'ಲೆಹ್ರಾ ದೋ ತಿರಂಗಾ' ಪ್ರತಿಭಟನೆ ಮರುದಿನವೂ ದೆಹಲಿಯಲ್ಲಿ ಮುಂದುವರಿದ ಬಿಗಿ ಭದ್ರತೆ
ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ 'ಲೆಹ್ರಾ ದೋ ತಿರಂಗಾ' ಪ್ರತಿಭಟನೆ ಬಳಿಕ ಶನಿವಾರವೂ ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದೆ. ಶುಕ್ರವಾರ ನಡೆದ ಸಿಜೆಪಿ ರಾಲಿಯಲ್ಲಿ ಸುಮಾರು 2,000 ಮಂದಿ ಭಾಗವಹಿಸಿದ್ದರು. ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಂತರ್ ಮಂತರ್, ಕನ್ನಾಟ್ ಪ್ಲೇಸ್ ಮತ್ತು ಪ್ರಮುಖ ಕಚೇರಿಗಳ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಚುನಾವಣಾ ಆಯೋಗದ ಮುಖ್ಯಸ್ಥರ (Election Commission chief) ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (Cockroach Janta Party), ವಿರೋಧ ಪಕ್ಷಗಳ ಮೈತ್ರಿಕೂಟದಿಂದ ಪ್ರತಿಭಟನೆ (Protest) ಮುಂದುವರಿಯುವ ಸಾಧ್ಯತೆ ಇರುವುದರಿಂದ ದೆಹಲಿಯಾದ್ಯಂತ (delhi) ಶನಿವಾರ ಕೂಡ ಬಿಗಿ ಪೊಲೀಸ್ ಭದ್ರತೆಯನ್ನು (police security) ಮುಂದುವರಿಸಲಾಗಿದೆ. 'ಲೆಹ್ರಾ ದೋ ತಿರಂಗಾ' ಪ್ರತಿಭಟನೆಯಲ್ಲಿ (Lehra Do Tiranga protest) ಶುಕ್ರವಾರ ಸುಮಾರು 2,000 ಮಂದಿ ಭಾಗವಹಿಸಿದ್ದ ಹಿನ್ನಲೆಯಲ್ಲಿ ಜಂತರ್ ಮಂತರ್ (Jantar Mantar), ಕನ್ನಾಟ್ ಪ್ಲೇಸ್ (Connaught Place) ಮತ್ತು ಪ್ರಮುಖ ಕಚೇರಿಗಳ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಲೆಹ್ರಾ ದೋ ತಿರಂಗಾ ಪ್ರತಿಭಟನೆಯ ಬಳಿಕ ದೆಹಲಿಯಲ್ಲಿ ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಬಿಗಿ ಭದ್ರತೆಯನ್ನು ಮುಂದುವರಿಸಲಾಗಿದೆ. ಜಂತರ್ ಮಂತರ್ನಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ದೆಹಲಿ ಪೊಲೀಸ್ ಪ್ರಧಾನ ಕಚೇರಿ, ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜೆನ್ ಝೀಗಳು ಹಿಂದುತ್ವದೊಂದಿಗೆ ಗುರುತಿಸಿಕೊಳ್ಳುತ್ತಾರೆಯೇ?: ಬಿಜೆಪಿ ಸಮಿತಿ ಹೇಳಿದ್ದೇನು?
ಸಿಜೆಪಿ, ಕಾಂಗ್ರೆಸ್ ಪಕ್ಷದಿಂದ ಯಾವುದೇ ದೊಡ್ಡ ಪ್ರತಿಭಟನೆಗಳ ಬಗ್ಗೆ ಇದುವರೆಗೆ ಘೋಷಣೆಯಾಗಿಲ್ಲ. ಆದರೂ ಜಂತರ್ ಮಂತರ್ನಲ್ಲಿ ಬ್ಯಾರಿಕೇಡ್ಗಳನ್ನು ಹಾಗೆಯೇ ಇರಿಸಲಾಗಿದೆ. ಅಶೋಕ ರಸ್ತೆ ವೃತ್ತ, ಟಾಲ್ಸ್ಟಾಯ್ ಮಾರ್ಗ ಮತ್ತು ಸಂಸದ್ ಮಾರ್ಗಗಳಲ್ಲಿರುವ ಮೂರು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 163ರ ಅಡಿಯಲ್ಲಿ ನವದೆಹಲಿ ಪ್ರದೇಶದಲ್ಲಿ ಗುಂಪುಗೂಡುವುದನ್ನು ನಿಷೇಧಿಸಿರುವುದರಿಂದ ಅಶೋಕ ರಸ್ತೆ ಮತ್ತು ಜೈ ಸಿಂಗ್ ರಸ್ತೆಯಲ್ಲಿ ಹೆಚ್ಚುವರಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.
ಪ್ರತಿಭಟನೆಗಳ ವೇಳೆ ಪೊಲೀಸರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಿಸಿ ಎಡಪಂಥೀಯ ಸಂಘಟನೆಗಳು ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಮಹಿಳಾ ಮೆರವಣಿಗೆ ನಡೆಸಬಹುದು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಪ್ರಧಾನ ಕಚೇರಿ ಮತ್ತು ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಯಾರಿಗೂ ಅನುಮತಿ ನೀಡಿಲ್ಲ. ದೆಹಲಿಯ ಮಧ್ಯಭಾಗದಲ್ಲಿ ಎಲ್ಲಿಯೂ ಗುಂಪುಗೂಡಲು ಅವಕಾಶವಿಲ್ಲ. ಯಾವುದೇ ಹಠಾತ್ ಪ್ರತಿಭಟನೆಯನ್ನು ನಿಭಾಯಿಸಲು ಭದ್ರತಾ ವ್ಯವಸ್ಥೆಗಳು ಸಿದ್ಧವಾಗಿವೆ ಎಂದು ಅವರು ತಿಳಿಸಿದರು.
ದೆಹಲಿಯಾದ್ಯಂತ ಸುಮಾರು 20,000ಕ್ಕೂ ಹೆಚ್ಚು ಕೇಂದ್ರ ಸಶಸ್ತ್ರ ಅರೆಸೇನಾ ಪಡೆ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪ್ರತಿಭಟನೆಗಳು ಮತ್ತು ಮೆರವಣಿಗೆಗಳನ್ನು ನಿಭಾಯಿಸಲು ಸುಮಾರು 10,000 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಮೀಸಲು ಪಡೆಯಾಗಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ದೆಹಲಿಯಲ್ಲಿ ವಿಶೇಷವಾಗಿ ಜಂತರ್ ಮಂತರ್, ಸಂಸದ್ ಮಾರ್ಗ, ಚುನಾವಣಾ ಆಯೋಗದ ಪ್ರಧಾನ ಕಚೇರಿ, ಕನ್ನಾಟ್ ಪ್ಲೇಸ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯ ಚುನಾವಣಾ ಆಯುಕ್ತ ಜ್ಞಾನ್ ಕುಮಾರ್ ಮತ್ತು ಇತರ ಪ್ರಮುಖ ಸಚಿವರ ನಿವಾಸಗಳ ಹೊರಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆದ "ಲೆಹರಾ ದೋ ತಿರಂಗಾ" ಪ್ರತಿಭಟನೆಯಲ್ಲಿ ಸುಮಾರು 2,000 ಜನರು ಕನ್ನಾಟ್ ಪ್ಲೇಸ್ ಮತ್ತು ಅದರ ಸುತ್ತಮುತ್ತ ಸೇರಿದ್ದರು. ಈ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದಿದ್ದ ಕಾರಣ ಗುರುವಾರದಿಂದಲೇ ಇಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ನೂರಾರು ಸಿಬ್ಬಂದಿ ಸೆಂಟ್ರಲ್ ಪಾರ್ಕ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಯಾರೂ ಒಳಗೆ ಪ್ರವೇಶಿಸದಂತೆ ಪಾರ್ಕ್ನ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಿದರು. ಪಾರ್ಕ್ನ ಹೊರಗೆ ಸುಮಾರು 200 ಸಿಬ್ಬಂದಿ ಮಾನವ ಸರಪಳಿಯನ್ನು ರಚಿಸಿದರು.
ಸಂಜೆ 5 ಗಂಟೆಯ ಬಳಿಕ ಪ್ರತಿಭಟನಾಕಾರರು ಸಣ್ಣ ಗುಂಪು ಕನ್ನಾಟ್ ಪ್ಲೇಸ್ನ ಒಳ ವೃತ್ತದ ಸುತ್ತಲೂ ಮೆರವಣಿಗೆ ನಡೆಸಿದರು. ಸಂಜೆ 7.30ರ ಸುಮಾರಿಗೆ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಲಾಯಿತು. ರಾತ್ರಿ 9 ಗಂಟೆ ವೇಳೆಗೆ ಮಂಡಿ ಹೌಸ್ ಮತ್ತು ಜನಪಥ್ನಿಂದ ಸುಮಾರು 150 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು.