ಎಲಾನ್ ಮಸ್ಕ್ ಹೇಳಿಕೆ ಉಲ್ಲೇಖಿಸಿ ಭಾರತದ ಆರ್ಥಿಕತೆಯ ಬಗ್ಗೆ ರಾಹುಲ್ ಗಾಂಧಿಗೆ ಪಾಠ ಮಾಡಿದ ಸಚಿವ ಕಿರಣ್ ರಿಜಿಜು
Minister Kiren Rijiju: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾರತದ ಆರ್ಥಿಕತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ರಾಹುಲ್ ಗಾಂಧಿ ಮಾಡಿದ್ದ ಟೀಕೆಗೆ ಉತ್ತರವಾಗಿ, ಭಾರತ ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಿಜಿಜು ಒತ್ತಿ ಹೇಳಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು-ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -
ನವದೆಹಲಿ, ಫೆ. 2: ʼʼನಾನು ಸಾಮಾನ್ಯವಾಗಿ ಭಾರತೀಯರಲ್ಲದವರು ಮಾಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ರಾಹುಲ್ ಗಾಂಧಿಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಎಲಾನ್ ಮಸ್ಕ್ (Elon Musk) ಅವರ ಮಾತನ್ನು ಉಲ್ಲೇಖಿಸಿದ್ದೇನೆ. ಸರ್ಕಾರವನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕು. ಆದರೆ ಭಾರತದ ಬಗ್ಗೆ ಹೀನಾಯವಾಗಿ ಮಾತನಾಡಬಾರದು. ಭಾರತದ ಸಾಧನೆಗಳನ್ನು ಎಂದಿಗೂ ತಗ್ಗಿಸಬಾರದುʼʼ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿಯ ಆರ್ಥಿಕ ನೀತಿಗಳ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಭಾರತದ ಆರ್ಥಿಕ ಸ್ಥಿತಿಗತಿ ಕುರಿತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು.
ಇಲ್ಲಿದೆ ಕಿರಣ್ ರಿಜಿಜು ಪೋಸ್ಟ್:
I normally do not react to statements which are not made by Indians. I'm quoting @elonmusk only to sensitise Rahul Gandhi ji that, while criticizing the govt is a democratic right, do not disparage India & never belittle India's achievement. Be a proud Indian. #ViksitBharat pic.twitter.com/b19NPMrkNY
— Kiren Rijiju (@KirenRijiju) February 1, 2026
ಭಾನುವಾರ ಎಲಾನ್ ಮಸ್ಕ್ ಹಂಚಿಕೊಂಡ ಪಟ್ಟಿಯೊಂದರಲ್ಲಿ 2026ರಲ್ಲಿ ಜಾಗತಿಕ ಜಿಡಿಪಿಯಲ್ಲಿ ಚೀನಾ ಮತ್ತು ಭಾರತ ಶೇಕಡಾ 43.6ರಷ್ಟು ಪಾಲು ಹೊಂದಲಿದೆ ಎಂದು ತಿಳಿಸಲಾಗಿದೆ. ಅಮೆರಿಕ ಶೇಕಡಾ 9.9 ಅಂದಾಜು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಪಟ್ಟಿಯು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ದತ್ತಾಂಶವನ್ನು ಉಲ್ಲೇಖಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ-ಪೆಸಿಫಿಕ್ ಪ್ರದೇಶವು ಜಾಗತಿಕ ಆರ್ಥಿಕತೆಗೆ ಶೇಕಡಾ 50ಕ್ಕಿಂತ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದೆ.
ನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ’ʼ: ರಾಹುಲ್ ಗಾಂಧಿ ಭೇಟಿ ಬಳಿಕ ಶಶಿ ತರೂರ್ ಹೇಳಿಕೆ
ಶಕ್ತಿಯ ಸಮತೋಲನ ಬದಲಾಗುತ್ತಿದೆ ಎಂದು ಮಸ್ಕ್ ಡೇಟಾವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ಭಾರತದ ಬೆಳವಣಿಗೆಯ ಪಥವನ್ನು ನಿಕಟವಾಗಿ ಗಮನಿಸುತ್ತಿರುವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿಯಾಗಿರುವ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯ ಈ ಹೇಳಿಕೆಯನ್ನು ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ.
ಭಾರತವನ್ನು ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿ ನೋಡಲಾಗುತ್ತದೆ. ವಾಸ್ತವವಾಗಿ, 2026ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತಕ್ಕೆ ಸಂಬಂಧಿಸಿದಂತೆ 2025–26 ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇಕಡಾ 0.7ರಷ್ಟು ಹೆಚ್ಚಿಸಿ ಶೇಕಡಾ 7.3ಕ್ಕೆ ಏರಿಸಿದೆ. ಅಲ್ಲದೆ ಐಎಂಎಫ್‌ನ ಸಂವಹನ ವಿಭಾಗದ ಮುಖ್ಯಸ್ಥೆ ಜೂಲೀ ಕೊಝಾಕ್ ಭಾರತವನ್ನು ಜಗತ್ತಿನ ಪ್ರಮುಖ ಬೆಳವಣಿಗೆಯ ಎಂಜಿನ್ ಎಂದು ಬಣ್ಣಿಸಿದ್ದಾರೆ.
ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026ರ ಕೇಂದ್ರ ಬಜೆಟ್ ಮಂಡಿಸಿದ ನಂತರ ರಾಹುಲ್ ಗಾಂಧಿ ನೀಡುವ ಅಭಿಪ್ರಾಯದ ನಂತರ ರಿಜಿಜು ಈ ಹೇಳಿಕೆ ನೀಡಿದ್ದಾರೆ. ನಿರುದ್ಯೋಗ, ರೈತರ ಸಂಕಷ್ಟ ಮತ್ತು ಮನೆಯ ಉಳಿತಾಯ ಕುಸಿಯುವಂತಹ ತುರ್ತು ಸಮಸ್ಯೆಗಳನ್ನು ಬಜೆಟ್ ಪರಿಹರಿಸಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.