ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನನ್ನು ವಿಚಾರಣೆ ನಡೆಸಲು ಮುಂಬೈ ಪೊಲೀಸರಿಗೆ ಕೇಂದ್ರದ ಆ ಒಂದು ಆದೇಶವೇ ಅಡ್ಡಿ!
Lawrence Bishnoi: ಗುಜರಾತ್ನ ಸಬರಮತಿ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂಬೈ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಗೃಹ ಸಚಿವಾಲಯದ ಆದೇಶದ ಪ್ರಕಾರ ಆತನನ್ನು ಜೈಲಿನಿಂದ ಹೊರಗೆ ಕರೆದೊಯ್ಯುವಂತಿಲ್ಲ. ಸಲ್ಮಾನ್ ಖಾನ್ ನಿವಾಸದ ಹೊರಗಿನ ಗುಂಡಿನ ದಾಳಿ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಮತ್ತು ನಟ ಟೈಗರ್ ಶ್ರಾಫ್ ಕಾರಿನ ಮೇಲಿನ ಗುಂಡಿನ ದಾಳಿ ಸೇರಿ ಹಲವು ಪ್ರಕರಣಗಳಲ್ಲಿ ಬಿಷ್ಣೋಯ್ ಗ್ಯಾಂಗ್ನ ನಂಟಿನ ಆರೋಪಗಳಿವೆ. ಇದೀಗ ಈ ನಿರ್ಬಂಧವನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಒತ್ತಾಯಿಸಿದ್ದಾರೆ.
-
ಮುಂಬೈ, ಅ. 21: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Gangster Lawrence Bishnoi) ಗ್ಯಾಂಗ್ಗೆ ಮೂರು ವರ್ಷಗಳಲ್ಲಿ ಮುಂಬೈಯಲ್ಲಿ ನಡೆದ ಕನಿಷ್ಠ ನಾಲ್ಕು ಪ್ರಮುಖ ಅಪರಾಧ ಪ್ರಕರಣಗಳ ನಂಟು ಇದೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಕೂಡ ಈ ಪಟ್ಟಿಗೆ ಸೇರಿದೆ. ಆದರೆ ಗುಜರಾತ್ನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂಬೈ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಗೃಹ ಸಚಿವಾಲಯದ ಆದೇಶವೇ ಇದಕ್ಕೆ ಪ್ರಮುಖ ಕಾರಣ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗೃಹ ಸಚಿವಾಲಯವು 2023ರ ಆಗಸ್ಟ್ನಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 268ರ ಅಡಿಯಲ್ಲಿ ಒಂದು ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ, ಇತರ ತನಿಖಾ ಸಂಸ್ಥೆಗಳು ವಿಚಾರಣೆಗಾಗಿ ಬಿಷ್ಣೋಯ್ನನ್ನು ಜೈಲಿನಿಂದ ಹೊರಗೆ ಕರೆದೊಯ್ಯುವಂತಿಲ್ಲ. ನಂತರ ಜಾರಿಗೆ ಬಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 303ರ ಅಡಿಯಲ್ಲಿ ಈ ನಿರ್ಬಂಧವನ್ನು ನವೀಕರಿಸಲಾಗಿದೆ.
ಈ ಆದೇಶ ಜಾರಿಯಲ್ಲಿರುವುದರಿಂದ, ನ್ಯಾಯಾಲಯಗಳು ಹೊರಡಿಸುವ ಸಾಮಾನ್ಯ ಪ್ರೊಡಕ್ಷನ್ ವಾರಂಟ್ಗಳ ಮೂಲಕವೂ ಬಿಷ್ಣೋಯ್ನನ್ನು ಬೇರೆಡೆಗೆ ಕರೆತರುವುದು ಸಾಧ್ಯವಿಲ್ಲ. ಪೊಲೀಸ್ ಅಥವಾ ಇತರ ತನಿಖಾ ಸಂಸ್ಥೆಗಳ ಕಸ್ಟಡಿ ವಿಚಾರಣೆ ಕೋರಿಕೆಗಳಿಗೂ ಅಡ್ಡಿಯಾಗಿದೆ. ಜೈಲಿನಿಂದ ಹೊರಗೆ ಸಾಗಿಸುವ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸುವ ಅಪಾಯ ಸಾಧ್ಯತೆ ಇದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ, ಸಂಬಂಧಪಟ್ಟ ನ್ಯಾಯಾಲಯದ ಆದೇಶದಂತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಅಥವಾ ಜೈಲಿನ ಆವರಣದಲ್ಲಿಯೇ ಆತನನ್ನು ವಿಚಾರಣೆ ನಡೆಸಬೇಕಾಗಿದೆ.
ಛೋಟಾ ರಾಜನ್ಗೂ ಇದೇ ರೀತಿಯ ರಕ್ಷಣೆ
ಇಂತಹ ವಿಶೇಷ ನಿರ್ಬಂಧವನ್ನು ಎದುರಿಸುತ್ತಿರುವ ಮೊದಲ ಕುಖ್ಯಾತ ಕೈದಿ ಲಾರೆನ್ಸ್ ಬಿಷ್ಣೋಯ್ ಅಲ್ಲ. 2015ರಲ್ಲಿ ಅಂಡರ್ವರ್ಲ್ಡ್ ಡಾನ್ ಛೋಟಾ ರಾಜನ್ನಿಗೂ ಇದೇ ರೀತಿಯ ರಕ್ಷಣೆ ನೀಡಲಾಗಿತ್ತು. ಇಂಡೋನೇಷ್ಯಾದಲ್ಲಿ ಬಂಧನಕ್ಕೊಳಗಾಗಿ ಭಾರತಕ್ಕೆ ಗಡಿಪಾರುಗೊಂಡ ಬಳಿಕ ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಮುಂಬೈ ಪೊಲೀಸರಲ್ಲಿನ ಕೆಲವು ಅಧಿಕಾರಿಗಳು ತನ್ನ ಪ್ರತಿಸ್ಪರ್ಧಿ ದಾವೂದ್ ಇಬ್ರಾಹಿಂ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂಬೈಗೆ ಕರೆತಂದರೆ ತನ್ನ ಜೀವಕ್ಕೆ ಅಪಾಯವಿದೆ ಎಂದು ಛೋಟಾ ರಾಜನ್ ಮಾಧ್ಯಮ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದನು.
ಲಾರೆನ್ಸ್ ಬಿಷ್ಣೋಯ್ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ಗೂ ಇದೇ ರೀತಿಯ ರಕ್ಷಣೆ ನೀಡಲಾಗಿದೆ. ಕಳೆದ ವರ್ಷ ಅಮೆರಿಕದಿಂದ ಗಡಿಪಾರುಗೊಂಡಿದ್ದ ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
2023ರಿಂದ ಸಬರಮತಿ ಜೈಲಿನಲ್ಲಿರುವ ಬಿಷ್ಣೋಯ್
ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ 2023ರಿಂದ ಅಹಮದಾಬಾದ್ನ ಸಬರಮತಿ ಜೈಲಿನಲ್ಲಿದ್ದಾನೆ. ಈ ಅವಧಿಯಲ್ಲಿ ಆತನ ಗ್ಯಾಂಗ್ ಹೊರಗಡೆ ಕೊಲೆ, ಬೆದರಿಕೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದೆ ಎಂಬ ಆರೋಪಗಳಿವೆ.
ಯುಎಸ್- ಕೆನಡಾ ಗಡಿ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಮತ್ತೊರ್ವ ಸದಸ್ಯನ ಅರೆಸ್ಟ್
2024ರ ಏಪ್ರಿಲ್ನಲ್ಲಿ ನಟ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆದ ಬಳಿಕ ಬಿಷ್ಣೋಯ್ ಮುಂಬೈ ಪೊಲೀಸರ ಪ್ರಮುಖ ಗಮನ ಸೆಳೆದಿದ್ದನು. ಬಿಷ್ಣೋಯ್ ಗ್ಯಾಂಗ್ನಿಂದ ನೇಮಕಗೊಂಡಿದ್ದ ಶೂಟರ್ಗಳು ಸಲ್ಮಾನ್ ಖಾನ್ನನ್ನು ಕೊಲ್ಲುವ ಸಂಚಿನ ಭಾಗವಾಗಿ ಗುಂಡು ಹಾರಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು.
ಸಲ್ಮಾನ್ ಖಾನ್ ಬಹಳ ಸಮಯದಿಂದ ಬಿಷ್ಣೋಯ್ ಗ್ಯಾಂಗ್ನ ಗುರಿಯಾಗಿದ್ದಾರೆ. ಕಪ್ಪು ಜಿಂಕೆ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಆಪಾದಿತ ಪಾತ್ರದ ಹಿನ್ನೆಲೆಯಲ್ಲಿ ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸಬೇಕು ಎಂಬ ಬೇಡಿಕೆಯನ್ನು ಗ್ಯಾಂಗ್ ಮುಂದಿಟ್ಟಿದೆ ಎಂದು ವರದಿಯಾಗಿದೆ.
ಟೈಗರ್ ಶ್ರಾಫ್ಗೆ ಬೆದರಿಕೆ
ಅಕ್ಟೋಬರ್ 18ರಂದು ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಹೊತ್ತುಕೊಂಡಿದೆ ಎಂದು ವರದಿಯಾಗಿದೆ.
ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧವೇ ದಾಳಿಗೆ ಕಾರಣ ಎಂದು ಗ್ಯಾಂಗ್ ಹೇಳಿಕೊಂಡಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಮತ್ತು ಪ್ರಾಣಿ ಪ್ರಿಯ ಬಿಷ್ಣೋಯ್ ಸಮುದಾಯದ ಕ್ಷಮೆ ಕೇಳದಿದ್ದರೆ, ಅವರ ಕುಟುಂಬದವರನ್ನೂ, ಸಾಕು ನಾಯಿಗಳನ್ನೂ ಬಿಡುವುದಿಲ್ಲ ಎಂಬ ಬೆದರಿಕೆಯನ್ನು ಗ್ಯಾಂಗ್ ಪುನರಾವರ್ತಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಸೋಮವಾರ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶೂಟರ್ಗಳಿಗೆ ಬಿಷ್ಣೋಯ್ನ ಸಹಚರ ಎನ್ನಲಾದ ಅನಿಲ್ ಪಂಡಿತ್ನ ಸಂಪರ್ಕವಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದರು ಎನ್ನಲಾಗಿದೆ.
ಅನಿಲ್ ಪಂಡಿತ್ ಅಮೆರಿಕದಲ್ಲಿದ್ದಾನೆ ಎಂದು ವರದಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಸಂದೇಶ ಬಿಡುಗಡೆ ಮಾಡಿ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ.
ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲೂ ವಿಚಾರಣೆ ಸಾಧ್ಯವಾಗಿರಲಿಲ್ಲ
2024ರ ಅಕ್ಟೋಬರ್ನಲ್ಲಿ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಬಾಂದ್ರಾದಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿಯೂ ಪೊಲೀಸರು ಲಾರೆನ್ಸ್ ಬಿಷ್ಣೋಯ್ನನ್ನು ಆರೋಪಿಯಾಗಿ ಹೆಸರಿಸಿದ್ದರೂ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಇದರ ನಂತರ ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರಿಗೂ ಸುಲಿಗೆ ಬೆದರಿಕೆ ಬಂದಿತ್ತು ಎಂದು ವರದಿಯಾಗಿದೆ. ಟೈಗರ್ ಶ್ರಾಫ್ ಪ್ರಕರಣ ಸೇರಿದಂತೆ ಈ ಎಲ್ಲ ಪ್ರಕರಣಗಳಲ್ಲಿ ಬಿಷ್ಣೋಯ್ನನ್ನು ನೇರವಾಗಿ ವಿಚಾರಣೆ ನಡೆಸಲು ಸಾಧ್ಯವಾಗದಿರುವುದು ತನಿಖೆಗೆ ಸವಾಲಾಗಿದೆ. ಕಠಿಣ ಅಪರಾಧಿಗಳಿಂದ ಸಂಚಿನ ಹಿಂದಿನ ಮಾಹಿತಿ, ಹಣಕಾಸಿನ ಮೂಲಗಳು ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯ ಕುರಿತು ಮಾಹಿತಿ ಪಡೆಯಲು ಪೊಲೀಸ್ ಕಸ್ಟಡಿ ವಿಚಾರಣೆ ಅಗತ್ಯ ಎಂದು ಹಲವು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೋ ಮೂಲಕ ವಿಚಾರಣೆ ನಡೆಸುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ ಎಂಬುದು ಅವರ ವಾದ.
ಪರಿಣಾಮವಾಗಿ, ಪೊಲೀಸರು ಸಂಚಿನಲ್ಲಿ ಭಾಗಿಯಾದ ಕೆಳಹಂತದ ಆರೋಪಿಗಳು, ಹಣಕಾಸು ಒದಗಿಸಿದವರು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆ ಮಾಡಿದವರನ್ನು ಪತ್ತೆಹಚ್ಚುವುದರಲ್ಲೇ ತನಿಖೆಯನ್ನು ಸೀಮಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ
ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ ಎಂದು ಬಿಜೆಪಿ–ಶಿವಸೇನೆ–ಎನ್ಸಿಪಿ ಮೈತ್ರಿ ಸರ್ಕಾರ ಹೇಳಿದೆ.
ಇದೇ ವೇಳೆ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿ ಮಾಡಿ, ಲಾರೆನ್ಸ್ ಬಿಷ್ಣೋಯ್ಗೆ ನೀಡಿರುವ BNSS ಅಡಿಯ ರಕ್ಷಣೆಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.