ದೀಪಾವಳಿಯನ್ನು ಈದ್ಗೆ ಹೋಲಿಸಿ ಶುಭ ಕೋರಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿಯಿಂದ ಭಾರೀ ಟೀಕೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೀಪಾವಳಿಯನ್ನು "ಖುಷಿಗಳ ಈದ್" ಎಂದು ಬಣ್ಣಿಸಿ ಶುಭಕೋರಿರುವುದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಆಡಳಿತಾರೂಢ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಕಾಂಗ್ರೆಸ್ನ ತುಷ್ಟೀಕರಣ ರಾಜಕೀಯ ಮತ್ತು ಹಿಂದೂ ವಿರೋಧಿ ಮನಸ್ಥಿತಿಗೆ ಸಾಕ್ಷಿ ಎಂದು ಆರೋಪಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ದೀಪಾವಳಿಯನ್ನು (Deepavali) "ಖುಷಿಗಳ ಈದ್" ಎಂದು ಬಣ್ಣಿಸಿ ಶುಭಕೋರಿರುವುದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಆಡಳಿತಾರೂಢ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಕಾಂಗ್ರೆಸ್ನ ತುಷ್ಟೀಕರಣ ರಾಜಕೀಯ ಮತ್ತು ಹಿಂದೂ ವಿರೋಧಿ ಮನಸ್ಥಿತಿಗೆ ಸಾಕ್ಷಿ ಎಂದು ಆರೋಪಿಸಿದೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, "ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಇದು ಭಾರತದಾದ್ಯಂತ ಎಲ್ಲರೂ ಆಚರಿಸುವ ದೊಡ್ಡ ಹಬ್ಬ. ಇದಕ್ಕೆ ಒಂದೇ ಕಾರಣವೆಂದರೆ, ಇದು ಖುಷಿಗಳ ಒಂದು ಈದ್ (ಹಬ್ಬ) ಮತ್ತು ದೀರ್ಘಕಾಲದವರೆಗೆ ನಡೆಯುವ ಈದ್ ಇದಾಗಿದೆ" ಎಂದು ಹೇಳಿದ್ದರು.
ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಅವರು, ಕೋಟ್ಯಂತರ ಹಿಂದೂ ಭಕ್ತರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರಲು ಹಾಗೂ ಧಾರ್ಮಿಕ ತುಷ್ಟೀಕರಣದ ರಾಜಕಾರಣ ಮಾಡಲು ಕಾಂಗ್ರೆಸ್ ಹಿಂದೇಟು ಹಾಕುವುದಿಲ್ಲ ಎಂಬುದನ್ನು ಖರ್ಗೆ ಅವರ ಹೇಳಿಕೆ ಸಾಬೀತುಪಡಿಸಿದೆ ಎಂದು ಟೀಕಿಸಿದ್ದಾರೆ. ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, "ಇದು ಸ್ಪಷ್ಟ ತುಷ್ಟೀಕರಣ ಹಬ್ಬದ ರಾಜಕೀಯ. ಕಾಂಗ್ರೆಸ್ ಸನಾತನ ವಿರೋಧಿ ಹೇಳಿಕೆಗಳ ಸರಣಿಯನ್ನೇ ಮುಂದುವರಿಸಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಗಾಗಿ ಈ ರೀತಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
ಇನ್ನು AIMIM ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಕೂಡ ಖರ್ಗೆ ಹೇಳಿಕೆಯನ್ನು ಟೀಕಿಸಿದ್ದು, "ದೀಪಾವಳಿ ಮತ್ತು ಈದ್ ಎರಡೂ ಭಿನ್ನ ಮತ್ತು ಆಯಾ ಸಮುದಾಯದ ದೊಡ್ಡ ಹಬ್ಬಗಳು. ಈ ಎರಡೂ ಹಬ್ಬಗಳನ್ನು ಸಮೀಕರಿಸಿ ಮಾತನಾಡುವುದು ಕೇವಲ ನಿರ್ದಿಷ್ಟ ಸಮುದಾಯವನ್ನು ಓಲೈಸಲು ಮಾಡುವ ರಾಜಕೀಯ ಗಿಮಿಕ್" ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 84 ವರ್ಷದ ಹಿರಿಯ ನಾಯಕರಾದ ಖರ್ಗೆ ಅವರು ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಮಾತು ಹೇಳಿದ್ದಾರೆ ಎಂದಿದ್ದಾರೆ. 'ಈದ್' ಎಂಬ ಪದವನ್ನು ಕೇವಲ ಇಸ್ಲಾಮಿಕ್ ಹಬ್ಬದ ಅರ್ಥದಲ್ಲಲ್ಲದೆ, ಸಂಸ್ಕೃತಿಗಳನ್ನು ಮೀರಿದ 'ಸಂತೋಷದ ಆಚರಣೆ' ಎಂಬ ವಿಶಾಲ ಅರ್ಥದಲ್ಲಿ ಸಾಂಕೇತಿಕವಾಗಿ ಬಳಸಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.