ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಇ.ಡಿ ದಾಳಿ; CRPF ಭದ್ರತೆಯಲ್ಲಿ 21 ಕಡೆ ಶೋಧ

Shivashankarappa Sahukar: ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಶಿವಶಂಕರಪ್ಪ ಎಸ್‌.ಸಾಹುಕಾರ ಅವರ ನಿವಾಸ ಸೇರಿದಂತೆ ಒಟ್ಟು 21 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಇ.ಡಿ ದಾಳಿ

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ -

Vishakha Bhat Heggar
Vishakha Bhat Heggar Aug 18, 2026 12:02 PM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಶಿವಶಂಕರಪ್ಪ ಎಸ್‌.ಸಾಹುಕಾರ ಅವರ ನಿವಾಸ ಸೇರಿದಂತೆ ಒಟ್ಟು 21 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ, ಕೆಪಿಎಸ್ ಸಿ ಸದಸ್ಯೆ ಶಾಂತಾ ಹೊಸಮನಿ,  ಮಧ್ಯವರ್ತಿಗಳು ಪತ್ರಿಕೆ ಡಿಜಿಟಲ್ ಮೌಲ್ಯಮಾಪನ ಸಂಸ್ಥೆ  ಸೇರಿದಂತೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳ ಮನೆ ಮೇಲೂ ಇಡಿ ದಾಳಿ ನಡೆಸಿದೆ ಎನ್ನಲಾಗಿದೆ.

ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ED ಅಧಿಕಾರಿಗಳ ತಂಡವು ನಿವಾಸದಲ್ಲಿರುವ ವಿವಿಧ ದಾಖಲೆಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿದೆ. ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕೆಪಿಎಸ್‌ಸಿ ನಡೆಸಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಪಶುವೈದ್ಯ ಮಂಜುನಾಥ್ ಎಂಬವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು‌.

ಈ ದೂರಿನ ಮೇರೆಗೆ ಶಿವಶಂಕರಪ್ಪ ಹಾಗೂ ಮತ್ತಿತರರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಜುಲೈ 13ರಂದು ರಾಜ್ಯಪಾಲರು ಶಿವಶಂಕರಪ್ಪ ಅವರನ್ನು ಅಮಾನತುಗೊಳಿಸಿದ್ದರು. ಇದರ ನಂತರ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದರು.

ಕೆಪಿಎಸ್ಸಿ ನೇಮಕಾತಿ ಅಕ್ರಮ ಆರೋಪ

ಇತ್ತೀಚೆಗೆ KPSC ನಡೆಸಿದ 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭಾರಿ ವಿವಾದಕ್ಕೆ ಕಾರಣವಾಗಿದೆ. 342 ಸಾಮಾನ್ಯ ಹಾಗೂ 58 ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗಾಗಿ ಜನವರಿಯಲ್ಲಿ ಪರೀಕ್ಷೆ ನಡೆದಿದ್ದು, ಜುಲೈ 17ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಬಳಿಕ ಅಭ್ಯರ್ಥಿಗಳು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು.

ಕೆಲವು ಅಭ್ಯರ್ಥಿಗಳು ಹುದ್ದೆ ಕೊಡಿಸುವುದಾಗಿ ಮಧ್ಯವರ್ತಿಗಳು 70 ರಿಂದ 80 ಲಕ್ಷ ರೂ. ವರೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗೆ ಮುನ್ನವೇ ಕೆಲ ಅಭ್ಯರ್ಥಿಗಳಿಗೆ ಮಾಹಿತಿ ನೀಡಿರುವುದು ಹಾಗೂ OMR ಉತ್ತರ ಪತ್ರಿಕೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಅವುಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

KPSC recruitment scam: ಕೆಪಿಎಸ್‌ಸಿ ಸೇರಿ ಎಲ್ಲಾ ನೇಮಕಾತಿ ಅಕ್ರಮಗಳನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಿ: ವಿಜಯೇಂದ್ರ ಆಗ್ರಹ

ಆರೋಪಗಳ ಬೆನ್ನಲ್ಲೇ KPSC ಪಶು ವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಆಂತರಿಕ ತನಿಖಾ ಸಮಿತಿ ರಚಿಸಿತ್ತು. ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ CIDಗೆ ವಹಿಸಿತ್ತು. ಇದೇ ಪ್ರಕರಣದಲ್ಲಿ ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಆಯೋಗದ ಕೆಲ ಅಧಿಕಾರಿಗಳು ಹಾಗೂ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ವಿರುದ್ಧ FIR ದಾಖಲಾಗಿತ್ತು. ಸಾಹುಕಾರ್ ಅವರನ್ನು ಅವರ ಇಬ್ಬರು ಪುತ್ರಿಯರ ಸರ್ಕಾರಿ ನೇಮಕಾತಿಗೆ ಸಂಬಂಧಿಸಿದ ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆ ಜುಲೈನಲ್ಲಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು. ಈ ಹಿನ್ನೆಲೆ ಇದೀಗ ED ಅಧಿಕಾರಿಗಳು ಕಲಬುರಗಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ಕಲಬುರಗಿ ನಿವಾಸ ಸೇರಿ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.