವು ಹೊಲಕ್ಕೆ ಅಪ್ಪಳಿಸಿದ ಪರಿಣಾಮ, ಮಹಿಳಾ ಪೈಲಟ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ತರಬೇತಿ ಹಾರಾಟಕ್ಕಾಗಿ ಅಲಿಘರ್ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ಕಾಸ್ಗಂಜ್ ಜಿಲ್ಲಾ ಕೇಂದ್ರ ಪ್ರದೇಶದ ಪೊಲೀಸ್ ಲೈನ್ಸ್ ಬಳಿ ಪತನಗೊಂಡು ನೆಲಕ್ಕೆ ಅಪ್ಪಳಿಸುವ ಮೊದಲು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿತ್ತು.

ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿತ್ತು ಎಂದು ಮೂಲಗಳು ತಿಳಿಸಿದ್ದವು. ಗಾಯಗೊಂಡ ತರಬೇತಿ ಪೈಲಟ್ ಅನ್ನು ಮಹಾರಾಷ್ಟ್ರದ ಕೈನಾತ್ ಖಾನ್ ಎಂದು ಗುರುತಿಸಲಾಗಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು.