ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭದ್ರತಾ ಪಡೆ-ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ಚಕಮಕಿ

Latest gunfight erupts: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ ವೇಳೆ, ಅಡಗಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ.

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಗುಂಡಿನ ಚಕಮಕಿ

ಸಾಂದರ್ಭಿಕ ಚಿತ್ರ -

Priyanka P
Priyanka P Jan 26, 2026 2:40 PM

ಶ್ರೀನಗರ, ಜ. 26: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಕಿಶ್ತ್ವಾರ್ ಜಿಲ್ಲೆಯಲ್ಲಿ ಭಾನುವಾರ (ಜನವರಿ 25) ತಡರಾತ್ರಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರದ ಅಂತರದಲ್ಲಿ ಗುಡ್ಡಗಾಡು ಜಿಲ್ಲೆಯ ಚತ್ರೂ ಬೆಲ್ಟ್‌ನಲ್ಲಿ ನಡೆದ ಮೂರನೇ ಎನ್‌ಕೌಂಟರ್ ಇದಾಗಿದ್ದು, ಈ ಪ್ರದೇಶದಲ್ಲಿ ಭಾರಿ ಹಿಮಪಾತದ ನಡುವೆಯೂ ಸೇನೆ ಮತ್ತು ಪೊಲೀಸರು ಜೈಶ್-ಎ-ಮೊಹಮ್ಮದ್ (Jaish-e-Mohammad) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನಿ ಭಯೋತ್ಪಾದಕ ಗುಂಪಿನ ಮೂವರು ಉಗ್ರರಿಗಾಗಿ ಹುಡುಕಾಟವನ್ನು ಮುಂದುವರಿಸಿದ್ದಾರೆ.

ಜಾನ್ಸೀರ್-ಕಂಡಿವಾರ್ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ಶೋಧ ತಂಡವು ಕಾರ್ಯಾಚರಣೆ ನಡೆಸುತ್ತಿದ್ದಾಗ ರಾತ್ರಿ 10.20ರ ಸುಮಾರಿಗೆ ಎನ್‌ಕೌಂಟರ್ ಪ್ರಾರಂಭವಾಯಿತು. ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದವು. ಈ ವೇಳೆ ನಿರಂತರ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಶ್ತ್ವಾರ್‌ನ ಭಯೋತ್ಪಾದಕರ ಅಡಗುತಾಣದಲ್ಲಿ ಪತ್ತೆಯಾಯಿತು ಭಾರಿ ಪ್ರಮಾಣದ ದಿನಸಿ

ಜನವರಿ 18ರಂದು ಮಂದ್ರಲ್-ಸಿಂಗ್‌ಪೋರಾ ಬಳಿಯ ಸೊನ್ನಾರ್ ಗ್ರಾಮದಲ್ಲಿ ನಡೆದ ಮೊದಲ ಗುಂಡಿನ ಚಕಮಕಿಯ ನಂತರ, ಚತ್ರೂ ಬೆಲ್ಟ್ ಹಿಮದಿಂದ ಆವೃತವಾಗಿದ್ದರೂ,ಯೋಧರು ಭಯೋತ್ಪಾದಕರನ್ನು ಬೆನ್ನಟ್ಟುತ್ತಿದ್ದಾರೆ.

ಆರಂಭಿಕ ಘರ್ಷಣೆಯಲ್ಲಿ ಒಬ್ಬ ಪ್ಯಾರಾಟ್ರೂಪರ್ ಹುತಾತ್ಮರಾಗಿದ್ದು, ಇತರ ಏಳು ಸೈನಿಕರು ಗಾಯಗೊಂಡರು. ದಟ್ಟವಾದ ಅರಣ್ಯ ಪ್ರದೇಶ ಮತ್ತು ಸವಾಲಿನ ಭೂಪ್ರದೇಶವನ್ನು ಬಳಸಿಕೊಂಡು ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಜನವರಿ 22ರಂದು ಮೊದಲ ಎನ್‌ಕೌಂಟರ್ ನಡೆದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಉಗ್ರರ ಚಲನವಲನ ಗುರುತಿಸಲಾಯಿತು. ಆದರೆ ಉಗ್ರರನ್ನು ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಶುಕ್ರವಾರ (ಜನವರಿ 23) ಆ ಪ್ರದೇಶದಲ್ಲಿ ಎರಡು ಅಡಿಗಿಂತ ಹೆಚ್ಚು ಹಿಮಪಾತ ಕಂಡುಬಂದರೂ ಭದ್ರತಾ ಪಡೆಗಳು ತಮ್ಮ ಹುಡುಕಾಟವನ್ನು ಮುಂದುವರಿಸಿವೆ.

ಗಣರಾಜ್ಯೋತ್ಸವಕ್ಕೂ ಮುನ್ನ ನಡೆದಿತ್ತಾ ಭಾರೀ ಸಂಚು? 10,000 ಕೆಜಿ ಸ್ಫೋಟಕಗಳು, ಡಿಟೋನೇಟರ್‌ಗಳು ವಶಕ್ಕೆ!

ಜೈಶ್ ಭಯೋತ್ಪಾದಕನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶುಕ್ರವಾರ (ಜನವರಿ 23) ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಮ್ಮದ್ (Jaish-e-Mohammad) ಸಂಘಟನೆಯ ಕಮಾಂಡರ್‌ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹತ್ಯೆಯಾದ ಉಗ್ರನನ್ನು ಪಾಕಿಸ್ತಾನ ಮೂಲದ ಉಸ್ಮಾನ್ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಲಿ ಪಡೆದಿವೆ.

ಕಥುವಾದ ಬಿಲ್ಲಾವರ್ ಪ್ರದೇಶದ ಪರ್ಹೇಟರ್ ಎಂಬಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಸೇನೆ ಮತ್ತು ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ಆರಂಭಿಸಿ ಪ್ರದೇಶವನ್ನು ಸುತ್ತುವರಿದಿದ್ದವು. ಈ ವೇಳೆ ತಾನು ಅಡಗಿದ್ದ ಮನೆಯಲ್ಲಿದ್ದ ಕುಟುಂಬದ ಸದಸ್ಯರನ್ನೇ ಬಂಧಿಯಾಗಿಸಿ ಉಗ್ರ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿದ ಸೇನೆಯು, ಒತ್ತೆಯಾಳುಗಳನ್ನು ರಕ್ಷಿಸಿ ಉಗ್ರನನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.